ADVERTISEMENT

ಚಿಂತಾಮಣಿ: ಬೀದಿಬದಿ ವ್ಯಾಪಾರಿಗಳ ಬದುಕೇ ಬೀದಿಪಾಲು

850ಮಂದಿ ನೋಂದಣಿ ವ್ಯಾಪಾರಿಗಳು * ವರ್ಷದಿಂದ ವರ್ಷಕ್ಕೆ ವ್ಯಾಪಾರಿಗಳ ಸಂಖ್ಯೆ ಏರಿಕೆ

ಎಂ.ರಾಮಕೃಷ್ಣಪ್ಪ
Published 7 ಅಕ್ಟೋಬರ್ 2024, 5:30 IST
Last Updated 7 ಅಕ್ಟೋಬರ್ 2024, 5:30 IST
ಚಿಂತಾಮಣಿ ಜೋಡಿ ರಸ್ತೆಯಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಸ್ಥರು
ಚಿಂತಾಮಣಿ ಜೋಡಿ ರಸ್ತೆಯಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಸ್ಥರು   

ಚಿಂತಾಮಣಿ: ನಗರದಲ್ಲಿ ಒಂದು ಸಾವಿರ ಮಂದಿ ಬೀದಿಬದಿ ವ್ಯಾಪಾರಸ್ಥರು ಇದ್ದಾರೆ. ಅದರಲ್ಲಿ 850ಮಂದಿ ನೋಂದಣಿ ವ್ಯಾಪಾರಿಗಳು. ವರ್ಷದಿಂದ ವರ್ಷಕ್ಕೆ ವ್ಯಾಪಾರಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಆದರೆ, ಸೌಲಭ್ಯ ಮಾತ್ರ ಏರಿಕೆ ಆಗುತ್ತಿಲ್ಲ. ನಮ್ಮದು ನೆಲೆಯಿಲ್ಲದ ಬದುಕಾಗಿದೆ ಎಂದು ವ್ಯಾಪಾರಿಗಳು ನೊಂದುಕೊಳ್ಳುತ್ತಾರೆ.

ನಗರದ ಬಹುತೇಕ ಎಲ್ಲ ಮುಖ್ಯ ರಸ್ತೆ, ಪ್ರಮುಖ ವೃತ್ತ, ಜನಸಂದಣಿ ಪ್ರದೇಶ ಎಲ್ಲ ವಾರ್ಡ್ ಗಳಲ್ಲಿನ ಕೂಡು ರಸ್ತೆ ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಬೀದಿಬದಿ ವ್ಯಾಪಾರಿಗಳು ಕಾಣಿಸುತ್ತಾರೆ. ವಿಶೇಷವಾಗಿ ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳು ಹೆಚ್ಚಾಗಿ ಕಾಣುತ್ತಾರೆ.

ಕೆಲವರು ಕೆಲವು ರಸ್ತೆ, ವೃತ್ತಗಳಲ್ಲಿ ಕಾಯಂ ಸ್ಥಳ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ತಳ್ಳುವ ಗಾಡಿ, ಟೆಂಪೊ ಮೂಲಕ ರಸ್ತೆ ರಸ್ತೆಯಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತಾರೆ. ಅವರಿಗೆ ಯಾವುದೇ ಒಂದೆಡೆ ಕಾಯಂ ಸ್ಥಳವಿಲ್ಲ. ನಗರದ ಜೋಡಿ ರಸ್ತೆಯಲ್ಲಿ ಕನಂಪಲ್ಲಿವರೆಗೂ ಬೆಂಗಳೂರು ವೃತ್ತದ ಹಳೆ ಕೆನರಾಬ್ಯಾಂಕ್ ರಸ್ತೆ, ಗಜಾನನ ವೃತ್ತ, ಶಿಡ್ಲಘಟ್ಟ ರಸ್ತೆ, ಕೋಲಾರ ರಸ್ತೆ ಮತ್ತು ವೃತ್ತ, ಚೇಳೂರು ರಸ್ತೆ ಮತ್ತು ವೃತ್ತ, ಅಜಾದ್ ಚೌಕ ಮತ್ತಿತರ ಕಡೆ ಹೂವು, ತರಕಾರಿ, ಹಣ್ಣು ವ್ಯಾಪಾರಿಗಳನ್ನು ಕಾಣಬಹುದು.

