ಚಿಕ್ಕಬಳ್ಳಾಪುರ: ನಂದಿಗಿರಿಧಾಮಕ್ಕೆ ರೋಪ್ ವೇ ನಿರ್ಮಾಣದ ವಿಚಾರವಾಗಿ ಪ್ರಕ್ರಿಯೆಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ರೋಪ್ ವೇ ನಿರ್ಮಾಣ ಸಂಬಂಧ ಬೆಂಗಳೂರಿನ ರಾಜ್ಯ ಉನ್ನತ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಶೀಲ್ದಾರ್ ಅನಿಲ್ ಹಾಗೂ ಪ್ರವಾಸೋದ್ಯಮ, ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ರೋಪ್ ವೇ ಯೋಜನೆ, ಕಾಮಗಾರಿ ಪ್ರಾರಂಭಕ್ಕೆ ಅಗತ್ಯವಿರುವ ಭೂಮಿ, ಸ್ವಾಧೀನ ಪ್ರಕ್ರಿಯೆ, ಪರಿಸರ ಇಲಾಖೆಯ ಅನುಮತಿ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಯಾವುದೇ ಅಡೆತಡೆಗಳು ಇದ್ದರೂ ಸಮಸ್ಯೆಗಳನ್ನು ಪರಿಹರಿಸಬೇಕು. ಇದು ಮಹತ್ವದ ಯೋಜನೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರೋಪ್ ವೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಚುನಾವಣೆಯ ಸಮಯದಲ್ಲಿ ಭೂಮಿ ಪೂಜೆ ನಡೆದ ಕಾರಣ ಇದು ರಾಜಕೀಯವಾಗಿ ಬಳಕೆ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಗಿರಿಧಾಮಕ್ಕೆ ಭೇಟಿ ನೀಡಿದ ಸಮಯಲ್ಲಿ ರೋಪ್ ವೇ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ತಿಳಿಯಲಾಗುವುದು ಎಂದಿದ್ದರು. ಆದರೆ ಇಂದಿಗೂ ರೋಪ್ ವೇ ಕಾಮಗಾರಿಗಳು ಆರಂಭವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.