ADVERTISEMENT

ನಂದಿಗಿರಿಧಾಮಕ್ಕೆ ರೋಪ್ ವೇ; ಪ್ರವಾಸೋದ್ಯಮ ಸಚಿವ ಯೋಗೀಶ್ವರ್ ನೇತೃತ್ವದಲ್ಲಿ ಸಭೆ

ನಂದಿಗಿರಿಧಾಮಕ್ಕೆ ರೋಪ್ ವೇ; ಪ್ರವಾಸೋದ್ಯಮ ಸಚಿವ ಯೋಗೀಶ್ವರ್ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:10 IST
Last Updated 5 ಮಾರ್ಚ್ 2021, 15:10 IST

ಚಿಕ್ಕಬಳ್ಳಾಪುರ: ನಂದಿಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಐಡೇಕ್ ಸಂಸ್ಥೆಯ ಅಧಿಕಾರಿಗಳು ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಾಣ ಯೋಜನೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ನಂದಿ ಬೆಟ್ಟದ ಕೆಳಗಡೆ ಅಂದಾಜು 25 ಎಕರೆಯಲ್ಲಿ ವಾಹನ ನಿಲುಗಡೆ, ಫುಡ್‍ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು, ವೈನ್‍ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿಗರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು.

ADVERTISEMENT

ಒಮ್ಮೆಗೆ 10 ಪ್ರಯಾಣಿಕರು ಕೇಬಲ್ ಕಾರಿನಲ್ಲಿ ಬೆಟ್ಟ ತಲುಪಬಹುದು. ಕೇಂದ್ರ ಜಲಸಾರಿಗೆ ಇಲಾಖೆಯು ಶೇ 20ರಷ್ಟು ಹಣವನ್ನು ಈ ಯೋಜನೆಗೆ ನೀಡಲಿದೆ. ಈ ಯೋಜನೆಯು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಸರಹದ್ದಿನಲ್ಲಿ ಬರಲಿದೆ.

ಅಗತ್ಯ ಜಮೀನು ಸ್ವಾಧೀನಪಡಿಸಿಕೊಂಡು ನೀಡುವಂತೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಇದು ಖಾಸಗಿ ಸಹಭಾಗಿತ್ವದ ಯೋಜನೆಯಾಗಿದೆ. ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಕಳೆದ 30 ವರ್ಷಗಳಿಂದ ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಿಸುವ ಬಗ್ಗೆ ಮಾತನಾಡಲಾಗುತ್ತಿದೆ. ನಟ ಶಂಕರನಾಗ್ ಮೂರು ದಶಕಗಳ ಹಿಂದೆಯೇ ಈ ಯೋಜನೆಯ ಕನಸು ಕಂಡಿದ್ದರು. ಇದೀಗ ಕಾಲ ಕೂಡಿಬಂದಿದೆ. ಮುಂದಿನ ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್‍ವೇ ನಿರ್ಮಿಸಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.

ಎರಡನೇ ಹಂತದಲ್ಲಿ ನಂದಿ ಬೆಟ್ಟ ಹಾಗೂ ಸ್ಕಂದಗಿರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರೋಪ್‍ವೇ ನಿರ್ಮಾಣ ಮಾಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಿವಗಂಗೆ, ಮಧುಗಿರಿಯ ಏಕಶಿಲಾ ಬೆಟ್ಟ ಹಾಗೂ ಗುಂಡಿಬಂಡೆಯ ಆವಲಬೆಟ್ಟಗಳಿಗೆ ರೋಪ್‍ವೇ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇ‍ಶಕ ವಿಜಯ ಶರ್ಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಐಡೆಕ್ ಸಂಸ್ಥೆಯ ಅಧಿಕಾರಿಗಳು, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಹಶೀಲ್ದಾರ್‌, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.