ADVERTISEMENT

ಮೈಸೂರು ದಸರಾ; ಸ್ತಬ್ಧಚಿತ್ರವಾಗಿ ‘ನಂದಿ ರೋಪ್ ವೇ’

ಗಮನ ಸೆಳೆಯಲಿದೆಯೇ ಜಿಲ್ಲೆಯ ಟ್ಯಾಬ್ಲೊ

ಡಿ.ಎಂ.ಕುರ್ಕೆ ಪ್ರಶಾಂತ
Published 25 ಸೆಪ್ಟೆಂಬರ್ 2024, 6:23 IST
Last Updated 25 ಸೆಪ್ಟೆಂಬರ್ 2024, 6:23 IST
ಪ್ರಕಾಶ್ ಜಿ.ಟಿ. ನಿಟ್ಟಾಲಿ
ಪ್ರಕಾಶ್ ಜಿ.ಟಿ. ನಿಟ್ಟಾಲಿ   

ಚಿಕ್ಕಬಳ್ಳಾಪುರ: ಪ್ರತಿ ವರ್ಷದ ನಾಡ ಹಬ್ಬ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಸ್ತಬ್ಧಚಿತ್ರಗಳ ಮೆರವಣಿಗೆ. ವಿಜಯ ದಶಮಿಯ ದಿನ ಜಂಜೂ ಸವಾರಿಯ ಜೊತೆಗೆ ಸ್ತಬ್ಧಚಿತ್ರಗಳ ಮೆರವಣಿಗೆ ಸಹ ಸಾಗಲಿದೆ. 

ಪ್ರತಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗಳು ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಬೆಟ್ಟ, ದೇಗುಲ, ವಿಚಾರಗಳು, ಮಹನೀಯರು, ದಾರ್ಶನಿಕರು, ಸ್ಥಳಗಳನ್ನು ಆಧರಿಸಿ ಸ್ತಬ್ಧಚಿತ್ರಗಳನ್ನು ರೂಪಿಸುತ್ತವೆ.

ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ‘ನಂದಿಬೆಟ್ಟಕ್ಕೆ ರೋಪ್ ವೇ’ ಸ್ತಬ್ಧಚಿತ್ರ ರೂಪಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಇದರ ಜವಾಬ್ದಾರಿಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನೀಡಲಾಗಿದೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಪ್ರಖ್ಯಾತ ನಂದಿಬೆಟ್ಟಕ್ಕೆ ಇನ್ನೂ ರೋಪ್ ವೇ ಕನಸು ಈಡೇರಿಲ್ಲ. ರೋಪ್ ವೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರಂಭಿಕ ಹೆಜ್ಜೆ ಇಡಲಾಗಿದೆ. ಈಗ ನಾಡಿಗೆ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ರೋಪ್ ವೇ ಸ್ತಬ್ಧಚಿತ್ರವಾಗಿ ಅನಾವರಣಗೊಳ್ಳಲಿದೆ.

ದಸರಾ ಜಂಬೂಸವಾರಿಗೆ ಮತ್ತಷ್ಟು ಮೆರುಗು ನೀಡುವ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಈಗಾಗಲೇ ಚುರುಕಿನ ತಯಾರಿಗಳ ಸಹ ನಡೆಯುತ್ತಿವೆ. ಈ ಬಾರಿ 40ರಿಂದ 42 ಸ್ತಬ್ಧ ಚಿತ್ರಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಹೆಚ್ಚು ಸಮಯಾವಕಾಶ ದೊರಕಿಸಲು ದಸರಾ ಸ್ತಬ್ಧ ಚಿತ್ರ ಉಪ ಸಮಿತಿ ಚಿಂತಿಸಿದೆ.‌ ಈಗಾಗಲೇ ಜಿಲ್ಲೆಯಿಂದ ಪ್ರಸ್ತುತ ಪಡಿಸಲಿರುವ ಮಾದರಿಗಳನ್ನು ಉಪಸಮಿತಿಗೆ ಕಳುಹಿಸಿದ್ದಾರೆ.  

ನಂದಿಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ಕಾಮಗಾರಿಗೆ ರಾಜ್ಯ ಸರ್ಕಾರವು ಸಹ ಆಸಕ್ತಿ ತೋರಿದೆ. ಬೆಟ್ಟದ ವ್ಯಾಪ್ತಿಯ ಎರಡು ಎಕರೆಯನ್ನು ಅಭಿವೃದ್ಧಿಪಡಿಸಲು ಮತ್ತು ರೋಪ್ ವೇಗೆ ಬಳಸಲು ಸರ್ಕಾರ ಮುಂದಾಗಿದೆ. ಈ ಉದ್ದೇಶದಿಂದ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ–2024’ ಅನ್ನು ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಸಹ ಪಡೆಯಲಾಗಿದೆ.

ಬೆಟ್ಟದ ಕೆಳಭಾಗದ ವಾಹನ ನಿಲುಗಡೆ ಸ್ಥಳದಲ್ಲಿ ಸಣ್ಣ ಪುಟ್ಟ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಹೀಗೆ ರೋಪ್ ವೇಗೆ ಸಂಬಂಧಿಸಿದಂತೆ ಒಂದೊಂದೇ ಕೆಲಸಗಳು ಚಾಲನೆಗೊಳ್ಳುತ್ತಿವೆ. ನಂದಿಗಿರಿಧಾಮಕ್ಕೆ ರೋಪ್ ವೇ ಜಾರಿಯಾದರೆ ರಾಜ್ಯದಲ್ಲಿ ಜಾರಿಯಾದ ಮೊದಲ ರೋಪ್ ವೇ ಎನ್ನುವ ಹೆಗ್ಗಳಿಕೆ ಹೊಂದಲಿದೆ. 

ಹೀಗೆ ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಗೆ ಮತ್ತು ನಾಡಿಗೆ ಪ್ರಮುಖವಾಗಿರುವ ನಂದಿಬೆಟ್ಟದ ರೋಪ್ ವೇ ಈ ಬಾರಿ ಸ್ತಬ್ಧಚಿತ್ರವಾಗಿ ಮೂಡಲಿದೆ.

ಸೆ.29ರಿಂದ ಸ್ತಬ್ಧಚಿತ್ರಗಳನ್ನು ರೂಪಿಸಲಾಗುತ್ತದೆ. ಮೈಸೂರಿನ ಎಪಿಎಂಸಿ ಯಾರ್ಡ್‌ನಲ್ಲಿ ನಂದಿಬೆಟ್ಟಕ್ಕೆ ರೋಪ್ ಸ್ತಬ್ಧ ಚಿತ್ರ ರೂಪು ಪಡೆಯಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಕೆಲಸಗಳು ಪೂರ್ಣಗೊಂಡಿದ್ದು ಯೋಜನೆಗೆ ಅಂತಿಮ ಸ್ಪರ್ಶ ಕೊಡಲಾಗುತ್ತಿದೆ. ಸ್ತಬ್ಧಚಿತ್ರಕ್ಕೆ ಈಗಾಗಲೇ ಟೆಂಡರ್ ಸಹ ಕರೆಯಲಾಗಿದೆ. 

ಹೇಗಿರಲಿದೆ ಸ್ತಬ್ಧಚಿತ್ರ: ‘ನಂದಿ ರೋಪ್ ವೇ ವಿಷಯಾಧಾರಿತವಾಗಿ ರೂಪುಗೊಳ್ಳುತ್ತಿದೆ. ಬೆಟ್ಟ, ಸುರಂಗಗಳ ಸಾಲು, ಪ್ರಾಣಿ ಪಕ್ಷಿಗಳನ್ನು ಇದರಲ್ಲಿ ಸ್ಥಾನ ಪಡೆಯಲಿವೆ. ಈ ಪ್ರದರ್ಶನವು ಡಿಜಿಟಲ್‌ ರೂಪದಲ್ಲಿ ಇರಲಿದೆ. ಇಲ್ಲಿಂದ ಹೊರಗೆ ಬಂದ ನಂತರ ಪ್ರಾಣಿಗಳು, ಐಸ್ ಲ್ಯಾಂಡ್, ಅರಣ್ಯಗಳನ್ನು ಸಹ ಕಾಣಬಹುದು’ ಎಂದು ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪನಿರ್ದೇಶಕಿ ನಿಶಾತ್ ಆಯುಶಾ ತಿಳಿಸಿದರು.

ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಭೆಗಳು ಸಹ ನಡೆದಿವೆ. ಆ ಸಭೆಗಳಲ್ಲಿ ಚರ್ಚಿಸಿದ ನಂತರವೇ ರೋಪ್ ವೇ ಸ್ತಬ್ಧಚಿತ್ರ ನಿರ್ಮಾಣಕ್ಕೆ ನಿಶಾನೆ ದೊರೆತಿದೆ. 

ಸೆ.29ರಿಂದ ಸ್ತಬ್ಧಚಿತ್ರಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಅ.11ರ ಸಂಜೆ 5ರ ವೇಳೆಗೆ ಇವು ‍ಪೂರ್ಣವಾಗಿ ಸಿದ್ಧಗೊಳ್ಳಬೇಕಾಗಿದೆ. 12ರಂದು ಮೆರವಣಿಗೆ ನಡೆಯಲಿದೆ.

ಈ ಹಿಂದಿನ ಸ್ತಬ್ಧಚಿತ್ರಗಳು ಇವು: ಕಳೆದ ವರ್ಷದ ಜಿಲ್ಲೆಯ ಚಿಂತಾಮಣಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೈವಾರ, ಕೈಲಾಸಗಿರಿ ಹಾಗೂ ಮುರಗಮಲ್ಲ ದರ್ಗಾ ಸಂಗಮಗೊಂಡಿರುವ ಆಕರ್ಷಕವಾದ ಸ್ತಬ್ಧಚಿತ್ರವನ್ನು ಜಿಲ್ಲಾ ಪಂಚಾಯಿತಿ ರೂಪಿಸಿತ್ತು. ಇದು ನಾಡಿನ ಭಾವೈಕ್ಯದ ಸಂದೇಶ ಸಾರಿತು.   

ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರಗಳು ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದಿವೆ. ದಕ್ಷಿಣ ಭಾರತ ಜಲಿಯಾನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಹುತಾತ್ಮರ ವೀರಸೌಧ, ವಿದುರಾಶ್ವತ್ಥ ದೇಗುಲದ ಸ್ತಬ್ಧಚಿತ್ರ, ಗ್ರೀನ್ ನಂದಿ, ಕ್ಲೀನ್ ನಂದಿ ಎಂಬ ಸ್ತಬ್ದಚಿತ್ರ, ಚಿಕ್ಕಬಳ್ಳಾಪುರದ ರಂಗಸ್ಥಳ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ರೇಷ್ಮೆ ಉದ್ಯಮ, ಕೈವಾರದ ಬಕಾಸುರ ವಧೆ, ಜಿಲ್ಲೆಯ ಭಾರತ ರತ್ನಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ಅವರ ಕುರಿತು ಸ್ತಬ್ಧಚಿತ್ರಗಳು ಈ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು.

‘ಗಮನ ಸೆಳೆಯುವ ವಿಶ್ವಾಸ’

ನಂದಿಗಿರಿಧಾಮವು ರಾಜ್ಯದಲ್ಲಿಯೇ ಐತಿಹಾಸಿಕ ಮತ್ತು ಪ್ರಮುಖ ಪ್ರವಾಸಿ ತಾಣ. ಇಂತಹ ಕಡೆ ರೋಪ್ ವೇ ನಿರ್ಮಾಣವಾಗುತ್ತಿದೆ. ನಂದಿಗಿರಿಧಾಮ ರೋಪ್ ವೇ ವಿಚಾರಗಳ ಅಡಿಯಲ್ಲಿ ಸ್ತಬ್ಧಚಿತ್ರ ರೂಪಿಸಲಾಗುತ್ತದೆ. ಇದು ಎಲ್ಲರನ್ನು ಆಕರ್ಷಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರ ಪ್ರೋತ್ಸಾಹ’

ಜಿಲ್ಲೆಗೆ ಒಳ್ಳೆಯ ಯೋಜನೆ ಬರುತ್ತಿದೆ. ಚಿಕ್ಕಬಳ್ಳಾಪುರದ ಈ ರೋಪ್ ವೇ ಅನ್ನು ಕರ್ನಾಟಕದಲ್ಲಿ ತೋರಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಪ್ರೋತ್ಸಾಹದಿಂದ ಮುಂದುವರಿದಿದ್ದೇವೆ. ರಾಜ್ಯದ ಗಮನ ಸೆಳೆಯುತ್ತದೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪನಿರ್ದೇಶಕಿ ನಿಶಾತ್ ಆಯುಶಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.