ಚಿಕ್ಕಬಳ್ಳಾಪುರ: ಸೈಬರ್ ಅಪರಾಧ ತಡೆ, ಸಂಚಾರ ನಿಯಮಗಳ ಪಾಲನೆ, ಮಾದಕ ವಸ್ತಗಳ ಸೇವನೆಯ ದುಷ್ಪರಿಣಾಮ...ಹೀಗೆ ವಿವಿಧ ಅಪರಾಧ ಚಟುವಟಿಕೆಗಳ ತಡೆ ಮತ್ತು ನಿಯಂತ್ರಿಸುವ ದಿಕ್ಕಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಪೋಸ್ಟರ್ ಅಭಿಯಾನ ಗಮನ ಸೆಳೆಯುತ್ತಿದೆ.
ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಹ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೊಲೀಸರಷ್ಟೇ ಅಲ್ಲ ಪ್ರಜ್ಞಾವಂತ ನಾಗರಿಕರು ಮತ್ತು ಇಲಾಖೆಯ ಈ ಜಾಗೃತಿ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವವರು ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಏನಿದು ಪೋಸ್ಟರ್ ಅಭಿಯಾನ: ‘ಸಾಮಾಜಿಕ ಜಾಲತಾಣ ಜಾಗೃತಿ ಅಭಿಯಾನ’ ಹೆಸರಿನಲ್ಲಿ ಪೊಲೀಸ್ ಇಲಾಖೆಯು ನಿತ್ಯ ಭಿನ್ನ ವಿಭಿನ್ನ ರೀತಿಯಲ್ಲಿ ಪೋಸ್ಟರ್‌ಗಳನ್ನು ರೂಪಿಸುತ್ತಿದೆ. ಅಪರಾಧ ತಡೆ ಮತ್ತು ಜಾಗೃತಿಗೆ ಸಂಬಂಧಿಸಿದ ಪೋಸ್ಟರ್‌ಗಳು ಇವಾಗಿವೆ. ಪೋಸ್ಟರ್‌ಗಳ ಜೊತೆಯಲ್ಲಿ ವಿವಿಧ ಸಹಾಯವಾಣಿಗಳ ಸಂಖ್ಯೆಯೂ ಇವೆ. 112, 1930 ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳನ್ನು ನಮೂದಿಸಲಾಗಿದೆ.
ಈ ಪೋಸ್ಟರ್‌ಗಳಲ್ಲಿ ವಾಹನ ಚಾಲನೆಗೆ ಸಂಬಂಧಿಸಿದ ಸುರಕ್ಷಿತ ಪ್ರಯಾಣ, ದ್ವಿಚಕ್ರ ವಾಹನ ಪ್ರಯಾಣ ಇಬ್ಬರಿಗೆ ಮಾತ್ರ. ಇಬ್ಬರಿಗಿಂತ ಹೆಚ್ಚಿನ ಮಂದಿಗಲ್ಲ. ರಸ್ತೆ ದಾಟುವಾಗ ಜಾಗರೂಕರಾಗಿರಿ, ನಿಮ್ಮ ನಿರ್ಲಕ್ಷ್ಯ ಜೀವವನ್ನು ಕೊನೆಗಾಣಿಸಬಹುದು, ಈ ವರ್ಷ ಹೆಲ್ಮೆಟ್‌ನ ಆಯುಧ ಪೂಜೆಯನ್ನೂ ಮಾಡಿ. ಸುರಕ್ಷತೆ ಮೊದಲು ಹೆಲ್ಮೆಟ್ ಕಡ್ಡಾಯ, ಡ್ರಗ್ಸ್ ನಿಮ್ಮ ಜೀವನದ ಎಲ್ಲ ಕನಸುಗಳನ್ನು ಕೊನೆಗಾಣಿಸುತ್ತದೆ.
