ADVERTISEMENT

ಶಿಡ್ಲಘಟ್ಟ: ನುಣುಪಾದ ರೇಷ್ಮೆ ತಯಾರಿಕೆಯಲ್ಲಿ ಸೈಕಲ್ ಟೈರ್

ಒಲೆ ಉರಿಸಲು ಬಳಕೆ

ಡಿ.ಜಿ.ಮಲ್ಲಿಕಾರ್ಜುನ
Published 22 ಸೆಪ್ಟೆಂಬರ್ 2023, 6:11 IST
Last Updated 22 ಸೆಪ್ಟೆಂಬರ್ 2023, 6:11 IST
ಶಿಡ್ಲಘಟ್ಟದಲ್ಲಿ ಹಳೆಯ ಟೈರ್ ಮಾರಾಟ
ಶಿಡ್ಲಘಟ್ಟದಲ್ಲಿ ಹಳೆಯ ಟೈರ್ ಮಾರಾಟ   

ಶಿಡ್ಲಘಟ್ಟ: ಹಳೆಯ, ಸವೆದುಹೋದ, ಕೆಲಸಕ್ಕೆ ಬಾರದ ಸೈಕಲ್ ಟೈರ್‌ಗಳನ್ನು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಮಾರುತ್ತಿರುತ್ತಾರೆ. ಇದನ್ನು ಏತಕ್ಕೆ ಬಳಸುತ್ತಾರೆಂದು ಎಲ್ಲರೂ ಹುಬ್ಬೇರಿಸಬಹುದು. ರೇಷ್ಮೆ ತಯಾರಿಕೆಯಲ್ಲಿ ಈ ಟೈರಿನ ಪಾತ್ರವೂ ಇದೆ ಎಂದರೆ ಯಾರಾದರೂ ನಂಬಲು ಸಾಧ್ಯವೆ? ಆದರೆ ಇದು ಸತ್ಯ.

ರೇಷ್ಮೆ ಮಾರುಕಟ್ಟೆಯಿಂದ ತಂದ ರೇಷ್ಮೆ ಗೂಡನ್ನು ಕುದಿಯುವ ನೀರಿನಲ್ಲಿ ಹಾಕಿ ನಂತರ ರೇಷ್ಮೆ ನೂಲನ್ನು ತೆಗೆಯುವುದು ಎಲ್ಲರಿಗೂ ತಿಳಿದ ಸಂಗತಿ. ಆ ನೀರು ಕಾಯಿಸಲು ಬೆಳಿಗ್ಗೆ ಒಲೆಯನ್ನು ಉರಿಸಲು ಈ ಟೈರನ್ನು ಬಳಸುತ್ತಾರೆ. ಪ್ರತಿ ದಿನ ನಡೆಯುವ ಈ ಕೆಲಸದಲ್ಲೂ ವಿಜ್ಞಾನವಿದೆ ಮತ್ತು ನುಣುಪಾದ ರೇಷ್ಮೆ ತಯಾರಿಕೆಯಲ್ಲಿ ಹಳೆಯ ಟೈರೂ ಸಹ ಕೊಡುಗೆಯನ್ನು ನೀಡುತ್ತಿದೆ.

ರೇಷ್ಮೆ ಘಟಕದಲ್ಲಿ ನೀರನ್ನು ಕುದಿಸಲು ಬೆಳಿಗ್ಗೆ ಮಾಡುವ ತಯಾರಿ ಹೀಗಿರುತ್ತದೆ - ಚಿಕ್ಕ ಚಿಕ್ಕ ಚಕ್ಕೆಗಳಾಗಿ ಕತ್ತರಿಸಿಟ್ಟಿರುವ ಹುಣಸೆ ಸೌದೆಯನ್ನು ಒಲೆಯೊಳಗೆ ಗೋಪುರದಂತೆ ಜೋಡಿಸುತ್ತಾರೆ. ಅರ್ಧ ಅಡಿ ಉದ್ದದ ಟೈರಿನ ತುಂಡಿಗೆ ಬೆಂಕಿ ಅಂಟಿಸಿ ಸೌದೆ ಅಡಿ ಇಟ್ಟರೆ ಸಾಕು ದೀಪ ಉರಿಯುವಂತೆ ಟೈರು ಉರಿಯುತ್ತದೆ. ಉರಿಯುವ ಟೈರಿನಿಂದ ಸೌದೆ ನಿಧಾನವಾಗಿ ಅಂಟಿಕೊಳ್ಳುತ್ತದೆ. ನಂತರ ಉರಿಯುತ್ತಿರುವ ಒಲೆಯೊಳಗೆ ದೊಡ್ಡ ದೊಡ್ಡ ಸೌದೆಗಳನ್ನು ತುಂಬುತ್ತಾ ಹೋಗಬಹುದು. ಒಲೆ ಹೊತ್ತಿಸಲು ಸೀಮೆ ಎಣ್ಣೆ ಅಥವಾ ಊದಲು ಕೊಳವೆ ಇತ್ಯಾದಿಗಳ ಅಗತ್ಯವಿಲ್ಲ.

ADVERTISEMENT

ಆಂಧ್ರದ ಕರ್ನೂಲು, ಕಡಪಗಳಿಂದ ತಲಾ ಹದಿನೈದರಿಂದ ಹದಿನೆಂಟು ರೂಗಳಿಗೆ ತರಿಸಿ ಇಲ್ಲಿ ಇಪ್ಪತ್ತು ರೂಗಳಿಗೆ ಮಾರುವ ನಗರದ ನಿವಾಸಿ ಕಮಾಲುದ್ದೀನ್ ಪ್ರತಿ ದಿನ ಸರಾಸರಿ 500 ಟೈರ್‌ಗಳು ಮಾರಾಟವಾಗುತ್ತವೆ ಎನ್ನುತ್ತಾರೆ. ಟೈರ್‌ಗೆ ಹೊಂದಿಕೊಂಡು ತುದಿಯಲ್ಲಿರುವ ಕಂಬಿಯನ್ನು ಬೇರ್ಪಡಿಸಿ ಇಟ್ಟಿರುತ್ತಾರೆ. ಕೆಲವನ್ನು ತುಂಡುಗಳನ್ನಾಗಿ ಮಾಡಿ ಸಹ ಬಿಡಿ ಬಿಡಿಯಾಗಿಯೂ ಮಾರುತ್ತಾರೆ.

ಸುಮಾರು ಮೂರು ದಶಕಗಳಿಂದಲೂ ಇದೇ ವೃತ್ತಿಯನ್ನು ನಂಬಿ ಬದುಕುತ್ತಿದ್ದೇನೆ. ಈ ಇಳಿವಯಸ್ಸಿನಲ್ಲಿ ಬೇರೆ ವೃತ್ತಿ ಮಾಡಲೂ ಆಗದು. ಶಿಡ್ಲಘಟ್ಟದಲ್ಲಿ ರೇಷ್ಮೆ ಇರುವವರೆಗೂ ಈ ವೃತ್ತಿಗೆ ಮೋಸವಿಲ್ಲ ಎನ್ನುವರು ಕಮಾಲುದ್ದೀನ್.

ಶಿಡ್ಲಘಟ್ಟದಲ್ಲಿ ಸುಮಾರು 4,500 ರೇಷ್ಮೆ ತಯಾರಿಕಾ ಘಟಕಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.