ADVERTISEMENT

ನಾರೇಪಲ್ಲಿ ಟೋಲ್‌ನಲ್ಲಿ ದುಪ್ಪಟ್ಟು ಹಣ ವಸೂಲಿ

ಫಾಸ್ಟ್ಯಾಗ್‌ ಮಾಡಿಸದವರ ಜೇಬಿಗೆ ಸಂಕಷ್ಟ, ಗಡಿಯಲ್ಲಿ ವಾಹನದಟ್ಟಣೆ

ಪಿ.ಎಸ್.ರಾಜೇಶ್
Published 17 ಫೆಬ್ರುವರಿ 2021, 4:21 IST
Last Updated 17 ಫೆಬ್ರುವರಿ 2021, 4:21 IST
ಬಾಗೇಪಲ್ಲಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಟೋಲ್ ಕೇಂದ್ರದಲ್ಲಿ ವಾಹನಗಳು ಸಾಲುಗಟ್ಟಿರುವುದು
ಬಾಗೇಪಲ್ಲಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಟೋಲ್ ಕೇಂದ್ರದಲ್ಲಿ ವಾಹನಗಳು ಸಾಲುಗಟ್ಟಿರುವುದು   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ನಾರೇಪಲ್ಲಿ ಟೋಲ್ ಪ್ಲಾಜಾದಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ (ಫೆ.15) ಫಾಸ್ಟ್ಯಾಗ್ ಹೊಂದಿರದ ವಾಹನ ಚಾಲಕರು ದುಪ್ಪಟ್ಟು ಶುಲ್ಕ ಕಟ್ಟಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021 ಜ.1ರಿಂದ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ಕೊರೊನಾದಿಂದ ಅದನ್ನು ಫೆ.15ರಿಂದ ಜಾರಿಗೊಳಿಸಲು ಆದೇಶವಾಗಿತ್ತು. ಭಾನುವಾರ ರಾತ್ರಿಯಿಂದ ಆದೇಶ ಅನುಷ್ಠಾನವಾಗಿದ್ದು, ಟೋಲ್ ಕೇಂದ್ರಗಳ ನಗದು ಕೌಂಟರ್‌ನಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ನಾರೇಪಲ್ಲಿ ಟೋಲ್ ಕೇಂದ್ರ ಬೆಂಗಳೂರಿಂದ ಆಂಧ್ರಪ್ರದೇಶದ ಕಡೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಸದ್ಯ ಟೋಲ್ ಪ್ಲಾಜಾದಲ್ಲಿ ಅನಂತಪುರದ ಮೂಲದ ಚಾಬ್ರಾಸ್ ಅಸೋಸಿಯೇಟ್ಸ್ ಕಂಪನಿಯವರು ರಸ್ತೆ ಬಳಕೆದಾರರಿಂದ ಶುಲ್ಕ ಸಂಗ್ರಹಿಸುವ ಗುತ್ತಿಗೆ ಪಡೆದಿದ್ದಾರೆ. ಸ್ಥಳದಲ್ಲಿ ಏರ್‌ಟೆಲ್ ಕಂಪನಿಯವರು ಮೊಬೈಲ್ ಮೂಲಕವೇ ವಾಹನ ಸವಾರರಿಗೆ ಫಾಸ್ಟ್ಯಾಗ್ ಮಾಡಿಸಿದರು.

ADVERTISEMENT

ಫಾಸ್ಟ್ಯಾಗ್ ಮಾಡಿಸದಿದ್ದರೆ ಟೋಲ್ ಕೇಂದ್ರಗಳಲ್ಲಿ ಕಾರಿಗೆ ₹190, ಲಘುವಾಹನಕ್ಕೆ ₹310, ಟ್ರಕ್‌ಗೆ ₹650, 3-ಆಕ್ಸಿಲ್‌ ವಾಹನಕ್ಕೆ ₹710, 4 ಆಕ್ಸಿಲ್‌ ವಾಹನಕ್ಕೆ ₹1010, ಓಎಸ್‌ವಿ ವಾಹನ ₹1240 ಹಣ ಹೆಚ್ಚುವರಿ
ಯಾಗಿ ಕಟ್ಟಬೇಕಾಗಿದೆ. ಭಾನುವಾರ ಮಧ್ಯರಾತ್ರಿಯಿಂದ ಫೆ.16ರ ಸೋಮ
ವಾರ ಸಂಜೆವರೆಗೆ 362 ವಾಹನಗಳ ಪೈಕಿ, ಕಾರು-223, ಲಘು ವಾಹನ- 97, ಟ್ರಕ್-22, 3 ಆಕ್ಸಿಲ್‌ ವಾಹನಗಳು-8 ಹಾಗೂ 4 ಆಕ್ಸಿಲ್‌ ವಾಹನಗಳ ಚಾಲಕರು ಫಾಸ್ಟ್ಯಾಗ್ ಇಲ್ಲದೆ ದುಪ್ಪಟ್ಟು ಹಣ ಕಟ್ಟಿ ಸಂಚರಿಸಿದರು.

‘ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಸೇವೆ ಜಾರಿ ಮಾಡಿ, ಅಂತಿಮ ದಿನವೂ ಪ್ರಕಟಿಸಿದೆ. ಆದರೆ ಕೊರೊನಾ ಸೋಂಕಿನ ಸಂದರ್ಭದಲ್ಲಿ ಫಾಸ್ಟ್ಯಾಗ್ ಮಾಡಿಸಲು ಆಗಲಿಲ್ಲ. ಇದೀಗ ಸರ್ಕಾರ ಏಕಾಏಕಿ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಆಂಧ್ರಪ್ರದೇಶದ ಕದಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬಂದಿದ್ದೆವು. ಫಾಸ್ಟ್ಯಾಗ್ ಇಲ್ಲದ್ದರಿಂದ ನಾರೇಪಲ್ಲಿ ಟೋಲ್ ಕೇಂದ್ರದಲ್ಲಿ ಅನಿವಾರ್ಯವಾಗಿ ₹380 ಕಟ್ಟಿದ್ದೇನೆ. ಫಾಸ್ಟ್ಯಾಗ್ ಕೂಡಲೇ ಮಾಡಿಸುತ್ತೇನೆ’ ಎಂದು ಬೆಂಗಳೂರಿನ ಕುಮಾರ್ ತಿಳಿಸಿದರು.‌

ಪ್ರತಿರೋಧ ಇಲ್ಲ

‘ಸರ್ಕಾರ ಫೆ.15ರಿಂದ ಫಾಸ್ಟ್ಯಾಗ್ ಅನ್ನು ಕಡ್ಡಾಯವಾಗಿ ಜಾರಿ ಮಾಡಿದೆ. ಫಾಸ್ಟ್ಯಾಗ್‌ ಇಲ್ಲದವರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದೇವೆ. ಸರ್ಕಾರ ಆದೇಶದಂತೆ ಪಾಲನೆ ಮಾಡಬೇಕಾಗಿದೆ. ಹೆಚ್ಚುವರಿ ಹಣ ವಸೂಲಿಯಿಂದ ಚಾಲಕರಿಂದ ಪ್ರತಿರೋಧ, ಗಲಾಟೆ ಇಲ್ಲ’ ಎಂದು ಚಾಬ್ರಾಸ್ ಅಸೋಸಿಯೇಟ್ ಕಂಪನಿಯ ಪ್ರಭಾರಿ ಸಿಬ್ಬಂದಿ ಕಿರಣ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.