ADVERTISEMENT

ವಾರದ ಸಂತೆಗಳಿಗಿಲ್ಲ ಸೂಕ್ತ ನೆಲೆ

ಬಾಗೇಪಲ್ಲಿ: ಮೂಲ ಸೌಲಭ್ಯಗಳಿಂದ ಬಳಲುತ್ತಿವೆ ವಹಿವಾಟಿನ ಸ್ಥಳಗಳು

ಪಿ.ಎಸ್.ರಾಜೇಶ್
Published 8 ಆಗಸ್ಟ್ 2022, 3:57 IST
Last Updated 8 ಆಗಸ್ಟ್ 2022, 3:57 IST
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯದಲ್ಲಿ ಖಾಸಗಿ ತೋಪಿನಲ್ಲಿ ವಾರದ ಸಂತೆ ನಡೆಯುತ್ತಿರುವುದು
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯದಲ್ಲಿ ಖಾಸಗಿ ತೋಪಿನಲ್ಲಿ ವಾರದ ಸಂತೆ ನಡೆಯುತ್ತಿರುವುದು   

ಬಾಗೇಪಲ್ಲಿ: ವಾರದ ಸಂತೆಗಳು ಗ್ರಾಮೀಣ ಜನರ ವಹಿವಾಟಿನ ಸ್ಥಳಗಳು. ವಾರಕ್ಕೆ ಒಮ್ಮೆ ಇಲ್ಲಿಗೆ ವ್ಯಾಪಾರಿಗಳು, ರೈತರು ತಮ್ಮ ಸರಕುಗಳನ್ನು ತರುವರು. ಗ್ರಾಹಕರು ಖರೀದಿಗೆ ಬರುವರು.

ಇಂತಿಪ್ಪ ವಾರದ ಸಂತೆಗಳು ನಡೆಯುವ ಸ್ಥಳಗಳು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಧ್ವಾನ ಎನ್ನುವ ರೀತಿಯಲ್ಲಿ ಇವೆ. ಸಂತೆಗಳಿಗೆಸ್ವಂತ ಪ್ರಾಂಗಣ, ಶೆಡ್‌ಗಳು ಇಲ್ಲ. ರಸ್ತೆ ಬದಿ ಹಾಗೂ ತಿಪ್ಪೆಗುಂಡಿಗಳ ಹಾಗೂ ಗ್ರಾಮಗಳ ಹೊರಗಿನ ಕೊಳಚೆ ಪ್ರದೇಶಗಳಲ್ಲಿ ಸಂತೆಗಳು ನಡೆಯುತ್ತಿವೆ. ವಾರದ ಸಂತೆಗಳಿಗೆ ಪುರಸಭೆ ಹಾಗೂ ಗ್ರಾಮ ಪಂಚಾಯಿತಿಯವರು ಇದು ಸಂತೆ ಜಾಗ ಎನ್ನುವಂತೆ ಅಧಿಕೃತ ಜಾಗವನ್ನು ನೀಡಿಲ್ಲ. ಸಂತೆ ನಡೆಯುವ ಕಡೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸದಿರುವುದರಿಂದ ವ್ಯಾಪಾರಿಗಳು, ರೈತರು ಹಾಗೂ ಜನರಿಗೆ ತೊಂದರೆ ಆಗಿದೆ.

ತಾಲ್ಲೂಕಿನ ಕಸಬಾ, ಪಾತಪಾಳ್ಯ, ಮಿಟ್ಟೇಮರಿ, ಗೂಳೂರು, ಚೇಳೂರು ಹೋಬಳಿ ಕೇಂದ್ರಗಳಲ್ಲಿ ವಾರದ ಸಂತೆ ನಡೆಯುತ್ತದೆ. ಪಟ್ಟಣದಲ್ಲಿ ಸೋಮವಾರ, ಪಾತಪಾಳ್ಯ, ಮಿಟ್ಟೇಮರಿಗಳಲ್ಲಿ ಗುರುವಾರ, ಗೂಳೂರಿನಲ್ಲಿ ಮಂಗಳವಾರ, ಬಿಳ್ಳೂರಿನಲ್ಲಿ ಬುಧವಾರ ಸಂತೆ ಆಗುತ್ತಿದೆ.