ರಸ್ತೆ ದಾಟುವಾಗ ಜಾಗರೂಕರಾಗಿರಿ ಅಪಘಾತ ಸಂಭವಿಸಬಹುದು, ಮೂರ್ಖರಂತೆ ವರ್ತಿಸಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿ. ಕಳೆದುಕೊಂಡ ಮೇಲೆ ಚಿಂತಿಸುವುದರ ಬದಲು ಆರಂಭದಲ್ಲಿಯೇ ಜಾಗರೂಕರಾಗಿರಿ, ನಿಮ್ಮ ಮೊಬೈಲ್‌ಗೆ ಅಪರಿಚಿತ ನಂಬರ್ ಗಳಿಂದ ಬಂದ ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಲಿಂಕ್ ಕ್ಲಿಕ್ ಮಾಡಬೇಡಿ. ಹೀಗೆ ವಿವಿಧ ಅಪರಾಧಗಳ ಕುರಿತು ಪೋಸ್ಟರ್‌ಗಳನ್ನು ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ಪ್ರಮಾಣ ಇತ್ತೀಚೆಗೆ ಹೆಚ್ಚಿತ್ತು. ಆ ಸಮಯದಲ್ಲಿ ನಿರಂತರವಾಗಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಪೊಲೀಸರು ಫೋಸ್ಟರ್‌ಗಳನ್ನು ರೂಪಿಸಿ ಜಾಗೃತಿ ಮೂಡಿಸಿದರು. ಯಾವ ಯಾವ ರೀತಿಯಲ್ಲಿ ಕರೆ ಬರುತ್ತದೆ. ಯಾವ ರೀತಿ ಸೈಬರ್ ವಂಚನೆಗೆ ಒಳಗಾಗುತ್ತೀರಿ ಎಂದು ನಾಗರಿಕರಿಗೆ ಮನಮುಟ್ಟುವ ರೀತಿ ತಿಳಿಸಿದರು. ಅಲ್ಲದೆ ಆ ಪೋಸ್ಟರ್‌ನಲ್ಲಿಯೇ ಸೈಬರ್ ಕ್ರೈಂ ಸಹಾಯವಾಣಿ 1930 ಸಂಖ್ಯೆಯನ್ನೂ ನಮೂದಿಸಿದ್ದರು.
ವಿಡಿಯೊಗಳೂ ಪರಿಣಾಮಕಾರಿ: ಪೋಸ್ಟರ್ ಒಂದು ಬಗೆಯಾದರೆ ವಿಡಿಯೊಗಳನ್ನೂ ರೂಪಿಸಲಾಗುತ್ತಿದೆ. ಇತ್ತೀಚೆಗೆ ಆವಲಬೆಟ್ಟಕ್ಕೆ ಭೇಟಿ ನೀಡಿದ್ದ ಯುವಕ ಅಲ್ಲಿನ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದರು. ಆತನಿಂದ ತಾನು ಮಾಡಿರುವುದು ತಪ್ಪು, ಯಾರು ಈ ರೀತಿಯಲ್ಲಿ ಮಾಡಬೇಡಿ ಎಂದು ವಿಡಿಯೊ ಮಾಡಿಸಿ ಪೊಲೀಸರು ಹಂಚಿಕೊಂಡರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿತ್ತು. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು. ಬೈಕ್ ವ್ಹೀಲಿಂಗ್ ಪರಿಣಾಮ, ವಾಹನಗಳ ಓವರ್‌ಟೇಕ್‌ನಿಂದ ಆಗುವ ಅನಾಹುತ ಹೀಗೆ ವಿವಿಧ ವಿಚಾರಗಳ ಬಗ್ಗೆಯೂ ವಿಡಿಯೊ ಮಾಡಲಾಗಿದೆ.
ಸಾಮಾಜಿಕ ಜಾಲತಾಣವನ್ನು ಅಪರಾಧ ತಡೆಗೆ ಯಾವ ರೀತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಚಿಕ್ಕಬಳ್ಳಾಪುರ ಪೊಲೀಸರ ಈ ಪೋಸ್ಟರ್ ಅಭಿಯಾನ ಮಾದರಿ ಎನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.