ADVERTISEMENT

ಮಳೆ, ಗಾಳಿ, ಬಿಸಿಲು ಎನ್ನದೆ ಬೆಳಿಗ್ಗೆಯಿಂದ ರಾತ್ರಿವರೆಗೂ ವ್ಯಾಪಾರ ನಡೆಸುತ್ತಾರೆ. ಬೆಳಿಗ್ಗೆ 5ಕ್ಕೆ  ನಗರದ ಎಪಿಎಂಸಿ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ತರಕಾರಿ, ಹಣ್ಣು–ಹಂಪಲು ಬರುತ್ತದೆ. ಬೀದಿಬದಿ ವ್ಯಾಪಾರಸ್ಥರು ಖರೀದಿಸಿ ತಮ್ಮ ಸ್ಥಳಗಳಿಗೆ ಸಾಗಿಸಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ವ್ಯಾಪಾರ ನಡೆಸುತ್ತಾರೆ. ತಳ್ಳುವ ಗಾಡಿ ವ್ಯಾಪಾರಸ್ಥರು ಎಪಿಎಂಸಿಯಿಂದ ಸರಕು ಖರೀದಿಸಿ ಗಾಡಿಗಳಿಗೆ ತುಂಬಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಕೆಲವರು ಒಂದೇ ಕಡೆ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಕೋವಿಡ್ ನಂತರ ಟೆಂಪೊಗಳಲ್ಲಿ ತರಕಾರಿ ಮತ್ತು ಹಣ್ಣು–ಹಂಪಲು ತುಂಬಿಸಿಕೊಂಡು ರಸ್ತೆಬದಿಯಲ್ಲಿ ನಿಲ್ಲಿಸಿಕೊಂಡು ಮಾರಾಟ ಮಾಡುವ ಟ್ರಂಡ್ ಹೆಚ್ಚಾಗಿದೆ. ಹಾಗೆಯೇ ಮನೆಯಲ್ಲೇ ವಿವಿಧ ಬಗೆ ತಿಂಡಿ-ತಿನಿಸು ತಯಾರಿಸಿಕೊಂಡು ಟೆಂಪೊ ಮತ್ತು ಮಾರುತಿ ವ್ಯಾನ್‌ಗಳಲ್ಲಿ ತುಂಬಿಸಿಕೊಂಡು ಬಂದು ರಸ್ತೆ ಬದಿ ಮಾರಾಟ ಮಾಡುವುದನ್ನು ಕಾಣಬಹುದು. ಸಂಚಾರ ಹೋಟೆಲ್‌ ಎಂದು ಕರೆಯಲ್ಪಡುತ್ತವೆ.

ಬೀದಿಬದಿ ವ್ಯಾಪಾರಸ್ಥರು ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡು ಚಡಪಡಿಸುತ್ತಿದ್ದಾರೆ. ನಿಲ್ಲಲು ನೆಲೆಯಿಲ್ಲದ ಬದುಕಾಗಿದೆ. ಕೆಲವು ಕಡೆ ಮಂಗಗಳ ಕಾಟ, ಕೆಲವೆಡೆ ಬೀಡಾಡಿ ದನಗಳ ಕಾಟ, ಕೆಲವೆಡೆ ವಾಹನಗಳ ಸಂಚಾರದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.

ಪ್ರತಿನಿತ್ಯ ಬೆಳಿಗ್ಗೆ ಬಂಡವಾಳಗಾರರ ಬಳಿ ಮೀಟರ್ ಬಡ್ಡಿಗೆ ಬಂಡವಾಳ ಪಡೆದು ಮಾರುಕಟ್ಟೆಯಲ್ಲಿ ಸರಕು ಖರೀದಿಸಬೇಕು. ಸಂಜೆವರೆಗೂ ಮಾರಾಟ ಮಾಡಿ ರಾತ್ರಿಗೆ ಸಾಲ ವಾಪಸ್ ನೀಡಬೇಕು. ತರಕಾರಿ, ಸೊಪ್ಪು ಕೊಳೆತರೆ ಹಾಕಿದ ಬಂಡವಾಳ ಸಹ ವಾಪಸ್ ಬರುವುದಿಲ್ಲ ಎಂಬ ಆತಂಕ ಸದಾ ಅವರಲ್ಲಿ ಮನೆ ಮಾಡಿರುತ್ತದೆ.