ADVERTISEMENT

ತಾಲ್ಲೂಕು ಕೇಂದ್ರ ಬಾಗೇಪಲ್ಲಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ಪುರಸಭೆಯಿಂದ ಸಂತೆ ಮೈದಾನಕ್ಕೆ ಜಾಗ ಮಂಜೂರು ಮಾಡಿ 3 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಶೆಡ್‌ಗಳು ಸಂತೆಗೆ ಬಳಕೆಯೇ ಆಗುತ್ತಿಲ್ಲ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೆಡ್‌ಗಳಿಗೆ ಹಾಕಿರುವ ಶೀಟುಗಳು ಮುರಿದಿವೆ. ಕಂಬಗಳು ಶಿಥಿಲವಾಗಿವೆ. ವ್ಯಾಪಾರಕ್ಕೆ ಶೆಡ್‌ಗಳು ಸೂಕ್ತವಾಗಿಲ್ಲ. ನಿರ್ವಹಣೆ ಕೊರತೆಯಿಂದ ಸಂತೆಗೆ ಜಾಗ ಬಳಕೆಯೇ ಆಗುತ್ತಿಲ್ಲ.

ಶೆಡ್‌ಗಳ ಅಕ್ಕಪಕ್ಕದಲ್ಲಿ ತಿಪ್ಪೆಗುಂಡಿಗಳು ಎಲೆಎತ್ತಿವೆ. ನೆರೆ ಹೊರೆಯವರು ತಮ್ಮ ವಾಹನಗಳ ನಿಲುಗಡೆಗೆ ಶೆಡ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬರಲು ಸಮರ್ಪಕ ರಸ್ತೆ ಇಲ್ಲ. ಕುಡಿಯುವ ನೀರು, ಶೌಚಾಲಯವೂ ಇಲ್ಲ. ತಡೆಗೋಡೆ ನಿರ್ಮಿಸಿಲ್ಲ.

ಪಾತಪಾಳ್ಯ ಹೋಬಳಿ ಕೇಂದ್ರದಲ್ಲಿ ಪ್ರತಿ ಗುರುವಾರ ಸಂತೆ ನಡೆಯಲಿದೆ. ಗ್ರಾಮ ಪಂಚಾಯಿತಿಯವರು ವಾರದ ಸಂತೆಗೆ ಜಾಗ ನೀಡಿಲ್ಲ. ಇದರಿಂದ ಊರ ಹೊರಗಿನ ಖಾಸಗಿ ತೋಪಿನಲ್ಲಿ 50 ವರ್ಷಗಳಿಂದ ಸಂತೆ ನಡೆಯುತ್ತಿದೆ. ಈ ಸ್ಥಳಕ್ಕೆ ಆಂಧ್ರಪ್ರದೇಶದ ಜನರು ಹೆಚ್ಚಾಗಿ ಬರುತ್ತಾರೆ. ವ್ಯಾಪಾರಿಗಳು ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮಳೆ, ಗಾಳಿ, ಬಿಸಿಲಿಗೆ ಜನರು ಹೈರಾಣಾಗುವರು.ಗುಂಡಿಗಳು, ತಿಪ್ಪೆಗಳು ಹಾಗೂ ಕೊಳಚೆ ಪ್ರದೇಶಗಳಲ್ಲಿ ಸಂತೆ ನಡೆಯುತ್ತಿದೆ. ಜನರು ಮೂಗು ಮುಚ್ಚಿ ತರಕಾರಿಗಳು, ತಿಂಡಿ ತಿನಿಸು ಮತ್ತಿತರ ವಸ್ತುಗಳನ್ನು ಖರೀದಿಸುವರು.

