ADVERTISEMENT

ಚಿಕ್ಕಬಳ್ಳಾಪುರ: ‘ನಂದಿ’ ರೋಪ್‌ವೇಗೆ ಗ್ರಹಣ?

ಮಾರ್ಚ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದರೂ ನಡೆಯದ ಕೆಲಸಗಳು

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 6:23 IST
Last Updated 10 ಜುಲೈ 2023, 6:23 IST
ನಂದಿಗಿರಿಧಾಮದ ವ್ಯೂ ಪಾಯಿಂಟ್‌ 
ನಂದಿಗಿರಿಧಾಮದ ವ್ಯೂ ಪಾಯಿಂಟ್‌    

ಡಿ.ಎಂ.ಕುರ್ಕೆ ಪ್ರಶಾಂತ್

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ಕಳೆದ ಮಾರ್ಚ್ 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. 

ಹೀಗೆ ಭೂಮಿ ಪೂಜೆ ನೆರವೇರಿಸಿ ಮೂರೂವರೆ ತಿಂಗಳು ಪೂರ್ಣವಾಗಿದೆ. ಆದರೆ ಕಾಮಗಾರಿ ಮಾತ್ರ ಇಂದಿಗೂ ಆರಂಭವಾಗಿಲ್ಲ. ರೋಪ್ ವೇ ಕಾಮಗಾರಿಗೆ ಗ್ರಹಣ ಹಿಡಿಯಿತೇ ಎನ್ನುವ ಅನುಮಾನ ಪ್ರವಾಸಿಗರಲ್ಲಿ ಮತ್ತು ಚಿಕ್ಕಬಳ್ಳಾಪುರದ ಜನರಲ್ಲಿ ಮೂಡಿದೆ.

ADVERTISEMENT

ರೋಪ್ ವೇ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ ವೇ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಗೆ ₹93.40 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಸುಮಾರು 2.93 ಕಿ.ಮೀ ದೂರದ ರೋಪ್‌ವೇ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು.

ರೋಪ್‌ವೇ ನಿರ್ಮಾಣದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್‌ನಲ್ಲಿ 480 ದ್ವಿಚಕ್ರ, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್‌ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೊರೆಂಟ್, ಮಳಿಗೆಗಳ ನಿರ್ಮಾಣ–ಹೀಗೆ ರೋಪ್ ವೇ ಯೋಜನೆಯಲ್ಲಿ ಸೇರಿದ್ದವು.

ಈ ಯೋಜನೆಯಿಂದಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ದೇವನಹಳ್ಳಿ ಕೋಟೆ, ನಂದಿ, ಭೋಗನಂದೀಶ್ವರ, ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ್ಥ, ಮುದ್ದೇನಹಳ್ಳಿ ಮುಂತಾದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿವೆ ಎನ್ನುವ ನಿರೀಕ್ಷೆ ಸಹ ಇತ್ತು. ನಂದಿಗಿರಿಧಾಮದ ರೋಪ್ ವೇ ರಾಜ್ಯದ ಮೊದಲ ಯೋಜನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

2021ರ ಮಾರ್ಚ್‌ನಲ್ಲಿ ರೋಪ್ ವೇ ಸಂಬಂಧ ಆಗಿನ ಪ್ರವಾಸೋದ್ಯಮ ಸಚಿವ ಯೋಗೀಶ್ವರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ವರ್ಷದೊಳಗೆ ಯೋಜನೆ ಪೂರ್ಣಕ್ಕೆ ನಿರ್ಧಾರ ಮಾಡಲಾಗಿತ್ತು. ಆ ಸಭೆಯಲ್ಲಿ ಐಡೇಕ್ ಸಂಸ್ಥೆಯ ಅಧಿಕಾರಿಗಳು ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಾಣ ಯೋಜನೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದ್ದರು.

ಆ ಸಭೆ ನಡೆದು ಎರಡು ವರ್ಷವಾದರೂ ರೋಪ್ ವೇಗೆ ಸಂಬಂಧಿಸಿದ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ರೋಪ್ ವೇ ನಿರ್ಮಾಣದಿಂದ ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ನಿರೀಕ್ಷೆ ಅಪಾರವಾಗಿದೆ. ನಂದಿಗಿರಿಧಾಮಕ್ಕೆ ಪ್ರವಾಸಿಗರು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಸರ್ಕಾರ ರೋಪ್ ವೇ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎನ್ನುತ್ತಾರೆ ಪ್ರವಾಸಿಗರು ಹಾಗೂ ಚಿಕ್ಕಬಳ್ಳಾಪುರ ನಾಗರಿಕರು.

₹93.40 ಕೋಟಿ ವೆಚ್ಚದ ಅಂದಾಜು ಯೋಜನೆ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಮಗಾರಿ ರೋಪ್ ವೇಯಿಂದ ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.