ADVERTISEMENT

ವಿಶ್ವ ಅಪ್ಪಂದಿರ ದಿನ: ಅಪ್ಪನಿಲ್ಲದೆ ಅನಾಥ ಪ್ರಜ್ಞೆ

ಚಿಂತಾಮಣಿ ತಾಲ್ಲೂಕಿನ ಮುನುಗನಹಳ್ಳಿಯ ಕುಟುಂಬ

ಎಂ.ರಾಮಕೃಷ್ಣಪ್ಪ
Published 20 ಜೂನ್ 2021, 3:26 IST
Last Updated 20 ಜೂನ್ 2021, 3:26 IST
ಅಕ್ಕಂದಿರ ಜತೆ ಮಂಜುನಾಥ್
ಅಕ್ಕಂದಿರ ಜತೆ ಮಂಜುನಾಥ್   

ಚಿಂತಾಮಣಿ: ‘ನಮ್ಮ ತಂದೆಗೆ 6 ಮಕ್ಕಳು. ನನಗೆ ಐದು ಜನ ಅಕ್ಕಂದಿರು. ನಾನೇ ಕೊನೆಯ ಮಗ. ಅಪ್ಪ ನನ್ನನ್ನು ಬಹಳ ಅಕ್ಕರೆ, ಮುದ್ದಿನಿಂದ ಸಾಕಿದ್ದರು. ಇನ್ನು ನನಗೆಲ್ಲಿ ಅಪ್ಪನ ಪ್ರೀತಿ, ಅಪ್ಪುಗೆ?

ಇದು ತಾಲ್ಲೂಕಿನ ಮುನುಗನಹಳ್ಳಿಯ ‌ಮುನಿರಾಮಪ್ಪ ಅವರ ಪುತ್ರ ಮಂಜುನಾಥ್ ಅವರ ನೋವಿನ ನುಡಿಗಳು.

ಮುನುಗನಹಳ್ಳಿಯಲ್ಲಿ ಮುನಿರಾಮಪ್ಪ ಅವರದ್ದು ಕೃಷಿಕ ಕುಟುಂಬ. ಪುತ್ರ ಸಂತಾನಕ್ಕಾಗಿ ಅಪೇಕ್ಷಿಸಿದ್ದ ಅವರಿಗೆ ಆರನೇ ಮಗನಾಗಿ ಮಂಜುನಾಥ್ ಜನಿಸಿದರು. ಕೊನೆಯ ಮಗನಾದ ಕಾರಣ ಐದು ಅಕ್ಕಂದಿರಿಗೆ ಮತ್ತು ಅಪ್ಪನಿಗೆ ಮಂಜುನಾಥ್ ಮೇಲೆ ಅಪಾರ ಪ್ರೀತಿ. ಹೀಗಿದ್ದ ತುಂಬು ಕುಟುಂಬಕ್ಕೆ ಕೊರೊನಾ ಕರಿ ನೆರಳು ಬಿದ್ದಿತು. ಮೇ 23ರಂದು ಮುನಿರಾಮಪ್ಪ ಕೊರೊನಾ ಸೋಂಕಿನಿಂದ ಮೃತಪಟ್ಟರು.

ADVERTISEMENT

ನಾನೂ ಸಹ ಅಪ್ಪನ ಕೃಷಿ ಚಟುವಟಿಕೆಗಳಿಗೆ ಕೈ ಜೋಡಿಸುತ್ತಿದ್ದೆ. ಅಪ್ಪನಿಗೆ ಒಂದು ದಿನ ನೆಗಡಿ, ಕೆಮ್ಮು ಕಾಣಿಸಿಕೊಂಡಿತು. ಮಾತ್ರೆ ತೆಗೆದುಕೊಂಡು ಎಂದಿನಂತೆ ಕೆಲಸ ಮಾಡಿಕೊಂಡಿದ್ದರು. 3 ದಿನಗಳ ನಂತರ ಜ್ವರ ಹೆಚ್ಚಿತು. ಕೋವಿಡ್ ಸೋಂಕಿತರಾಗಿರುವುದು ಪರೀಕ್ಷೆಯಿಂದ ದೃಢವಾಯಿತು.‌ ಚಿಂತಾಮಣಿಯ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆವು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಮಂಜುನಾಥ್ ಶೋಕಿಸುತ್ತಾರೆ.

ಸಮಾಜದಲ್ಲಿ ಯಾವುದನ್ನು ಬೇಕಾದರೂ ಮತ್ತೆ ಪಡೆಯಬಹುದು. ಅಪ್ಪ-ಅಮ್ಮನ ಪ್ರೀತಿಯನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಅಪ್ಪ ಇದ್ದಾಗ ಅವರ ಬೆಲೆ, ಅಗತ್ಯ, ಅನಿವಾರ್ಯ ಅಷ್ಟಾಗಿ ಗೋಚರಿಸುವುದಿಲ್ಲ. ಕಳೆದು ಹೋದಮೇಲೆ ಅವರ ಅಗತ್ಯದ ಅರಿವಾಗುತ್ತದೆ. ಅಪ್ಪ ಇಲ್ಲದ ಅನಾಥ ಪ್ರಜ್ಞೆ ಕಾಡುತ್ತದೆ ಎಂದು ನೋವನ್ನು ತೋಡಿಕೊಳ್ಳುತ್ತಾರೆ.

ಕುಟುಂಬಕ್ಕೆ ಆಧಾರವಾಗಿದ್ದ ಮುನಿರಾಮಪ್ಪ ಅವರ ಸಾವಿನಿಂದ ಪತ್ನಿ ಮತ್ತು ಮಗ ಅನಾಥರಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದರು. ಅವರ ಅಕಾಲಿಕ ಮರಣದಿಂದ ಕುಟುಂಬವು ಕಣ್ಣೀರಿಡುತ್ತಿದೆ. ಅಪ್ಪನ ವ್ಯವಹಾರಗಳು ಸಾಲ ಸೋಲ ಮತ್ತಿತರ ಯಾವುದೇ ವ್ಯವಹಾರವೂ ಗೊತ್ತಿಲ್ಲದೆ ಪರದಾಡುವಂತಾಗಿದೆ.

ಸರ್ಕಾರ ಕೋವಿಡ್ ನಿಂದ ತಂದೆ, ತಾಯಿ ಕಳೆದುಕೊಂಡ ಕುಟುಂಬ ಮತ್ತು ಮಕ್ಕಳಿಗೆ ಸಹಾಯ ಮಾಡುವ ಭರವಸೆ ನೀಡುತ್ತಿದೆ. ಇದು ಕೇವಲ ಭರವಸೆಯಾಗದೆ ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕು. ಸರ್ಕಾರ ಮತ್ತು ಅಧಿಕಾರಿಗಳು ಅವರ ನೆರವಿಗೆ ಧಾವಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.