ಮಿಟ್ಟೇಮರಿ ಹೋಬಳಿಯಲ್ಲಿ ವಾರದ ಸಂತೆಗೆ ಶೆಡ್‌ಗಳು ನಿರ್ಮಿಸಲಾಗಿದೆ. ಆದರೆ ಶೆಡ್‌ಗಳು ವ್ಯಾಪಾರಕ್ಕೆ ಸಾಲದಾಗಿವೆ. ಬಹಳಷ್ಟು ವ್ಯಾಪಾರಿಗಳು ಟೆಂಟ್, ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಗೂಳೂರಿನಿಂದ 4 ಕಿಮೀ ದೂರದ ನಿಡುಮಾಮಿಡಿ ಮಠದ ಮುಂದೆ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಮಠದ ಹಿಂದೆ ವಾರದಸಂತೆಗೆ ಶೆಡ್‌ ನಿರ್ಮಿಸಿದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮಠದ ಮುಂದಿನ ರಸ್ತೆಯ ಬದಿಯ ಪಕ್ಕದಲ್ಲಿಯೇ ವಾರದ ಸಂತೆ ನಡೆಯುತ್ತಿದೆ. ಇಲ್ಲಿ ಸಹ ಕನಿಷ್ಠ ಮೂಲಸೌಲಭ್ಯಗಳು ಇಲ್ಲ. ಮಾರ್ಗಾನುಕುಂಟೆ, ಕೊತ್ತಕೋಟೆ ಸೇರಿದಂತೆ ವಿವಿಧ ಗ್ರಾಮಗಳಿಂದ ಗ್ರಾಮಸ್ಥರು ಇಲ್ಲಿನ ವಾರದ ಸಂತೆಗೆ ಬರುವರು.

ಸಂತೆಗಳು ಸಣ್ಣ ಪುಟ್ಟ ಸಮುದಾಯದ ಬದುಕಿಗೆ ಆಸರೆಯೂ ಆಗಿವೆ. ಹಕ್ಕ್ಕಿಪಿಕ್ಕಿ, ಚನ್ನದಾಸರ್ ಸಮುದಾಯದ ಮಹಿಳೆಯರು ಗೃಹ ಹಾಗೂ ಸೌಂದರ್ಯ ಬಳಕೆಯ ವಸ್ತುಗಳನ್ನು ಹಾಗೂ ಪುರುಷರು ಸ್ಟೌಗಳ ರಿಪೇರಿ, ಪಾತ್ರೆ ಮಾರಾಟ ಮಾಡುತ್ತಾರೆ. ಕೆಲ ಜನಪದರು, ವೇಷಧಾರಿಗಳು, ಶ್ರೀರಾಮ, ಆಂಜನೇಯ, ವಿವಿಧ ದೇವರ ಭಾವಚಿತ್ರಗಳನ್ನಿಟ್ಟು ಭಿಕ್ಷೆ ಬೇಡಿ ಜೀವನ ಮಾಡುತ್ತಾರೆ. ಈ ಹಿಂದೆ ವಾರದ ಸಂತೆಗಳು ಬಹಳ ಮಹತ್ವ ಪಡೆದುಕೊಂಡಿದ್ದವು. ಆದರೆ ಆಧುನಿಕತೆ ಬೆಳೆದಂತೆ ಸಂತೆಗಳ ತನ್ನತನ ಕಳೆದುಕೊಳ್ಳುತ್ತಿವೆ.

ತಾಲ್ಲೂಕಿನಲ್ಲಿ ರೈತರು ತರಕಾರಿಯನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ, ವೈಜ್ಞಾನಿಕ ಬೆಂಬಲ ಬೆಲೆ ಸಿಗದಿರುವುದರಿಂದ ರೈತರು ತರಕಾರಿಗಳನ್ನು ನೇರವಾಗಿ ತಂದು ವಾರದ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಉಳಿದಂತೆ ವ್ಯಾಪಾರಸ್ಥರು ರೈತರಿಂದ ತರಕಾರಿ ಖರೀದಿಸಿ ಸಂತೆಗೆ ತಂದು ವ್ಯಾಪಾರ ಮಾಡುತ್ತಾರೆ.

ಹೀಗೆ ಪ್ರಮುಖ ವಹಿವಾಟು ಸ್ಥಳಗಳಾಗಿ ಇಂದಿಗೂ ತಾಲ್ಲೂಕಿನಲ್ಲಿ ವಾರದ ಸಂತೆಗಳು ಗುರುತಿಸಿಕೊಂಡಿವೆ. ಆದರೆ ಈ ಸಂತೆಗಳು ನಡೆಯುವ ಸ್ಥಳದಲ್ಲಿ ಮಾತ್ರ ಕನಿಷ್ಠ ಸೌಲಭ್ಯಗಳು ಇಲ್ಲ.

