ಚಿಕ್ಕಬಳ್ಳಾಪುರ: ‘ವೈಟ್‌ಫೀಲ್ಡ್‌ನ ಸತ್ಯಸಾಯಿ ಆಶ್ರಮಕ್ಕೆ 1998ರಲ್ಲಿ ಭೇಟಿ ನೀಡಿದ್ದೆ. ಅಲ್ಲಿನ ಘಟನೆಯಿಂದ ಪ್ರಭಾವಿತನಾಗಿ ನಾನು ಮಾಂಸಾಹಾರ ತ್ಯಜಿಸಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂದು ಸಾಯಿಬಾಬಾ ಅವರ ದರ್ಶನ ಪಡೆದಿದ್ದು, ಎರಡು ಗಂಟೆ ಸಭೆಯಲ್ಲಿದ್ದೆ. ವಿದೇಶಿ ಪ್ರಜೆಯೊಬ್ಬರು ವೈಜ್ಞಾನಿಕ, ಅಧ್ಯಾತ್ಮಿಕವಾಗಿ ಸಸ್ಯಾಹಾರ ಮತ್ತು ಮಾಂಸಾಹಾರದ ನಡುವಿನ ವ್ಯತ್ಯಾಸ ತಿಳಿಸುವ ಪುಸ್ತಕವನ್ನು ಓದುತ್ತಿದ್ದರು. ಸತತ ಎರಡು ಗಂಟೆ ಓದಿದರು. ಆಗ ಅದರಲ್ಲಿ ಏನೂ ಸಂದೇಶವಿದೆ ಎನಿಸಿತು. ಅದರಿಂದ ಪ್ರಭಾವಿತನಾದೆ’ ಎಂದು ತಿಳಿಸಿದರು.
‘ನನ್ನ ತಾಯಿ ಅತ್ಯಂತ ಕಷ್ಟದಲ್ಲಿದ್ದರು. ಸತ್ಯಸಾಯಿ ನೆನಪಿಸಿಕೊಂಡು ಪೂಜಿಸಿ, ನಾನು ಹೋಟೆಲ್‌ನಿಂದ ಆಸ್ಪತ್ರೆಗೆ ಹೋದೆ. ಅಷ್ಟರಲ್ಲಿ ನನ್ನ ತಾಯಿ ಎದ್ದು ಕುಳಿತಿದ್ದರು. ನಂಬಿಕೆ ಮತ್ತು ಭಕ್ತಿ ಇದ್ದ ಕಡೆ ದೈವತ್ವ ಇರುತ್ತದೆ’ ಎಂದರು.
‘ಕೃಷ್ಣ ಪರಮಾತ್ಮನ ಪ್ರತಿನಿಧಿಯಾಗಿ ಸತ್ಯಸಾಯಿ ಅವರು ಭೂಮಿಗೆ ಬಂದರು. ಅವರು ಇದ್ದ ಕಾಲದಲ್ಲಿ ನಾವು ಇದ್ದೆವು ಎನ್ನುವುದೇ ಪುಣ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.