ಚಿಕ್ಕಬಳ್ಳಾಪುರ: ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಪದ್ಮಶ್ರೀ ಪ್ರಶಸ್ತಿ...ಹೀಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ದೊಡ್ಡ ಗೌರವಕ್ಕೆ ಪಾತ್ರರಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ‘ಪದ್ಮಶ್ರೀ’ ಮುನಿವೆಂಕಟಪ್ಪ ಅವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಕೊಳವೆ ಬಾವಿ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ!
2023ರಲ್ಲಿ ಮುನಿವೆಂಕಟಪ್ಪ ‘ಪದ್ಮಶ್ರೀ’ ಪ್ರಶಸ್ತಿಗೆ ಗೆ ಭಾಜನರಾದರು. ಆಗ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸೌಲಭ್ಯ ಕಲ್ಪಿಸುವಂತೆ ಕೋರಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದರು. ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಕೊಳವೆ ಬಾವಿ ಮಂಜೂರಿಗೆ ಅನುಮೋದನೆ ದೊರೆತಿತ್ತು.
2023ರ ಫೆಬ್ರುವರಿಯಲ್ಲಿ ಘಟಕದ ವೆಚ್ಚ ₹4.50 ಲಕ್ಷ ನಿಗದಿಪಡಿಸಿ ಮಂಜೂರಾತಿ ಆದೇಶ ಪತ್ರವನ್ನೂ ಈ ಹಿರಿಯ ಕಲಾವಿದರ ಹೆಸರಿಗೆ ನಿಗಮ ನೀಡಿತ್ತು. ಅಂದಿನಿಂದ ಕೊಳವೆಬಾವಿಗಾಗಿ ಮುನಿವೆಂಕಟಪ್ಪ ಮತ್ತು ಅವರ ಪುತ್ರ ಪ್ರಸನ್ನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಕಚೇರಿಗೆ ಅಲೆಯುತ್ತಲೇ ಇದ್ದಾರೆ.
‘2019ರಲ್ಲಿಯೇ ಗಂಗಾ ಕಲ್ಯಾಣ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದೆವು. ಸ್ಥಳೀಯ ಶಾಸಕರೂ ಅನುಮೋದಿಸಿದ್ದರು. ಆದರೆ, ಆಗಲೂ ನಮಗೆ ಕೊಳವೆ ಬಾವಿ ಮಂಜೂರು ಆಗಿರಲಿಲ್ಲ. ‘ಪದ್ಮಶ್ರೀ’ ಗೌರವ ದೊರೆತ ನಂತರ ಅಂದಿನ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಿದೆವು. ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡಿದರು. ಹಳೆ ಕಡತಕ್ಕೆ ಮತ್ತೆ ಮರು ಜೀವ ನೀಡಿದರು’ ಎಂದು ಮುನಿವೆಂಕಟಪ್ಪ ಅವರ ಪುತ್ರ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ಮತ್ತು ನಮ್ಮ ತಂದೆ ನಿಗಮದ ಕಚೇರಿಗೆ ಭೇಟಿ ನೀಡಿದಾಗ ಇನ್ನೊಂದು ತಿಂಗಳು ಬಿಟ್ಟು ಬನ್ನಿ, ಹದಿನೈದು ದಿನ ಬಿಟ್ಟು ಬನ್ನಿ ಎಂದು ಹೇಳುತ್ತಲೇ ಇದ್ದಾರೆ. ವರ್ಷವಾದರೂ ಸೌಲಭ್ಯ ದೊರೆತಿಲ್ಲ. ಕೊಳವೆ ಬಾವಿ ಕೊರೆಯಲು ಯಾರೂ ಟೆಂಡರ್ ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ಕಾರಣ ಹೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸೋಮವಾರ (ಮೇ 20) ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸಮಸ್ಯೆ ಏನು ಎನ್ನುವುದನ್ನು ತಿಳಿದು ಪರಿಹರಿಸುತ್ತೇನೆ.
ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ
ಸೋಮವಾರ ಮತ್ತೆ ಭೇಟಿ
’ ಮೇ 17ರ ನಂತರ ಬನ್ನಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ (ಮೇ 20) ಕಚೇರಿಗೆ ಹೋಗುವೆ. ಅವರು ಏನು ಹೇಳುವರೊ ಆ ವಿಚಾರವನ್ನು ನಿಮಗೆ (ಪ್ರಜಾವಾಣಿ) ತಿಳಿಸುವೆ ಎಂದು ಮುನಿವೆಂಕಟಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.