ADVERTISEMENT

ಶಿಡ್ಲಘಟ್ಟ | ವಂಕಮಾರದಹಳ್ಳಿಯಲ್ಲಿ ಪುರಧರ್ಮ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 13:06 IST
Last Updated 17 ಜುಲೈ 2024, 13:06 IST
ಶಿಡ್ಲಘಟ್ಟ ತಾಲ್ಲೂಕಿನ ವಂಕಮಾರದಹಳ್ಳಿಯಲ್ಲಿ ಗ್ರಾಮಸ್ಥರ ನೆರವಿನಿಂದ ಪುರಧರ್ಮ ಶಾಸನವನ್ನು ಶಾಸನತಜ್ಞ ಧನಪಾಲ್ ಮತ್ತು ಶ್ರೀನಿವಾಸ.ವೈ.ಸಿ. ಪತ್ತೆ ಹಚ್ಚಿದ್ದಾರೆ
ಶಿಡ್ಲಘಟ್ಟ ತಾಲ್ಲೂಕಿನ ವಂಕಮಾರದಹಳ್ಳಿಯಲ್ಲಿ ಗ್ರಾಮಸ್ಥರ ನೆರವಿನಿಂದ ಪುರಧರ್ಮ ಶಾಸನವನ್ನು ಶಾಸನತಜ್ಞ ಧನಪಾಲ್ ಮತ್ತು ಶ್ರೀನಿವಾಸ.ವೈ.ಸಿ. ಪತ್ತೆ ಹಚ್ಚಿದ್ದಾರೆ   

ಶಿಡ್ಲಘಟ್ಟ: ತಾಲ್ಲೂಕಿನ ಕೋಟಹಳ್ಳಿಯ ಸಮೀಪವಿರುವ ಅತ್ಯಂತ ಚಿಕ್ಕ ಗ್ರಾಮ ವಂಕಮಾರದಹಳ್ಳಿಯಲ್ಲಿ ಅಪರೂಪದ ಪುರಧರ್ಮ ಶಾಸನವನ್ನು ಶಾಸನತಜ್ಞ ಧನಪಾಲ್ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಶ್ರೀನಿವಾಸ.ವೈ.ಸಿ. ಪತ್ತೆ ಹಚ್ಚಿದ್ದು, ಅದರ ಮಹತ್ವವನ್ನು ವಿವರಿಸಿದ್ದಾರೆ.

ಶಿಲಾ ಶಾಸನಗಳಲ್ಲಿ ದಾನಶಾಸನಗಳು ಪ್ರಮುಖವಾದುದಾದರೆ, ಅವುಗಳಲ್ಲಿ ಪುರಧರ್ಮ ಶಾಸನಗಳು ಅತ್ಯಂತ ಶ್ರೇಷ್ಠವಾದವು ಎನ್ನುತ್ತಾರೆ ವಿದ್ವಾಂಸರು.

ಪ್ರತಿಷ್ಠಿತ ವ್ಯಕ್ತಿಗಳಿಗೆ ಅಂದರೆ ದೇವಾಲಯ, ಮಠ, ಪಂಥ ಇತ್ಯಾದಿ ಸಂಸ್ಥೆಗಳ ನೇತಾರರಾದ ಅಯ್ಯನವರು, ಯತಿಗಳು, ಒಡೆಯರು ಮೊದಲಾದವರಿಗೆ ಪುರಸ್ಕಾರ ರೂಪದಲ್ಲಿ ನೀಡಲಾಗುತ್ತಿದ್ದ ಗ್ರಾಮಗಳೇ ಪುರಗಳು ಎಂದು ಅನಿಸಿಕೊಳ್ಳುತ್ತಿದ್ದವು.