ಮಳೆಗಾಲದಲ್ಲಂತೂ ಬಾರಿ ಮಳೆ, ನಿರಂತರವಾಗಿ ಸೋನೆ ಮಳೆ ಸುರಿಯುವ ಕಾಲದಲ್ಲಿ ನಿತ್ಯ ಆತಂಕದಲ್ಲೇ ಮಾರುಕಟ್ಟೆಗೆ ಬರುವಂತಾಗಿದೆ. ಮಳೆಯಿಂದ ಮಾರಾಟದ ವಸ್ತುಗಳ ರಕ್ಷಣೆ ಮಾಡಲು ತಾತ್ಕಾಲಿಕ ಪ್ಲಾಸ್ಟಿಕ್ ಪೇಪರ್ ಹಾಕಲು ಸಹ ಸಾಧ್ಯವಾಗದ ಪರಿಸ್ಥಿತಿ ಇದೆ.

ಕೆಲವರು ಬಿಸಿಲು, ಮಳೆ ರಕ್ಷಣೆಗಾಗಿ ದೊಡ್ಡ ದೊಡ್ಡ ಛತ್ರಿ ಮೊರೆ ಹೋಗಿದ್ದಾರೆ. ಬೀದಿಬದಿ ವ್ಯಾಪಾರಸ್ಥರಿಗೆ ಶೌಚಾಲಯ, ಕುಡಿಯುವ ನೀರು, ನೆರಳು, ಮಳೆಯಿಂದ ರಕ್ಷಣೆ ಇಲ್ಲದೆ ಅತಂತ್ರ ಬದುಕಾಗಿದೆ ಎಂದು ಬೀದಿಬದಿ ವ್ಯಾಪಾರಸ್ಥರು ಅವಲತ್ತುಕೊಳ್ಳುತ್ತಾರೆ.

ನಗರದಲ್ಲಿ ಸುಮಾರು 850 ಮಂದಿ ಬೀದಿಬದಿ ವ್ಯಾಪಾರಸ್ಥರು ನಗರಸಭೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನವೀಕರಣಕ್ಕಾಗಿ ₹150 ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ನವೀಕರಣವಾಗಿಲ್ಲ. ನವೀಕರಣವಾಗದಿದ್ದರೆ ಮಾರಾಟದ ಪರವಾನಗಿ ರದ್ದಾಗುತ್ತದೆ. ಪರವಾನಗಿ ಇಲ್ಲದೆ ಮಾರಾಟ ಮಾಡಿದರೆ ಮತ್ತೆ ದಂಡ ಕಟ್ಟಬೇಕಾಗುತ್ತದೆ ಎಂದು ವ್ಯಾಪಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.‌

ಬೀದಿಬದಿ ವ್ಯಾಪಾರಸ್ಥರನ್ನು ಮೀಟರ್ ಬಡ್ಡಿದಂಧೆಯಿಂದ ಹೊರತರಲು ಪ್ರತಿನಿತ್ಯ ಸಾಲ ನೀಡುವ ‘ಪ್ರಧಾನ ಮಂತ್ರಿ ಶ್ರೀ’ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆರಂಭದಲ್ಲಿ ₹10ಸಾವಿರ ಸಾಲ ನೀಡಲಾಗುತ್ತದೆ. ಸಮರ್ಪಕವಾಗಿ ಹಿಂತಿರುಗಿಸಿದರೆ ₹20ಸಾವಿರ ಸಾಲ ಸಿಗುತ್ತದೆ. ಅದನ್ನು ಸದಸುಪಯೋಗಪಡಿಸಿಕೊಂಡು ನಿಯಮಿತವಾಗಿ ಮರುಪಾವತಿ ಮಾಡಿದರೆ ₹50ಸಾವಿರ ಸಾಲ ಸಿಗುತ್ತದೆ. ಬೀದಿಬದಿ ವ್ಯಾಪಾರಸ್ಥರನ್ನು ಮೀಟರ್ ಬಡ್ಡಿ ದಂಧೆಯಿಂದ ಮುಕ್ತಗೊಳಿಸಬೇಕು ಎಂಬುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ.

