ADVERTISEMENT

ಚಿಕ್ಕಬಳ್ಳಾಪುರ: ‘ನಂದಿ’ಗೆ ಹೆಚ್ಚುತ್ತಿದೆ ಪ್ರವಾಸಿಗರ ದಂಡು

ಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಅಕ್ಟೋಬರ್ 2024, 7:48 IST
Last Updated 18 ಅಕ್ಟೋಬರ್ 2024, 7:48 IST
ನಂದಿ ಬೆಟ್ಟದ ಮೇಲೆ ಕಾಣುವ ಮಂಜು
ನಂದಿ ಬೆಟ್ಟದ ಮೇಲೆ ಕಾಣುವ ಮಂಜು   

ಚಿಕ್ಕಬಳ್ಳಾಪುರ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯ, ಹೊರರಾಜ್ಯದವರಷ್ಟೇ ಅಲ್ಲ ವಿದೇಶಿಗರೂ ಗಿರಿಧಾಮದ ಸೌಂದರ್ಯಕ್ಕೆ ಮನಸೋಲುತ್ತಿದ್ದಾರೆ.

ಐತಿಹಾಸಿಕ ನಂದಿಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ವ್ಯೂಪಾಯಿಂಟ್, ಯೋಗ ನಂದೀಶ್ವರ ದೇಗುಲ, ಟಿಪ್ಪು ಡ್ರಾಪ್, ಟಿಪ್ಪು ಬೇಸಿಗೆ ಅರಮನೆ, ಗಾಂಧಿ ಭವನ, ನೆಹರೂ ಭವನ, ಉದ್ಯಾನ ಬರಸೆಳೆಯುತ್ತಿವೆ. 

ಗಿರಿಧಾಮವು ವಾರಾಂತ್ಯದಲ್ಲಿ ಮತ್ತು ಒಂದು ದಿನದ ಪ್ರವಾಸಕ್ಕೆ ಪ್ರಶಸ್ತ ತಾಣ ಎನಿಸಿದೆ. ಕೋವಿಡ್‌ ಸಮಯ ಹೊರತು ಪಡಿಸಿ ಉಳಿದ ಎಲ್ಲ ವರ್ಷಗಳಲ್ಲಿಯೂ ಗಿರಿಧಾಮಕ್ಕೆ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 

ADVERTISEMENT

ಗಿರಿಧಾಮವು ಬೆಂಗಳೂರಿಗೆ ಸಮೀಪವಿದೆ. ಆದ್ದರಿಂದ ಭೇಟಿ ನೀಡುವವರಲ್ಲಿ ಗರಿಷ್ಠ  ಮಂದಿ ಬೆಂಗಳೂರಿಗರೇ ಆಗಿದ್ದಾರೆ. ಪ್ರಸಕ್ತ ವರ್ಷದ ಸೆಪ್ಟೆಂಬರ್‌ವರೆಗೆ ಗಿರಿಧಾಮಕ್ಕೆ 16 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಅಂದಾಜಿನ  ಪ್ರಕಾರ ಈ ವರ್ಷ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 20 ಲಕ್ಷ ದಾಟಲಿದೆ.

ಇತ್ತೀಚಿನ ವಿಜಯದಶಮಿ ದಿನವೇ 21 ಸಾವಿರ ಮಂದಿ ಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿರುವ ದಿನ ವಿಜಯದಶಮಿ ಎನಿಸಿದೆ.

ವಾರಾಂತ್ಯದ ಶನಿವಾರ ಮತ್ತು ಭಾನುವಾರ ಆರೇಳು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವರು. ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಗಿರಿಧಾಮದಲ್ಲಿ ಸೂರ್ಯೋದಯ ವೀಕ್ಷಿಸಬೇಕು ಎಂದು ಬೆಳ್ಳಂ ಬೆಳಿಗ್ಗೆಯೇ ಪ್ರವಾಸಿಗರು ಎಡತಾಕುವರು.

