ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣ ಎನಿಸಿರುವ ತಾಲ್ಲೂಕಿನ ನಂದಿ ಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದೆ.
ರೋಪ್ ವೇ ನಿರ್ಮಾಣ ಕಾಮಗಾರಿಗೆ ನಿಗದಿಗೊಳಿಸಿರುವ ಗಿರಿಧಾಮದ ಮೇಲ್ಭಾಗದಲ್ಲಿ (ಅಪ್ಪರ್ ಟರ್ಮಿನಲ್) ತೋಟಗಾರಿಕೆ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ತೀರ್ಮಾನಕೈಗೊಂಡಿದ್ದು ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ ಎಂದು ಮೂಲಗಳು 'ಪ್ರಜಾವಾಣಿ'ಗೆ ಖಚಿತಪಡಿಸಿವೆ.
ಅಪ್ಪರ್ ಟರ್ಮಿನಲ್ ಜಾಗವು ಉದ್ಯಾನವನಗಳ ಸಂರಕ್ಷಣಾ ಅಧಿನಿಯಮದ ವ್ಯಾಪ್ತಿಯಲ್ಲಿ ಇತ್ತು. ಈ ಜಾಗವನ್ನು ಈ ಜಾಗವನ್ನು ಸಚಿವ ಸಂಪುಟದ ಒಪ್ಪಿಗೆ ಮೇರೆಗೆ ಕಾಯ್ದೆಯಲ್ಲಿ ಮಾರ್ಪಾಟು ತಂದು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯಿಂದ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಇದು ರೋಪ್ ವೇ ಕಾಮಗಾರಿ ವಿಚಾರದಲ್ಲಿ ಪ್ರಮುಖತೀರ್ಮಾನವಾಗಿದೆ. ನಂದಿಗಿರಿಧಾಮದಲ್ಲಿ ಸದ್ಯ ಇರುವವಾಹನ ನಿಲುಗಡೆ ಜಾಗವು ಅಪ್ಪರ್ ಟರ್ಮಿನಲ್ ಸ್ಥಳ ಎನಿಸಿದೆ. ಈ ಜಾಗ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಇತ್ತು. ಈಗ ಈ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಲಾಗುತ್ತಿದೆ. ಜಾಗದ ವಿಚಾರವಾಗಿಯೇ ಸಮಸ್ಯೆಗಳು ಎದುರಾಗಿರುವ ಕಾರಣ ರೋಪ್ ವೇ ಕಾಮಗಾರಿ ನನೆಗುದಿಗೆ ಬಿದ್ದಿದೆ. ರೋಪ್ ವೇ ಕಾಮಗಾರಿಯ ಆರಂಭದ ಸ್ಥಳ ಅಂದರೆ ಕೆಳಭಾಗದಲ್ಲಿ 7 ಎಕರೆ ಜಾಗವನ್ನು ರೋಪ್ ವೇ ಅಗತ್ಯವಿತ್ತು.
ಈ ಜಾಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಿದೆ. ರೋಪ್ ವೇ ಕಾಮಗಾರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ 1.32 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಯು ಗುತ್ತಿಗೆದಾರರಿಗೆ ಹಸ್ತಾಂತರಿಸಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ 3.20 ಎಕರೆಯೂ ಹಸ್ತಾಂತರಕ್ಕೆ ಸಿದ್ದವಿದೆ. ಉಳಿದ 1.28 ಎಕರೆ ಜಾಗವನ್ನು ಮಾತ್ರ ರೋಪ್ ವೇ ಕಾಮಗಾರಿಗೆ ನೀಡಬೇಕಾಗಿದೆ. ಈ ಜಮೀನಿನ ವಿಚಾರದ ನ್ಯಾಯಾಲಯದಲ್ಲಿ ಇದ್ದು ಸಮಸ್ಯೆ ಶೀಘ್ರ ಪರಿಹಾರ ಆಗುವ ನಿರೀಕ್ಷೆ ಇದೆ.
ನಂದಿ ಗಿರಿಧಾಮದಲ್ಲಿ 2023ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರೋಪ್ ವೇ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಈ ಶಂಕುಸ್ಥಾಪನೆ ಕಾಮಗಾರಿ ನಡೆದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು.
ನಂತರ ಸರ್ಕಾರ ಬದಲಾವಣೆ ಆಯಿತು. ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾದರು. ಜಿಲ್ಲೆಯಲ್ಲಿ ರೋಪ್ ವೇ ಕುರಿತು ಚರ್ಚೆಗಳು ಎದುರಾದ ಸಮಯದಲ್ಲಿ, 'ಈ ಹಿಂದಿನ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬರಿ ಶಂಕುಸ್ಥಾಪನೆ ಮಾತ್ರ ಮಾಡಿದ್ದರು. ಜಮೀನಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಿಲ್ಲ ಎಂದು ಡಾ.ಎಂ.ಸಿ.ಸುಧಾಕರ್, ಹಿಂದಿನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ರೋಪ್ ವೇ ನಿರ್ಮಾಣ ಕಾಮಗಾರಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸುವುದಾಗಿ ತಿಳಿಸುತ್ತಿದ್ದರು.
ಕಾಯ್ದೆಗೆ ತಿದ್ದುಪಡಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಬೆಟ್ಟದ ವ್ಯಾಪ್ತಿಯ ಎರಡು ಎಕರೆ ಪ್ರದೇಶವನ್ನು ಅಭಿವೃದ್ಧಿ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿದೆ. ಈ ಉದ್ದೇಶಕ್ಕಾಗಿ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ– 2024’ ಅನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಸದನಗಳ ಅನುಮೋದನೆ ಪಡೆದುಕೊಂಡರು. 30 ವರ್ಷಗಳ ಅವಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಿಸಲು ಮೇಲು ಮಾರ್ಗಾಂತ್ಯ ಸ್ಥಳದಲ್ಲಿ ಅಭಿವೃದ್ಧಿಯ ಉದ್ದೇಶಕ್ಕಾಗಿ ಎರಡು ಎಕರೆಯನ್ನು ಬಳಸಿಕೊಳ್ಳಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಉತ್ತರದಲ್ಲಿ ವಾಹನ ನಿಲುಗಡೆ ಇರುವ ದಕ್ಷಿಣದಲ್ಲಿ ಅರ್ಕಾವತಿ ನದಿಯ ಉಗಮ ಸ್ಥಳದಲ್ಲಿರುವ ಬೆಟ್ಟದ ಇಳಿಜಾರು ಪೂರ್ವದಲ್ಲಿ ಎರಡನೇ ಕೋಟೆ ಗೋಡೆ ಪಶ್ಚಿಮದಲ್ಲಿ ಮೊದಲನೇ ಕೋಟೆ ಗೋಡೆಯ ಚಕ್ಕುಬಂದಿ ಹೊಂದಿರುವ ನಂದಿ ಬೆಟ್ಟದ ಸರ್ವೆ ನಂ.3ರಲ್ಲಿನ ಎರಡು ಎಕರೆ ಪ್ರದೇಶವನ್ನು ‘ಮಾರ್ಗಾಂತ್ಯ ಸ್ಥಳ’ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಸೂದೆ ಅವಕಾಶ ಕಲ್ಪಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.