ADVERTISEMENT

‘ಸುಂದರಿ’ಯ ‘ಕೋಟಿ’ ಆಸೆಗೆ ಸಾಲಗಾರನಾದ!

ವೈವಾಹಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಗೆ ಮರುಳಾಗಿ ₹ 33 ಲಕ್ಷ ಕಳೆದುಕೊಂಡ ನಗರದ ಎಲೆಕ್ಟ್ರಿಷಿಯನ್

ಈರಪ್ಪ ಹಳಕಟ್ಟಿ
Published 21 ಸೆಪ್ಟೆಂಬರ್ 2019, 10:25 IST
Last Updated 21 ಸೆಪ್ಟೆಂಬರ್ 2019, 10:25 IST
ವಂಚಕಿ ಮುನಿರಾಜು ಅವರಿಗೆ ಕಳುಹಿಸಿದ ವಾಟ್ಸಪ್ ಸಂದೇಶ
ವಂಚಕಿ ಮುನಿರಾಜು ಅವರಿಗೆ ಕಳುಹಿಸಿದ ವಾಟ್ಸಪ್ ಸಂದೇಶ   

ಚಿಕ್ಕಬಳ್ಳಾಪುರ: ವೈವಾಹಿಕ ಜಾಲತಾಣದಲ್ಲಿ ನಗರದ ಎಲೆಕ್ಟ್ರಿಷಿಯನ್ ಒಬ್ಬರನ್ನು ಪರಿಚಯ ಮಾಡಿಕೊಂಡ ಮಹಿಳೆಯೊಬ್ಬಳು ಮದುವೆಯಾಗುವೆ, ಬ್ಯಾಂಕ್ ಖಾತೆಗೆ ₹1.50 ಕೋಟಿ ಜಮೆ ಮಾಡುವೆ ಎಂಬ ಆಸೆ ತೋರಿಸಿ ₹33 ಲಕ್ಷ ವಂಚಿಸಿದ್ದಾಳೆ. ಮೋಸ ಹೋದ ವ್ಯಕ್ತಿ ಈಗ ಸಾಲಗಾರನಾಗಿ ತಲೆಮರೆಸಿಕೊಂಡು ಓಡಾಡುವಂತಾಗಿದೆ.

ನಗರದ ಚಾಮರಾಜಪೇಟೆಯ ಟೀಚರ್ ಕಾಲೋನಿ ನಿವಾಸಿ ಆರ್.ಕೆ.ಮುನಿರಾಜು ವಂಚನೆಗೆ ಒಳಗಾದವರು. ವಿವಾಹಿತರಾಗಿರುವ ಮುನಿರಾಜು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೌಟುಂಬಿಕ ಕಲಹದಿಂದಾಗಿ ಅವರು ಎರಡನೇ ಮದುವೆಗೆ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಪಂಜಾಬ್‌ ಮೂಲದವಳು, ಇಟಲಿಯಲ್ಲಿ ಕೆಲಸ ಮಾಡುತ್ತಿರುವೆ ಎಂದು ವಾಟ್ಸಪ್‌ನಲ್ಲಿ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ನಯವಾದ ಮಾತುಗಳನ್ನಾಡಿ ವಿಶ್ವಾಸ ಗಿಟ್ಟಿಸಿಕೊಂಡು ವಂಚಿಸಿದ್ದಾಳೆ.

‘ನಾನು ಜೆ.ದಕ್ಷಾ ಪಟೇಲ್, ಇಟಲಿಯ ಪೆಪ್ಸಿಕೊ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವೆ. ನಿಮ್ಮನ್ನು ಇಷ್ಟಪಟ್ಟಿರುವೆ’ ಎಂದು ಭಾವಚಿತ್ರ ಸಮೇತ ವಾಟ್ಸಪ್‌ ಮೂಲಕ ಕಳೆದ ಜುಲೈ 31 ರಂದು ಮುನಿರಾಜು ಅವರನ್ನು ಪರಿಚಯಿಸಿಕೊಂಡ ಮಹಿಳೆ, ಸುಮಾರು 15 ದಿನಗಳು ಚಾಟಿಂಗ್‌ ಮಾಡಿ ನಂಬಿಕೆ ಗಳಿಸಿಕೊಂಡು ಬಳಿಕ ಮದುವೆ ಮತ್ತು ಕೋಟಿಗಟ್ಟಲೇ ಹಣದ ಆಮಿಷದ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ.