ರೋಪ್ ವೇ ಕಾಮಗಾರಿಯ ಕೆಲಸಗಳು ಗಿರಿಧಾಮದಲ್ಲಿ ಆರಂಭವಾಗಿವೆ. ರಾಜ್ಯದ  ಪ್ರವಾಸಿ ತಾಣಕ್ಕೆ ರೂಪಿಸಿರುವ ಮೊದಲ ರೋಪ್ ವೇ ಯೋಜನೆ ಇದಾಗಿದೆ. ಇದು ಪೂರ್ಣವಾದರೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ ಎನ್ನುವ ವಿಶ್ವಾಸ ಪ್ರವಾಸೋದ್ಯಮ ಇಲಾಖೆಯದ್ದು.

ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಂದಿಬೆಟ್ಟಕ್ಕೆ ಪ್ರವಾಸಿ ಸರ್ಕಿಟ್ ರೂಪಿಸಲು ಸರ್ಕಾರ ಚಿಂತಿಸಿದೆ. ಸರ್ಕಾರ ರೂಪಿಸುತ್ತಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಈ ವಿಚಾರವು ಅಡಕವಾಗಿದೆ ಎನ್ನುತ್ತವೆ ಇಲಾಖೆ ಮೂಲಗಳು. 

ವಿಮಾನವು ಹೊರಡಲು ತುಂಬಾ ಸಮಯವಿದೆ. ಅಥವಾ ವ್ಯಕ್ತಿಯೊಬ್ಬರ ಕೆಲಸ ಕಾರ್ಯಗಳು ಬೆಳಿಗ್ಗೆ 10ಕ್ಕೆ ಮುಗಿದಿದೆ. ಅವರ ವಿಮಾನವು ಸಂಜೆ 5ಕ್ಕೆ ಹೊರಡಲಿದೆ. ಅಷ್ಟು ದೀರ್ಘ ಸಮಯ ಅವರಿಗೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ತೋರಿಸಬೇಕು ಎನ್ನುವ ದೃಷ್ಟಿ ಇಟ್ಟುಕೊಂಡು ಪ್ರವಾಸಿ ಸರ್ಕಿಟ್ ರೂಪಿಸಲಾಗುತ್ತಿದೆ.  

ಚಿಕ್ಕಬಳ್ಳಾಪುದ ನಂದಿಗಿರಿಧಾಮ

‘ಶೇ 15ರಿಂದ 20ರಷ್ಟು ಪ್ರವಾಸಿಗರು ಹೆಚ್ಚಳ’

ವಾರಾಂತ್ಯದ ದಿನಗಳಲ್ಲಿ ಸರ್ಕಾರಿ ರಜೆಗಳು ಹಬ್ಬಗಳ ಸಮಯದಲ್ಲಿ ಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ವರ್ಷದಿಂದ ವರ್ಷಕ್ಕೆ ಶೇ 15ರಿಂದ 20ರಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಗಿರಿಧಾಮದ ಮೇಲ್ಭಾಗದ ವಾಹನ ನಿಲುಗಡೆ ಸ್ಥಳದಲ್ಲಿ 300 ಕಾರುಗಳ ನಿಲುಗಡೆಗೆ ಜಾಗವಿದೆ. ಈ ವಾಹನ ನಿಲುಗಡೆಗೆ ಗಿರಿಧಾಮದ ಪ್ರವೇಶದಲ್ಲಿ ಅವಕಾಶ ಕಲ್ಪಿಸಿದರೆ ಗಿರಿಧಾಮದ ಮೇಲೆ ಬೀಳುವ ಭಾರವೂ ಕಡಿಮೆ ಆಗುತ್ತದೆ. ವಾಹನ ನಿಲುಗಡೆ ಸ್ಥಳವನ್ನು ಮುಂದಿನ ದಿನಗಳಲ್ಲಿ ಗಿರಿಧಾಮದ ಕೆಳಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಇಲ್ಲಿಂದ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂದು ಹೇಳಿದರು. ರೋಪ್ ವೇ ನಿರ್ಮಾಣವಾದರೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.