ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಶುಕ್ರವಾರ ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಿಗ್ಗೆ ಆರರವರೆಗೆ ಈ ನಿಷೇಧ ಜಾರಿಯಲ್ಲಿ ಇರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಬೇಕಾಗಿದೆ. ಸೋಂಕು ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಆದ್ದರಿಂದ ಮುಂದಿನ ಆದೇಶದವರೆಗೂ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಲಾಕ್‌ಡೌನ್ ತೆರವಾದ ನಂತರ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿತ್ತು. ಆರಂಭದಲ್ಲಿ ಹೆಚ್ಚು ಜನಸಂದಣಿ ಇರಲಿಲ್ಲ. ಆದರೆ ಭಾನುವಾರ (ಜು.11)ರಂದು ಸಾವಿರಾರು ಪ್ರವಾಸಿಗರು ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದರು.ವಾರಾಂತ್ಯದಲ್ಲಿ ಬೆಟ್ಟದಲ್ಲಿರುವ ಪ್ರವಾಸೋದ್ಯಮ ನಿಗಮದ ಎಲ್ಲ ಕೊಠಡಿಗಳು ಪ್ರವಾಸಿಗರಿಂದ ಭರ್ತಿ ಆಗಿದ್ದವು.
ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಸಾಗುವ ದೇವನಹಳ್ಳಿ ತಾಲ್ಲೂಕಿನ ರಾಣಿಕ್ರಾಸ್‌ನಲ್ಲಿ ಒಂದು ಕಿಲೋಮೀಟರ್‌ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದ ಪ್ರವಾಸಿಗರಿಗೆ ದಂಡ ವಿಧಿಸಲಾಗಿತ್ತು. ಈ ಎಲ್ಲ ದೃಷ್ಟಿಯಿಂದ ಜಿಲ್ಲಾಡಳಿತ ವಾರಾಂತ್ಯದ ಪ್ರವೇಶ ನಿಷೇಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.