ಚಿಕ್ಕಬಳ್ಳಾಪುರ: ‘ರೈತ ಹುತಾತ್ಮ ದಿನವಾದ ಜುಲೈ 21 ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ವತಿಯಿಂದ ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಿಟ್ನಾಳ್ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಲಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣ ರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಈ ಹಿಂದೆ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು ಇದೀಗ ನುಡಿದಂತೆ ನಡೆದಿಲ್ಲ. ₨2 ಲಕ್ಷ ಸಾಲ ಮನ್ನಾ ವಿಚಾರದಲ್ಲಿ ಸಹ ಅನೇಕ ಷರತ್ತುಗಳನ್ನು ಹಾಕಿ ಬಹುಸಂಖ್ಯಾತರಿಗೆ ಅದರ ಪ್ರಯೋಜನ ತಟ್ಟದಂತೆ ಮಾಡಿದ್ದಾರೆ. ಇದರಿಂದ ಬಡ ರೈತರಿಗೆ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.
‘ರಾಜ್ಯ ಸರ್ಕಾರ 2ನೇ ಹಂತದಲ್ಲಿ ರೈತರು ಎಲ್ಲಾ ಬ್ಯಾಂಕ್‌ಗಳಲ್ಲಿ ಕೃಷಿ ಅಭಿವೃದ್ಧಿಗೆ, ಟ್ರ್ಯಾಕ್ಟರ್, ಪಂಪ್‌ಸೆಟ್, ಪೈಪ್‌ಲೈನ್, ಹೈನುಗಾರಿಕೆ, ಕುರಿ–ಕೋಳಿ ಸಾಕಣೆ, ಕೃಷಿ ಯಂತ್ರೋಪಕರಣ, ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳು, ಪಹಣಿ ನೀಡಿ ಚಿನ್ನದ ಮೇಲೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಅಧಿಕಾರ ಬಿಡಲಿ. ಮೊದಲು ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿ ಇದೀಗ ಮಿತ್ರ ಪಕ್ಷ ಸಹಕಾರ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಕಣ್ಣೀರು ಸುರಿಸುವುದು ರಾಜಕೀಯ ನಾಟಕ. ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ಹೊಣೆಗಾರಿಕೆ ಕೂಡ ಇದೆ. ಈ ವಿಚಾರವಾಗಿ ನಮ್ಮ ಎಲ್ಲ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕು’ ಎಂದು ಒತ್ತಾಯಿಸಿದರು.
‘ವಿವಿಧ ರಾಜ್ಯಗಳಲ್ಲಿ ಒಂದು ಲೀಟರ್ ಹಾಲಿಗೆ ₨38 ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಇತ್ತೀಚೆಗೆ ಹಾಲಿನ ಪ್ರೋತ್ಸಾಹ ಧನವನ್ನು ₨3 ಇಳಿಕೆ ಮಾಡಲಾಗಿದೆ. ಅದೇ ರೀತಿ ಪಶು ಆಹಾರಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು. ರೇಷ್ಮೆ ಬೆಲೆ ಇಳಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ‘ಸ್ವಾತಂತ್ರ್ಯ ಬಂದು ಅನೇಕ ದಶಕಗಳು ಕಳೆದರೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರೈತರನ್ನು ಉಳಿಸುವ, ಸಮಾಜ ಕಟ್ಟುವ ನಿಟ್ಟಿನಲ್ಲಿ ರೈತ ಹುತಾತ್ಮ ದಿನಾಚರಣೆಯಂದು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.
ರೈತ ಸಂಘದ ಪದಾಧಿಕಾರಿಗಳಾದ ಎಸ್.ಎಂ.ರವಿಪ್ರಕಾಶ್, ಬಿ.ನಾರಾಯಣಸ್ವಾಮಿ, ರೆಡ್ಡಪ್ಪ, ವೆಂಕಟರೋಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.