==============

ಸೌಲಭ್ಯ ಕಲ್ಪಿಸುತ್ತೇವೆ

ಪಟ್ಟಣ ಹಾಗೂ ತಾಲ್ಲೂಕಿನ ವಾರದ ಸಂತೆ ಪ್ರಾಂಗಣಗಳಿಗೆ ಭೇಟಿ ನೀಡಲಾಗುವುದು. ಅಗತ್ಯವಿರುವ ಕಡೆ ‌ಶೆಡ್‌ಗಳ ನಿರ್ಮಾಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇನೆ.

-ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ, ಬಾಗೇಪಲ್ಲಿ

***

ವಾರದ ಸಂತೆಗೆ ಮಹತ್ವವಿಲ್ಲ

ವಾರಕ್ಕೆ ಆಗುವಷ್ಟು ತರಕಾರಿ, ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ಸಂತೆಯಿಂದ ತರುತ್ತಿದ್ದೆವು. ವಾರದ ಸಂತೆ ಬಂದರೆ ಖುಷಿ. ವಾರದ ಸಂತೆ ಜನರ ನಡುವೆ ಉತ್ತಮ ಸಂಬಂಧಗಳನ್ನು ಬೆಳೆಸುತ್ತಿತ್ತು. ಈಗ ವಾರದ ಸಂತೆಗಳ ಮಹತ್ವ ಕಳೆದುಕೊಂಡಿವೆ.

ಚನ್ನರಾಯಪ್ಪ, ಬಾಗೇಪಲ್ಲಿ

***

ನಿರ್ವಹಣೆಯ ಕೊರತೆ

ಪಟ್ಟಣದಲ್ಲಿ ವಾರದ ಸಂತೆಗೆ ಜಾಗ ಇದ್ದರೂ ಸೂಕ್ತ ನಿರ್ವಹಣೆ ಇಲ್ಲ. ಕೊಳಚೆ ಹಾಗೂ ಕೆಸರುಗದ್ದೆಯಂತಾದ ಜಾಗದಲ್ಲಿ ಸಂತೆ ಆಗುತ್ತಿದೆ. ವ್ಯಾಪಾರಸ್ಥರು, ಗ್ರಾಹಕರು ಕೆಸರುಗದ್ದೆಗಳಲ್ಲಿ ಸಂಚರಿಸಬೇಕು. ಪುರಸಭೆಗೆ ಕೋಟ್ಯಂತರ ಅನುದಾನ ಬಂದರೂ, ವಾರದ ಸಂತೆಯ ಸ್ಥಳವನ್ನು ಅಭಿವೃದ್ಧಿಪಡಿಸಿಲ್ಲ.

ಎನ್.ಎಸ್.ಚಲಪತಿ, ಬಾಗೇಪಲ್ಲಿ

***

ಜಾಗವಿಲ್ಲ

ಪಾತಪಾಳ್ಯದಲ್ಲಿ ವಾರದ ಸಂತೆಗೆ ಸೂಕ್ತ ಜಾಗ ಗುರುತಿಸಿಲ್ಲ. ಶೆಡ್‌ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಜನರು ಹೋಗಿ, ಬರಲು ರಸ್ತೆ ಇಲ್ಲ. ತರಕಾರಿಗಳು, ಆಹಾರ ಪದಾರ್ಥಗಳನ್ನು ಇಟ್ಟು ಮಾರಾಟ ಮಾಡಲು ಜಾಗವೇ ಇಲ್ಲ.

ರಾಮಲಕ್ಷ್ಮಮ್ಮ, ಪಾತಪಾಳ್ಯ

***

ಮಳೆ, ಗಾಳಿಯಿಂದ ತೊಂದರೆ

ಎಲ್ಲ ವಾರದ ಸಂತೆಗಳಲ್ಲಿ ದಿನಬಳಕೆಯ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೇನೆ. ವಾರದ ಸಂತೆಗಳಲ್ಲಿ ಶೆಡ್‌ಗಳು ಇಲ್ಲ. ಮಳೆ, ಗಾಳಿಗೆ ತೊಂದರೆಗೆ ಸಿಲುಕುತ್ತೇವೆ. ಸಂತೆ ನಡೆಯುವ ಸ್ಥಳದಲ್ಲಿನ ಸಮಸ್ಯೆಗಳ ಕಾರಣ ವಾರದ ಸಂತೆಗಳಿಗೆ ಜನರು ಬರುತ್ತಿಲ್ಲ.

ಕೃಷ್ಣಪ್ಪ, ಘಂಟವಾರಿಪಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.