ADVERTISEMENT

ಮಾಸಾಶನ ನಿಯಮ ಸಡಿಲಿಸಿ: ಸಾಹಿತಿ ಸ.ರಘುನಾಥ್ ಒತ್ತಾಯ

ತೊಗಲುಗೊಂಬೆ ಕಲಾವಿದರು; ಸಾಹಿತಿ ಸ.ರಘುನಾಥ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 15:47 IST
Last Updated 18 ಮಾರ್ಚ್ 2021, 15:47 IST

ಚಿಕ್ಕಬಳ್ಳಾಪುರ: ತೊಗಲುಗೊಂಬೆ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಕೆಲವು ನಿಯಮಗಳು ಕಠಿಣವಾಗಿವೆ. ಇದನ್ನು ಸಡಿಲಿಸಬೇಕು ಎಂದು ಸಾಹಿತಿ ಸ.ರಘುನಾಥ್ ಒತ್ತಾಯಿಸಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ನಡೆದ ತೊಗಲುಗೊಂಬೆ ಕಲಾವಿದರು ಮತ್ತು ರೈತ ಮುಖಂಡರ ಸಭೆಯಲ್ಲಿ ಅವರು ಆಗ್ರಹಿಸಿದರು.

ಜಿಲ್ಲಾ ವಿಭಜನೆಯ ನಂತರ ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಜೀಕವಾಂಡ್ಲಪಲ್ಲಿ ಚಿಕ್ಕಬಳ್ಳಾಪುರದ ಮಡಿಲಿಗೆ ಸೇರಿದವು. ಇದರಿಂದ ತೊಗಲು ಗೊಂಬೆಯಾಟ ಜಿಲ್ಲೆಯ ಅತ್ಯಂತ ಪ್ರಾಚೀನ ಜನಪದ ಕಲೆಯಾಯಿತು. ಆದರೆ ಕಲಾವಿದರ ಬದುಕುಗಳು ಮಾತ್ರ ಬಣ್ಣ ಕಳೆದುಕೊಂಡವು ಎಂದರು.

ADVERTISEMENT

ವಯೋವೃದ್ಧ, ದುರ್ಬಲ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಜೀವನಾಂಶದ ರೂಪದಲ್ಲಿ ಮಾಸಾಶನ ಕೊಡಲಾಗುತ್ತಿದೆ. ಇದು ತೊಗಲುಗೊಂಬೆ ಕಲಾವಿದರಿಗೆ ತಲುಪುತ್ತಿರುವುದು ಇತರೆ ಪ್ರಕಾರದ ಕಲಾವಿದರಿಗೆ ಹೋಲಿಸಿದರೆ ತೀರಾ ಕಡಿಮೆ. ಕಾರಣ, ಕೆಲವು ನಿಯಮಗಳನ್ನು ಈ ಕಲಾವಿದರು ಪೂರೈಸಲು ಸಾಧ್ಯವಿಲ್ಲ ಎಂದರು.

’ಪ್ರಮುಖವಾಗಿ ವಿದ್ಯಾಭ್ಯಾಸದ ಪ್ರಮಾಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಈಗ 60, 80 ವಯೋಮಾನದ ಕಲಾವಿದರು ಅಂದು ಶಾಲೆಗಳಿಗೆ ಹೋಗುವುದು ಸಾಧ್ಯವಾಗಿರಲಿಲ್ಲ. ಅವರ ಅಲೆಮಾರಿತನವೂ ಇದಕ್ಕೆ ಕಾರಣ. ಈಗ ನ್ಯಾಯಾಲಯದಿಂದ ಪ್ರಮಾಣ ಪತ್ರ ಸಲ್ಲಿಸುವುದನ್ನು ಪರ್ಯಾಯದಲ್ಲಿ ಸೂಚಿಸಲಾಗಿದೆ‘ ಎಂದರು.

ಈಗ ಬೇಸಿಗೆ ಕಾಲ. ಪ್ರದರ್ಶನಗಳನ್ನು ಹುಡುಕಿ ಈ ಕಲಾವಿದರು ಹಳ್ಳಿಗಳನ್ನು ಎಡತಾಕಿದ್ದಾರೆ. ಕೊರೊನಾ ಮತ್ತು ಬರದ ಸ್ಥಿತಿಯಲ್ಲಿ ಆಟ ಬಿಟ್ಟು ನ್ಯಾಯಾಲಯಕ್ಕೆ ಅಲೆಯುವುದು ಸಾಧ್ಯವಿಲ್ಲದ ಮಾತು. ಆದ ಕಾರಣ, ಈ ನಿಯಮ ಸಡಿಲಿಸಬೇಕು. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ, ಪಿಡಿಒ ಇಲ್ಲವೆ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲಿಸಬೇಕು. ಕಲಾವಿದರು ಅಲ್ಲಿ ನೆಲೆಸಿರುವ ಅವಧಿಯನ್ನು ದೃಢೀಕರಿಸಿಕೊಡುವ ವರದಿ ಆಧರಿಸಿ ಮಾಸಾಶನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬಹುಭಾಷಾ ಪ್ರದೇಶಗಳಲ್ಲಿ ಈ ಹಿಂದಿನಿಂದಲೂ ತೊಗಲುಗೊಂಬೆ ಆಟದ ಭಾಷೆ ತೆಲುಗೇ ಆಗಿದೆ. ಇವರು ಈ ನೆಲದ ಕಲಾವಿದರೇ ಆಗಿರುತ್ತಾರೆ. ನಮ್ಮ ಬಹುಭಾಷಾ ನಿಯಮದಂತೆ ಭಾಷೆಯನ್ನು ಕಡೆಗಣಿಸದೆ ಕಲೆ ಮತ್ತು ಕಲಾವಿದರ ಜೀವನವನ್ನು ಪರಿಗಣಿಸಿ ಮಾಸಾಶನವನ್ನು ಮಂಜೂರು ಮಾಡುವುದು ಮಾನವೀಯತೆ ಎನಿಸುತ್ತದೆ ಎಂದು ಹೇಳಿದರು.

