ADVERTISEMENT

ನಂದಿ ಆಂಜನಪ್ಪ ಕಾಂಗ್ರೆಸ್ ಅಭ್ಯರ್ಥಿ

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ: ಅಳೆದುತೂಗಿ ತಮ್ಮ ಹುರಿಯಾಳನ್ನು ಘೋಷಿಸಿದ ‘ಕೈ’ ಹೈಕಮಾಂಡ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:02 IST
Last Updated 1 ಡಿಸೆಂಬರ್ 2019, 11:02 IST
ನಂದಿ ಆಂಜನಪ್ಪ
ನಂದಿ ಆಂಜನಪ್ಪ   

ಚಿಕ್ಕಬಳ್ಳಾಪುರ: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಬುಧವಾರ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಖಂಡ ನಂದಿ ಎಂ.ಆಂಜನಪ್ಪ ಅವರಿಗೆ ಟಿಕೆಟ್‌ ನೀಡಿದೆ.

ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಅವರ ರಾಜೀನಾಮೆ ಮತ್ತು ಅನರ್ಹತೆ ಬೆನ್ನಲ್ಲೇ ಕ್ಷೇತ್ರದ ಕಾಂಗ್ರೆಸ್‌ ಪಾಳೆಯ ‘ಕವಲು’ ದಾರಿಗೆ ತಲುಪಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಪಕ್ಷ ನಿಷ್ಠೆ ಮೆರೆಯಬೇಕೋ ಅಥವಾ ಸುಧಾಕರ್ ಅವರನ್ನು ಬೆಂಬಲಿಸಬೇಕೋ ಎಂಬ ತೊಳಲಾಟ ಸಾಕಷ್ಟು ಜನರನ್ನು ಕಾಡಿತ್ತು. ವಿಶೇಷವಾಗಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ಮನೆ ಮಾಡಿತ್ತು.

ಕಾಂಗ್ರೆಸ್‌ ಸುಧಾಕರ್ ಅವರನ್ನು ಹೊರಗೆ ಹಾಕಿದ ಬೆನ್ನಲ್ಲೇ, ಈ ಹಿಂದೆ ಸುಧಾಕರ್ ಅವರ ಧೋರಣೆಯಿಂದ ಬೇಸತ್ತು ಪಕ್ಷದಿಂದ ದೂರ ಸರಿದಿದ್ದ ಅನೇಕ ನಾಯಕರು ಖುಷಿಯಿಂದಲೇ ಪಕ್ಷದತ್ತ ದೌಡಾಯಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು.

ADVERTISEMENT

ಸುಧಾಕರ್‌ ಕಾಂಗ್ರೆಸ್‌ನಲ್ಲಿ ಇರುವವರೆಗೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮುಖಂಡರಾದ ನಂದಿ ಆಂಜನಪ್ಪ, ಜಿ.ಎಚ್‌.ನಾಗರಾಜ್, ಕೆ.ವಿ.ನವೀನ್‌ ಕಿರಣ್ ಸೇರಿದಂತೆ ಪಕ್ಷದಲ್ಲಿಯೇ ಇದ್ದ ಯಲುವಹಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ ಅವರು ನಾವೆಲ್ಲರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಂದು ಘೋಷಿಸಿಕೊಂಡಿದ್ದರು.

ಎಲ್ಲ ಆಕಾಂಕ್ಷಿಗಳು ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಉಪ ಚುನಾವಣೆ ವೀಕ್ಷಕರು, ಶಾಸಕರಾದ ಎನ್‌.ಎಚ್‌.ಶಿವಶಂಕರರೆಡ್ಡಿ, ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಕೂಡ ಮುಗಿಸಿದ್ದಾರೆ. ಜತೆಗೆ ತಮ್ಮಲ್ಲಿ ಯಾರಿಗೇ ಟಿಕೆಟ್‌ ದೊರೆತರೂ ತಾವೆಲ್ಲರೂ ಸಂಘಟಿತರಾಗಿ ದುಡಿದು ಕಾಂಗ್ರೆಸ್‌ ಗೆಲ್ಲಿಸುತ್ತೇವೆ ಎನ್ನುವ ಮಾತುಗಳನ್ನು ಕೂಡ ಆಡಿದ್ದಾರೆ. ಹೀಗಾಗಿ, ಸದ್ಯ ಉಳಿದ ಆಕಾಂಕ್ಷಿಗಳ ನಿಷ್ಠೆಯ ಮೇಲೆ ಜನರ ಚಿತ್ತ ಹರಿದಿದೆ.

ಯಾರೀ ಆಂಜನಪ್ಪ?

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಯ ಆಂಜನಪ್ಪ ಅವರು ಕೃಷಿಕರು, ರಿಯಲ್ ಎಸ್ಟೇಟ್ ಉದ್ಯಮಿ ಕೂಡ ಆಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು 1980ರ ಕಾಲಘಟ್ಟದಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕರಾಗಿ ಗುರುತಿಸಿಕೊಂಡವರು.

ಇವರ ಕ್ರಿಯಾಶೀಲತೆ ಕಂಡು ದೇವರಾಜ ಅರಸು ಅವರು ಇವರನ್ನು ಮೊದಲ ಬಾರಿ ಎನ್‌ಎಸ್‌ಯುಐ ಪದಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಜತೆಗೆ ತಮ್ಮ ‘ಕ್ರಾಂತಿರಂಗ’ ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ಕೂಡ ಮಾಡಿದ್ದರು. ಅರಸು ಅವರ ನಿಧನದ ಬಳಿಕ ಕ್ರಾಂತಿ ರಂಗ ಜನತಾ ಪಕ್ಷದೊಂದಿಗೆ ವಿಲೀನವಾದಾಗ ಆಂಜನಪ್ಪ ಅವರು ಕಾಂಗ್ರೆಸ್ ಸೇರಿದ್ದರು.

1989ರಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಆಂಜನಪ್ಪವರು ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು 15 ವರ್ಷ ನಿರ್ದೇಶಕರಾಗಿದ್ದರು. ಒಂದು ಬಾರಿ ಉಪಾಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

2009ರಲ್ಲಿ ಕಾಂಗ್ರೆಸ್ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಆಂಜನಪ್ಪ ಅವರು ತಮ್ಮ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಬಯಸಿದ್ದರು. 2012ರಲ್ಲಿ ಜಿಲ್ಲೆ ಬರ ಪೀಡಿತವಾದಾಗ ಸುಮಾರು ಎಂಟು ತಿಂಗಳು ಕ್ಷೇತ್ರದಾದ್ಯಂತ ತಮ್ಮ ಸ್ವಂತ ದುಡ್ಡಿನಲ್ಲಿ ಜನರಿಗೆ ಉಚಿತ ಪಡಿತರ ವಿತರಿಸಿ ಗಮನ ಸೆಳೆದಿದ್ದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಆಂಜನಪ್ಪ ಅವರು ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೊನೆಯ ಕ್ಷಣದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್‌ ನೀಡಿದ್ದು ಇವರನ್ನು ಕೆರಳಿಸಿತ್ತು. 2015ರ ವರೆಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಆಂಜಿನಪ್ಪ ಅವರು ಬಳಿಕ ಬೇಸತ್ತು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡು, ಜೆಡಿಎಸ್ ಬೆಂಬಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.