ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶ ಯೋಗ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ನಾಗರ ಪಂಚಮಿಯ ನಾಗಾರಾಧನೆ ಕಾರ್ಯಕ್ರಮ ನಡೆಯಿತು.
ಬೆಂಗಳೂರು, ಚಿಕ್ಕಬಳ್ಳಾಪುರದ ಭಕ್ತರು ಮತ್ತು ಈಶ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಈಶ ಯೋಗ ಕೇಂದ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇವೆಗಳನ್ನು ನಡೆಸಿಕೊಟ್ಟರು.
ನಾಗಮಂಟಪದ ನಾಗನ ಮೂರ್ತಿಗೆ ಭಕ್ತರು ‘ಬೆಣ್ಣೆ ಸೇವೆ’ ಸಮರ್ಪಿಸಿದರು. ವಿಶೇಷವಾಗಿ ತಯಾರಿಸಿದ ಬೆಣ್ಣೆಯನ್ನು ಭಕ್ತರು ನಾಗನ ಮೇಲೆ ಲೇಪಿಸಿದರು. ದೀಪ ಅರ್ಪಣೆ, ನಾಗರ ಪಂಚಮಿ ಕಾರ್ಕೋಟಕ ಅರ್ಪಣೆ, ನಾಗರ ಪಂಚಮಿ ಸರ್ಪ ಸೇವೆ ಮತ್ತು ನಾಗ ದೋಷ ನಿವಾರಣ ಕ್ರಿಯೆಗಳು ಸಹ ನಡೆದವು.
ಹಳ್ಳಿಗಳ ಜನರು ನಾಗನಿಗೆ ಹಾಲು ಅರ್ಪಿಸಲು ನಾಗ ಮಂಟಪಕ್ಕೆ ನಡೆದುಕೊಂಡು ಬಂದರು. ಹಾಲಿನ ಅರ್ಪಣೆಯು ನಾಗನನ್ನು ಮೆಚ್ಚಿಸುತ್ತದೆ ಮತ್ತು ಸಮುದಾಯಕ್ಕೆ ನಾಗನ ಅನುಗ್ರಹ ಮತ್ತು ಆಶೀರ್ವಾದ ತರುತ್ತದೆ ಎಂಬ ನಂಬಿಕೆ ಇದೆ.
ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸೌಂಡ್ಸ್ ಆಫ್ ಈಶದ ಪ್ರದರ್ಶನಗಳು, ಆದಿಯೋಗಿ ದಿವ್ಯ ದರ್ಶನ ಕಾರ್ಯಕ್ರಮಗಳು ಜರುಗಿದವು.
2022ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ಇಲ್ಲಿ ನಾಗ ಮಂಟಪ ಪ್ರತಿಷ್ಠಾಪಿಸಿದರು. ‘ನಾಗ ಮಂಟಪ’ದಲ್ಲಿ, ಇದು ಎರಡನೇ ವರ್ಷದ ನಾಗರ ಪಂಚಮಿ ಆಚರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.