ಇದನ್ನು ಕಡೆಗಣಿಸುವುದಾದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರಅವಿಭಜಿತ ಜಿಲ್ಲೆಯಲ್ಲಿ ಬರುವ ಮಹತ್ವದ ತತ್ವಪದ ದಾರ್ಶನೀಕರಾದ ಕೈವಾರ ನಾರೇಯಣಪ್ಪ, ಘಟ್ಟಳ್ಳಿ ಆಂಜನಪ್ಪ, ನಾಟಕಕಾರ ಇಡಗೂರು ರುದ್ರಕವಿ, ಹೊಸಹೂಡ್ಯ ವೆಂಕಟರೆಡ್ಡಿಈ ಜಿಲ್ಲೆಯ ಪ್ರಥಮ ಕವಿ ಎನಿಸಿದ ಪಾಲವೇಕರಿ ಕದಿರಿಪತಿ, ತೊರಲಬೈಯ್ಯಾರೆಡ್ಡಿ, ಗುಮ್ಮರಾಜು ರಾಮಕವಿ ಇವರ ಕೃತಿಗಳ ಭಾಷೆ ತೆಲುಗೇ ಆಗಿದೆ. ಆದುದರಿಂದ ಇವುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

’ನಮ್ಮ ಊರು ಬೊಮ್ಮಲಾಟಪುರದಲ್ಲಿ 58 ಮೀರಿದ 10 ಮಂದಿ ಕಲಾವಿದರು ಇದ್ದಾರೆ. ಇವರು ಆರ್ಥಿಕವಾಗಿಯೂ ದುರ್ಬಲರು. ಇಂದಿಗೂ ತೊಗಲುಗೊಂಬೆ ತಯಾರಿಕೆ ಮತ್ತು ಪ್ರದರ್ಶನದಲ್ಲಿ ನಿರತರಾಗಿದ್ದಾರೆ. ಆರೋಗ್ಯದ ಪರಿಸ್ಥಿಯೂ ಹದಗೆಡುತ್ತಿದೆ. ಆದರೂ ವಂಶಪಾರಂಪರ್ಯದ ಕಲೆಯನ್ನು ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ‘ ಎಂದು ಬೊಮ್ಮಲಾಟಪುರದ ತೊಗಲುಗೊಂಬೆ ಆಟದ ಯುವಕಲಾವಿದ ಶ್ರೀನಿವಾಸ್,

ಹೊಟ್ಟೆಪಾಡು ಸಹ ಈ ಕಲೆಯನ್ನು ಉಳಿಸಿಕೊಳ್ಳುವುದರಷ್ಟೇ ಮುಖ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕು. ಕೆಲವು ನಿಯಮಗಳನ್ನು ಸಡಿಲಿಸಿ ಮಾಸಾಶನವನ್ನು ಮಂಜೂರು ಮಾಡಬೇಕು. ತೊಗಲುಗೊಂಬೆ ಕಲೆ, ಕಲಾವಿದ ಹಾಗೂ ಜಿಲ್ಲೆಯ ಸಂಸ್ಕೃತಿಯನ್ನು ಜೀವಂತಗೊಳಿಸಬೇಕು ಎಂದು ಕೋರಿದರು.

ರೈತ ಮುಖಂಡರಾದ ಬಸವರಾಜಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯ ಎಚ್ಚರಿಕೆ

ಮಾಸಾಶನ ವಂಚಿತ ಜಿಲ್ಲೆಯ ತೊಗಲಗೊಂಬೆ ಮತ್ತು ಇತರೆ ಜನಪದ ಕಲಾವಿದರಿಗೆ ಭಾಷೆಯನ್ನೇ ಪರಿಗಣಿಸದೆ ಮಾಸಾಶನ ಮಂಜೂರು ಮಾಡಬೇಕು. ಈ ಬೇಡಿಕೆ ಈಡೇರದಿದ್ದರೆ ಜಿಲ್ಲೆಯ ಸಾಂಸ್ಕೃತಿ ಪರಿಸರವನ್ನು ಉಳಿಸಿಕೊಳ್ಳುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತನ್ನ ಕರ್ತವ್ಯ ಎಂದು ಭಾವಿಸುತ್ತದ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ತಿಳಿಸಿದರು.

ಜಿಲ್ಲೆಯ ಎಲ್ಲ ಜನಪದ ಕಲಾವಿದರ ಪರವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.