ADVERTISEMENT

ವಂಚಕಿಯ ಸಂಚನ್ನು ಅರಿಯದ ಮುನಿರಾಜು, ಆ.8 ರಿಂದ 21ರ ವರೆಗೆ ಆರೋಪಿ ನೀಡಿದ್ದ ಎಂಟು ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 33 ಲಕ್ಷವನ್ನು ಆರ್‌ಟಿಜಿಎಸ್‌ ಮೂಲಕ ಜಮೆ ಮಾಡಿದ್ದಾರೆ. ಹಣ ಜಮೆ ಆಗುತ್ತಿದ್ದಂತೆಯೇ ಆರೋಪಿಯ ನಾಲ್ಕು ಮೊಬೈಲ್ ಸಂಖ್ಯೆಗಳು ಆ.21ರ ಮಧ್ಯಾಹ್ನದಿಂದ ಸ್ವಿಚ್ಡ್‌ಆಫ್ ಆಗಿವೆ. ಮಹಿಳೆಯಿಂದ ಏನಾದರೂ ಪ್ರತಿಕ್ರಿಯೆ ಬರಬಹುದೆಂದು ಅನೇಕ ದಿನಗಳಿಂದ ಕಾಯ್ದ ಮುನಿರಾಜು ಅವರು, ಇತ್ತೀಚೆಗೆ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

‘ಆಗಸ್ಟ್‌ 8 ರಂದು ನಾನು ದೆಹಲಿಗೆ ಬಂದಿರುವುದಾಗಿ ತಿಳಿಸಿದ ಮಹಿಳೆ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಆಂಟಿ ಟೆರರಿಸಂ ಸರ್ಟಿಫಿಕೆಟ್‌ ಕೇಳುತ್ತಿದ್ದಾರೆ, ಹಣಕಾಸು ಸಚಿವಾಲಯದ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಮನಿ ಲಾಂಡ್ರಿಂಗ್ ಶುಲ್ಕ ಇತ್ಯಾದಿ ನೆಪದಲ್ಲಿ ಆ ಒಂದೇ ದಿನ ವಿವಿಧ ಬ್ಯಾಂಕ್‌ ಖಾತೆಯ ಮಾಹಿತಿ ನೀಡಿ ₹1.78 ಲಕ್ಷ ಜಮೆ ಮಾಡಿಸಿಕೊಂಡಳು’ ಎಂದು ಮುನಿರಾಜು ದೂರಿನಲ್ಲಿ ತಿಳಿಸಿದ್ದಾರೆ.

‘ಆ.21ರ ವರೆಗೆ ಮಹಿಳೆ ವಿವಿಧ ಶುಲ್ಕಗಳ ನೆಪದಲ್ಲಿ ನನ್ನಿಂದ ಸುಮಾರು ₹33 ಲಕ್ಷ ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಿಸಿಕೊಂಡು, ಮೊಬೈಲ್ ಸಂಖ್ಯೆಗಳನ್ನು ಸ್ವಿಚ್ಡ್ಆಫ್‌ ಮಾಡಿಕೊಂಡಳು. ನನಗೆ ಅನುಮಾನ ಬಂದು ನಗರದ ಎಸ್‌ಬಿಐ ಬ್ಯಾಂಕಿನ ಅಧಿಕಾರಿಗಳ ಬಳಿ ವಿಚಾರಿಸಿದಾಗ ವಂಚನೆಗೆ ಒಳಗಾಗಿದ್ದು ತಿಳಿಯಿತು’ ಎಂದು ವಂಚನೆಗೊಳಗಾದ ಮುನಿರಾಜು ಹೇಳಿದರು.

‘ಆ ಮಹಿಳೆ ಆರಂಭದಲ್ಲಿ ನನ್ನ ಖಾತೆಗೆ ₹1.58 ಕೋಟಿ ಜಮೆ ಮಾಡುವುದಾಗಿ ತಿಳಿಸಿದಳು. ಅದಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನೀಡಿದೆ ಎನ್ನಲಾದ ಅನುಮೋದನೆ ಪತ್ರ, ವಕೀಲರ ಕಾನೂನು ಸಲಹೆ ಪ್ರತಿಗಳನ್ನು ನನಗೆ ವಾಟ್ಸಪ್‌ ಮಾಡಿದಳು. ಆಕೆಯ ಮಾತನ್ನು ನಂಬಿ ನನ್ನ ಬಳಿ ಇದ್ದ ₹5 ಲಕ್ಷದ ಜತೆಗೆ ಪರಿಚಯದವರ ಬಳಿ ₹28 ಲಕ್ಷ ಸಾಲ ಮಾಡಿ ಆಕೆ ಹೇಳಿದಂತೆ ಹಣ ಕಟ್ಟಿ ಮೋಸ ಹೋದೆ’ ಎಂದು ಅಳಲು ತೋಡಿಕೊಂಡರು.

‘ಮೋಸ ಹೋದದ್ದು ಅರಿವಾಗುತ್ತಿದ್ದಂತೆ ₹25 ಲಕ್ಷವಾದರೂ ವಾಪಸ್‌ ಕೊಡು, ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪರಿಪರಿಯಾಗಿ ವಾಟ್ಸಪ್‌ನಲ್ಲಿ ಮನವಿ ಮಾಡಿಕೊಂಡರೂ ವಂಚಕಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸದ್ಯ ಸಾಲಗಾರರ ಕಾಟ ತಾಳಲಾಗುತ್ತಿಲ್ಲ. ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.