ಯೋಜನೆ ಉದ್ದೇಶ, ಗುರಿ ಒಳ್ಳೆಯದು. ಆದರೆ, ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬಹುತೇಕ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ಬೀದಿಬದಿ ವ್ಯಾಪಾರಸ್ಥರಾಗಿ ನೋಂದಣಿ ಮಾಡಿಕೊಂಡು ವ್ಯಾಪಾರದ ಪರವಾನಗಿ ಹೊಂದಿರುವವರು ನಗರಸಭೆಗೆ ಅರ್ಜಿ ಸಲ್ಲಿಸಬೇಕು. ನಗರಸಭೆ ಶಿಫಾರಸುನೊಂದಿಗೆ ಬ್ಯಾಂಕಿಗೆ ಕಳುಹಿಸಬೇಕು. ನಗರಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ವ್ಯವವಹಾರ ನೋಡಿಕೊಳ್ಳಲು ಕಾಯಂ ಸಿಬ್ಬಂದಿಯೇ ಇಲ್ಲ ಎಂದು ವ್ಯಾಪಾರಿಗಳು ದೂರುತ್ತಾರೆ.

ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಯಾರನ್ನೋ ನೇಮಕ ಮಾಡಿಕೊಂಡಿರುತ್ತಾರೆ. ಅವರಿಗೆ ಜವಾಬ್ದಾರಿ ಇರುವುದಿಲ್ಲ. ಸಾಲದ ಅರ್ಜಿ ಸಕಾಲದಲ್ಲಿ ಬ್ಯಾಂಕ್‌ಗಳಿಗೆ ರವಾನೆ ಮಾಡುವುದಿಲ್ಲ. ವಿದ್ಯುತ್ ಇಲ್ಲ, ಸರ್ವರ್ ಸಮಸ್ಯೆ ಎಂದು ವಿವಿಧ ನೆಪಗಳಿಂದ ಅಲೆದಾಡಿಸುತ್ತಾರೆ. ವ್ಯಾಪಾರ ಮಾಡುವುದನ್ನು ತ್ಯಜಿಸಿ ಬಂದು ಪ್ರತಿನಿತ್ಯ ನಗರಸಭೆಯಲ್ಲಿ ಕೂಡಲು ಸಾಧ್ಯವೇ? ನಗರಸಭೆಯಿಂದ ಬ್ಯಾಂಕ್‌ಗೆ ಅರ್ಜಿ ರವಾನೆಯಾದರೆ ಅಲ್ಲಿ ಮತ್ತೆ ಅಡ್ಡಿ ಮಾಡುತ್ತಾರೆ. ಅಲೆದು ಅಲೆದು ಸುಸ್ತಾಗಿ ಮತ್ತೆ ಮೀಟರ್ ಬಡ್ಡಿ ಬಂಡವಾಳಗಾರರ ಹತ್ತಿರವೇ ಸುಳಿಯುವಂತಾಗಿದೆ ಎನ್ನುತ್ತಾರೆ ಬೀದಿಬದಿ ವ್ಯಾಪಾರಸ್ಥರು.

ನಗರದ ರಾಮಕುಂಟೆ ಮೈದಾನ ಹಾಗೂ ನಗರದ ಗ್ರಂಥಾಲಯದ ಪಕ್ಕದಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಸುಮಾರು ₹2ಕೋಟಿ ವೆಚ್ಚದಲ್ಲಿ 220 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮೂಲ ಸೌಕರ್ಯ ಕೊರತೆಯಿಂದ ವ್ಯಾಪಾರಿಗಳು ಮಳಿಗೆಗಳತ್ತ ಬರುತ್ತಿಲ್ಲ. ಕಳೆದ ಐದು ವರ್ಷದಿಂದ ಅವುಗಳ ವಿತರಣೆಯಾಗಿಲ್ಲ.