ADVERTISEMENT

ಕಾಲಾಂತರದಲ್ಲಿ ಇಂತಹ ಪುರಧರ್ಮಗಳನ್ನು ದೇವಾಲಯ, ಮಠ ಅಥವಾ ಪಂಗಡಗಳಲ್ಲಿನ ಧಾರ್ಮಿಕ ಕಾರ್ಯಗಳಾದ ನೈವೇದ್ಯ ಅಂಗವೈಭವ, ರಂಗವೈಭವ, ರಥೋತ್ಸವ, ಅಭಿಷೇಕ ಪೂಜೆ, ದೀಪಾರಾಧನೆ ಮೊದಲಾದ ಅಮೃತಪಡಿಗೆ ಸಂಬಂಧಿಸಿದ ಕಾರ್ಯಗಳು ಸರಾಗವಾಗಿ ಸಾಗಲೆಂಬ ಆಶಯದಿಂದ ಪುರಧರ್ಮಗಳನ್ನು ಕೊಟ್ಟಿರುವುದು ಕಂಡುಬರುತ್ತದೆ.

ಸಹಜವಾಗಿ ಇಂತಹ ಪುರಧರ್ಮಗಳನ್ನು ನೀಡಿರುವವರು ಶಕ್ತರಾದ ರಾಜರೋ ಅಥವಾ ಸ್ಥಳೀಯ ಆಡಳಿತಾಧಿಕಾರಿಗಳೋ, ಮಾಂಡಲಿಕರೋ, ದಂಡಾಧಿಪತಿಗಳೋ ಆಗಿರುತ್ತಾರೆ. ಅಲ್ಲದೆ ತಾವು ಕೊಡುವ ದಾನವು ಶಾಶ್ವತವಾಗಿ ಉಳಿಯಬೇಕೆಂಬ ಆಶಯವನ್ನು ಹೊಂದಿ ಇತರರು ಯಾರೂ ಇದಕ್ಕೆ ಅಡ್ಡಿಬಾರದಂತೆ ಸ್ಪಷ್ಟಪಡಿಸಿರುತ್ತಾರೆ.

ಈ ವಂಕಮಾರದಹಳ್ಳಿ ಗ್ರಾಮದ ಹೊರಭಾಗದ ಕೇಶವಪ್ಪ ಅವರ ಜಮೀನಿನಲ್ಲಿ ದೊರೆತಿರುವ ಶಾಸನವು ಸುಮಾರು 17ನೇ ಶತಮಾನದ ದಾನ ಶಾಸನವಾಗಿದೆ. ಶಿವರಾಜ ಒಡೆಯರಿಗೆ ಧರ್ಮವಾಗಬೇಕೆಂದು ಮುಮ್ಮಡಿ ನಾಯಕರ ಮಗ ತಿಮ್ಮನಾಯಕರು ಪುರಧರ್ಮವಾಗಿ ದಾನ ನೀಡಿದ್ದಾರೆ. ಆದರೆ ಯಾರಿಗೆ ದಾನ ನೀಡಲಾಗಿದೆ ಎಂಬುದು ಸ್ಪಷ್ಟವಿಲ್ಲ. ಕೊನೆಯಲ್ಲಿ ಎಂದಿನಂತೆ ಶಾಪಾಶಯವಿದ್ದು ಈ ಶಾಸನಕ್ಕೆ ತಪ್ಪಿನಡೆದರೆ ಕಾಶಿಯಲ್ಲಿ ಹಸುವನ್ನು ಕೊಂದ ಪಾಪದಲ್ಲಿ ಹೋಗುವರು ಎಂದಿದೆ.

ಈ ಶಾಸನವನ್ನು ಹುಡುಕಲು ಮತ್ತು ಅದರ ಮೇಲಿನ ಅಕ್ಷರಗಳನ್ನು ಓದಲು ಗ್ರಾಮಸ್ಥರಾದ ಮುರಳಿ, ಕಾರ್ತಿಕ್, ಗಂಗಾಧರ್ ಸಹಕಾರ ನೀಡಿದ್ದಾರೆ. ಅಲ್ಲದೆ ಈ ಶಾಸನದ ಮಹತ್ವವನ್ನು ತಿಳಿದ ಮೇಲೆ ಇದನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸನತಜ್ಞ ಧನಪಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.