ADVERTISEMENT

ಗುಡಿಬಂಡೆ | ಕಳಪೆ ಕಾಮಗಾರಿ: ಶಿಥಿಲಗೊಂಡ ಶಾಲಾ ಕೊಠಡಿ

ದುರಸ್ತಿಗೆ ಬಂದಿದೆ 94 ಕೊಠಡಿ: ₹86 ಲಕ್ಷ ಅನುದಾನಕ್ಕೆ ಪ್ರಸ್ತಾವ

ಜೆ.ವೆಂಕಟರಾಯಪ್ಪ
Published 23 ಜೂನ್ 2024, 6:04 IST
Last Updated 23 ಜೂನ್ 2024, 6:04 IST
ಗುಡಿಬಂಡೆ ತಾಲ್ಲೂಕು ಚಿನ್ನಪ್ಪನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ
ಗುಡಿಬಂಡೆ ತಾಲ್ಲೂಕು ಚಿನ್ನಪ್ಪನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ   

ಗುಡಿಬಂಡೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ 93 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಈ ಪೈಕಿ 94 ಕೊಠಡಿಗಳು ಕಳಪೆ ಕಾಮಗಾರಿಗಳಿಂದ ದುರಸ್ತಿಗೆ ಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ದುರಸ್ತಿಗಾಗಿ ₹86 ಲಕ್ಷ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದೆ.

94 ಶಾಲಾ ಕೊಠಡಿಗಳಲ್ಲಿ ಚಾವಣಿ ಕಿತ್ತು ಅದರಿಂದ ಸಿಮೆಂಟ್, ಮಣ್ಣು ಮಣ್ಣು ಬೀಳುವ ಸ್ಥಿತಿಗೆ ಬಂದಿದ್ದು ಮಳೆಗೆ ಸೋರುತ್ತಿದೆ. ಕಟ್ಟಡಗಳು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿವೆ. ಮಕ್ಕಳಿಗೆ ಸುರಕ್ಷತೆ ಇಲ್ಲದಂತೆ ಆಗಿದೆ.

ಈ ಪೈಕಿ 23 ಶಾಲೆಗಳ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದೆ. ಇದರಲ್ಲಿ ಮಕ್ಕಳಿಗೆ ಪಾಠ ಪ್ರವಚನಗಳು ನಡೆದರೆ ಮಕ್ಕಳಿಗೆ ಅಪಾಯದ ಸ್ಥಿತಿ ಬರಬಹುದು ಎಂದು ಶಾಲೆ ಮುಚ್ಚಲಾಗಿದೆ.

ADVERTISEMENT

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಕೊರತೆ ಇದೆ. ಕೆಲ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ಕೊಠಡಿಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಶಿಥಿಲಾವಸ್ಥೆ ಕೊಠಡಿಯಲ್ಲಿಯೇ ಎರಡು ಮೂರು ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿಕೊಂಡು ಪಾಠ ಮಾಡಬೇಕಾಗಿದೆ.

ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೂರಲು ಕುರ್ಚಿ, ಡೆಸ್ಕ್‌ ಇಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕಿದೆ. ಪ್ರತಿವರ್ಷ ಶಿಥಿಲ ಕೊಠಡಿಗಳ ಅಂಕಿ ಅಂಶಗಳನ್ನು ಶಾಲಾ ಶಿಕ್ಷಕರಿಂದ ಪಡೆದುಕೊಳ್ಳಲಾಗುತ್ತದೆ. ಆದರೆ ದುರಸ್ತಿಯಾಗಲಿ, ಹೊಸ ಕಟ್ಟಡವಾಗಲಿ ನಿರ್ಮಾಣವಾಗುತ್ತಿಲ್ಲ.

ತಾಲ್ಲೂಕಿನ ಶೇ 50ರಷ್ಟು ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಇದೆ. ಇದಕ್ಕೆ ಬದಲಾಗಿ ಪ್ರತಿವರ್ಷ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿದೆ.

ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2024-25ನೇ ಸಾಲಿಗೆ 50 ಶಾಲೆಗಳ 259 ಕೊಠಡಿಗಳ ಪೈಕಿ 154 ಸುಸ್ಥಿತಿಯಲ್ಲಿದ್ದು 71 ಶಾಲೆಗಳು ದುರಸ್ತಿಯಾಗಬೇಕಿದೆ. 23 ಶಾಲಾ ಕೊಠಡಿಗಳನ್ನು ನೆಲಸಮ ಮಾಡಬೇಕಿದೆ.

ಕೃಷಿ ಕೂಲಿಕಾರ್ಮಿಕರು, ಜನಸಾಮಾನ್ಯರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಾರೆ. ಅತ್ತ ಶಿಕ್ಷಕರು ಇಲ್ಲ. ಇತ್ತ ಮೂಲ ಸೌಲಭ್ಯವೂ ಇಲ್ಲ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಚಾವಣಿ ಕುಸಿತದಿಂದ ಮಕ್ಕಳ ತಲೆಗೆ ಗಾಯವಾಗಿತ್ತು. ಘಟನೆ ಸಂಭವಿಸಿದ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಬರುತ್ತಾರೆ. ಕಟ್ಟಡ ನಿರ್ಮಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಕೊಠಡಿ ಮಾತ್ರ ನಿರ್ಮಾಣ ಆಗಿಲ್ಲ.

ಸರ್ಕಾರಕ್ಕೆ ಪತ್ರ

ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿ ಹಾಗೂ ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ದುರಸ್ತಿಗೆ ₹86 ಲಕ್ಷ ಅಂದಾಜು ಪಟ್ಟಿ ಮಾಡಲಾಗಿದೆ. ಅನುದಾನ ಬಂದ ಕೂಡಲೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ತಿಳಿಸಿದರು.

ಗುಡಿಬಂಡೆ ತಾಲ್ಲೂಕು ಚಿನ್ನಪ್ಪನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣೆ ಕಿತ್ತುಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.