ನಗರದ ಅಜಾದ ಚೌಕದಲ್ಲಿ ವ್ಯಾಪಾರ ಮಾಡುತ್ತಿದ್ದ ಬಡವರಾದ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿ, ಶ್ರೀಮಂತರ ಕಾರುಗಳ ಪಾರ್ಕಿಂಗ್‌ಗೆ ಅನುಕೂಲ ಮಾಡಿದ್ದಾರೆ. ಇತ್ತೀಚೆಗೆ ಹಬ್ಬಗಳ ವ್ಯಾಪಾರವನ್ನು ಗ್ರಂಥಾಲಯದ ಬಳಿಗೆ ಸ್ಥಳಾಂತರ ಮಾಡಿರುವುದು ಸಹ ಬೀದಿ ಬದಿ ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ನಗರಸಭೆಯಿಂದ ಬೀದಿ ಬದಿಯ ವ್ಯಾಪಾರಸ್ಥರಿಗಾಗಿ ನಿರ್ಮಾಣವಾಗಿರುವ ಅವೈಜ್ಞಾನಿಕ ಅಂಗಡಿ
ನಗರದಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಐ.ಡಿ.ಎಸ್.ಎಂ.ಟಿ ಅಂಗಡಿ ಮೇಲ್ಬಾಗದಲ್ಲಿ ಸ್ಥಳಾವಕಾಶ ನೀಡಲು ಉನ್ನತ ಶಿಕ್ಷಣ ಸಚಿವರು ಯೋಜನೆ ರೂಪಿಸಲು ಚಿಂತನೆ ನಡೆಸಿದ್ದಾರೆ
ಜಿ.ಎನ್.ಚಲಪತಿ ಪೌರಾಯುಕ್ತ
ನಗರಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ವಿಭಾಗಕ್ಕೆ ಒಬ್ಬರು ಕಾಯಂ ಸಿಬ್ಬಂದಿ ನೇಮಕ ಮಾಡಬೇಕು. ಪ್ರಸ್ತುತ ಕಾಯಂ ಸಿಬ್ಬಂದಿ ಇಲ್ಲದೆ ತೊಂದರೆ ಆಗುತ್ತಿದ್ದು ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ.
ಸೂಫಿ ಸಲೀಂ ಅಧ್ಯಕ್ಷ ಕರ್ನಾಟ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟ
ಬದುಕು ಬೀದಿ ಮೇಲೆ ಎನ್ನುವಂತಾಗಿದೆ. ವ್ಯಾಪಾರಸ್ಥರಿಗೆ ಸ್ಥಳಾವಕಾಶ ಮಾಡಿಕೊಡಬೇಕು. ಮಳೆ ಬಿಸಿಲಿನಿಂದ ರಕ್ಷಣೆ ಕುಡಿಯುವ ನೀರು ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು
ರತ್ನಮ್ಮ ಬೀದಿಬದಿ ತರಕಾರಿ ವ್ಯಾಪಾರಿ
ವರ್ಷದಿಂದ ಸಭೆ ನಡೆಸಿಲ್ಲ
ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ನಿವಾರಣೆ ಹಾಗೂ ಕ್ಷೇಮಾಭಿವೃದ್ಧಿಗಾಗಿ ‘ಪಟ್ಟಣ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಮಿತಿ’ ಇದೆ. ಸಮಿತಿಯಲ್ಲಿ 10 ಜನ ಚುನಾಯಿತ ವ್ಯಾಪಾರಿಗಳು ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಒಬ್ಬರು ಎಪಿಎಂಸಿ ಕಾರ್ಯದರ್ಶಿ ಹಾಗೂ ನಗರಸಭೆ ಪೌರಾಯುಕ್ತರು ಅಧ್ಯಕ್ಷ ಸಂಬಂಧಿಸಿದ ಕೇಸ್ ವರ್ಕರ್ ಸಹಾಯಕ ಸೇರಿ ಒಟ್ಟು 5 ಮಂದಿ ಸರ್ಕಾರಿ ಸದಸ್ಯರಿರುತ್ತಾರೆ. ಕನಿಷ್ಠ ತಿಂಗಳಿಗೊಂದು ಸಭೆ ನಡೆಸಿ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಳೆದ ಒಂದು ವರ್ಷದಿಂದ ಸಭೆ ನಡೆಸಿಲ್ಲ ಎಂದು ವ್ಯಾಪಾರಸ್ಥರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.