ADVERTISEMENT

ಜೈಲಿಗೆ ಕಳುಹಿಸುವ ತಾಕತ್ತು ಇದೆ:MLA ಪ್ರದೀಪ್ ಈಶ್ವರ್ ವಿರುದ್ಧ ವೆಂಕಟಸ್ವಾಮಿ ಗರಂ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 14:36 IST
Last Updated 26 ನವೆಂಬರ್ 2024, 14:36 IST
ಪ್ರದೀಪ್ ಈಶ್ವರ್ 
ಪ್ರದೀಪ್ ಈಶ್ವರ್    

ಚಿಕ್ಕಬಳ್ಳಾಪುರ: ‘ಶಾಸಕನಾದ ತಕ್ಷಣ ದುರಹಂಕಾರ ಬರಬಾರದು. ಪರಿಶಿಷ್ಟರು ಮನಸ್ಸು ಮಾಡಿದರೆ ಜೈಲಿಗೆ ಕಳುಹಿಸುವ ತಾಕತ್ತು ಇದೆ’ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಶಾಸಕ ಪ್ರದೀಪ್  ಈಶ್ವರ್ ವಿರುದ್ಧ ಕೆಂಡಾಮಂಡಲರಾದರು.

ನಗರದಲ್ಲಿ ಮಂಗಳವಾರ ನಡೆದ ಸಮತಾ ಸೈನಿಕ ದಳದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಸಂಘಟನೆಯ ಮುಖಂಡರ ಬಗ್ಗೆ ಚಿಕ್ಕಬಳ್ಳಾಪುರದ ಹೊಸ ಶಾಸಕರು ಕೇವಲವಾಗಿ ಮಾತನಾಡಿದ್ದಾರೆ. ರೋಲ್‌ಕಾಲ್ ಎನ್ನುವ ಅವರ ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದರು.

‘ಶಾಸಕರು ಓಬವ್ವ ಜಯಂತಿಗೆ ಬರಲಿಲ್ಲ ಎನ್ನುವ ಬೇಸರವನ್ನು ಸಂಘಟನೆಯ ವೆಂಕಟರಮಣಪ್ಪ ವ್ಯಕ್ತಪಡಿಸಿದ್ದರು. ಆದರೆ ಶಾಸಕರು ದುರಹಂಕಾರದ ಮಾತುಗಳನ್ನು ಆಡಿದ್ದಾರೆ. ವೆಂಕಟರಮಣಪ್ಪ ಮನಸ್ಸು ಮಾಡಿದರೆ ಇವರನ್ನು ಜೈಲಿಗೆ ಕಳುಹಿಸುವ ತಾಕತ್ತು ಇದೆ. ಇನ್ನೊಮ್ಮೆ ದಲಿತ ಜನಾಂಗ ಮತ್ತು ನಮ್ಮ ಸಂಘಟನೆಯ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ’ ಎಂದರು.

ADVERTISEMENT

ಈ ಬಗ್ಗೆ ಶಾಸಕರು ಕೂಡಲೇ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಹೋರಾಟದ ಸ್ವರೂಪ ಬದಲಾವಣೆ ಮಾಡಿಕೊಳ್ಳುತ್ತೇವೆ. ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದಲಿತ ಮುಖಂಡರನ್ನು ಅವಮಾನಿಸಿದಾಗ ಅವರನ್ನು ಜಿಲ್ಲೆಯಿಂದ ಹೊರಗೆ ಹಾಕುವ ಕೆಲಸ ಮಾಡಿದೆವು ಎಂದರು. 

ಚಿಕ್ಕಬಳ್ಳಾಪುರ ಈ ಹಿಂದೆ ಮೀಸಲು ಕ್ಷೇತ್ರವಾಗಿತ್ತು. ಇಲ್ಲಿ ಆರ್‌ಪಿಐಗೆ ತನ್ನದೇ ಆದ ಶಕ್ತಿ ಇದೆ. ಇದೇ ರೀತಿಯಲ್ಲಿ ದುರಹಂಕಾರ ಪ್ರದರ್ಶಿಸಿದರೆ ನಿನ್ನ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.