ಬಾಗೇಪಲ್ಲಿ: ಶಿಥಿಲ ಹಾಗೂ ಹಳೆ ಶಾಲಾ ಕಟ್ಟಡ, ಕುಸಿಯುವ ಹಂತದಲ್ಲಿ ಚಾವಣಿ, ಸುಣ್ಣ, ಬಣ್ಣ ಇಲ್ಲ. ಕಣ್ಣಿಗೆ ಕಾಣಿಸಿದ ಗೋಡೆ ಬರಹಗಳು, ಶೌಚಾಲಯ ಇದ್ದರೂ ನೀರಿಗೆ ತೊಂದರೆ, ಮುರಿದು ಹೋದ ಮುಖ್ಯದ್ವಾರದ ಗೇಟು, ಶಾಲಾ ಕಟ್ಟಡದ ಮೇಲೆ ನಿಂತ ಮಳೆಯ ನೀರು, ಕೊಠಡಿಯಲ್ಲಿ ತೊಟ್ಟಿಕ್ಕುವ ನೀರು, 5 ತರಗತಿ ಒಂದೇ ಕೊಠಡಿಯಲ್ಲಿ ಬೋಧನೆ ಇಂತಹ ಕೊರತೆ ಇದು ತಾಲ್ಲೂಕಿನ ಪೋತೇಪಲ್ಲಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.
ತಾಲ್ಲೂಕಿಗೆ 8 ಕಿ.ಮೀ ದೂರದಲ್ಲಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೋತೇಪಲ್ಲಿ ಗ್ರಾಮ ಇದೆ. ಗೂಳೂರು ಕಡೆಗೆ ಸಂಚರಿಸುವ ಮಾರ್ಗದಲ್ಲಿ ಮೊದಲ ಗ್ರಾಮ ಆಗಿದೆ. ಆಂಧ್ರಪ್ರದೇಶದ ಗಡಿಗೆ ಕೂಗಳತೆಯಲ್ಲಿ ಇದೆ. ಗ್ರಾಮದ ಹಾಗೂ ಆಂಧ್ರಪ್ರದೇಶದ ಹೊಲ ಗದ್ದೆ, ಜಮೀನುಗಳು ತಾಲ್ಲೂಕಿಗೆ ಹಾಗೂ ಆಂಧ್ರಪ್ರದೇಶಕ್ಕೆ ಅಂಟಿಕೊಂಡಿದೆ.
ಗ್ರಾಮದಲ್ಲಿ 95ಕ್ಕೂ ಹೆಚ್ಚು ಕುಟುಂಬಗಳು ಇವೆ. 450ಕ್ಕೂ ಹೆಚ್ಚು ಮತದಾರರು ಇದ್ದಾರೆ. ಬಹುತೇಕ ಪರಿಶಿಷ್ಟ ಜಾತಿ, ಪಂಗಡದವರು ವಾಸವಾಗಿದ್ದಾರೆ. ಗ್ರಾಮದ ಸರ್ಕಾರಿ ಮಾದರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ 16 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 50 ವರ್ಷಗಳ ಹಿಂದೆ ಗ್ರಾಮದ ಸರ್ಕಾರಿ ಶಾಲೆಗೆ ಒಂದೇ ಒಂದು ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಈಗ ಶಾಲಾ ಕಟ್ಟಡದ ಕೊಠಡಿ ಶಿಥಿಲವಾಗಿದೆ. ಮಳೆ ಬಂದಾಗ ಸೋರುತ್ತದೆ. ನೀರು ಸೋರುತ್ತಿರುವ ಕೊಠಡಿಯಲ್ಲಿಯೇ ಮಕ್ಕಳಿಗೆ ಪಾಠ ನಡೆಯುತ್ತಿವೆ. ಮಳೆ ಬಂತೆಂದರೆ ಪಾಠಕ್ಕೆ ತೊಂದರೆಯಾಗುತ್ತಿದೆ.
ಶಾಲಾ ಕಟ್ಟಡದ ಮೇಲೆ ಮಳೆ ನೀರು ಸಂಗ್ರಹ ಆಗಿ, ಕೊಠಡಿಯೊಳಗೆ ತೊಟ್ಟಿಕ್ಕುತ್ತದೆ. ಪಾಚಿ ಕಳೆ ಕಟ್ಟಿದೆ. ಅಡುಗೆ ಕೋಣೆ ಸೋರುತ್ತಿದೆ. ಕೋಣೆಯಲ್ಲಿ ನೀರು ನಿಂತು, ಬೀಳುವ ಸ್ಥಿತಿಯಲ್ಲಿನ ಜಾಗದಲ್ಲಿ ಅಡುಗೆ ತಯಾರಿಸಲಾಗುತ್ತಿದೆ. ಕೊಠಡಿಯಲ್ಲಿ ಮಕ್ಕಳು ಕೂರಲು ಜಾಗ ಇಲ್ಲದಂತಾಗಿದೆ. ಕುರ್ಚಿ, ಪಾಠೋಪಕರಣ, ಅಕ್ಷರದಾಸೋಹದ ಪದಾರ್ಥಗಳನ್ನು ಸಂಗ್ರಹಣೆ ಮಾಡಲಾಗಿದೆ.
ಶಾಲೆಗೆ ನೀರಿನ ಪೈಪ್‌ಲೈನ್ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಮುಂಭಾಗದ ನೀರಿನ ಟ್ಯಾಂಕ್‌ನಿಂದ ಮಕ್ಕಳು ಬಳಕೆ ಮಾಡಬೇಕಾಗಿದೆ. ಶಾಲಾ ಹಿಂದೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸೂಕ್ತ ಬಳಕೆ ಇಲ್ಲ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಯಲು ಶೌಚಾಲಯಕ್ಕೆ ತೆರಳುವಂತಾಗಿದೆ.
ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಇದ್ದಾರೆ. ಶಿಕ್ಷಕಿಯರು ಇದ್ದಾರೆ. ಆದರೆ ಕನಿಷ್ಠ ಸೌಲಭ್ಯ ಇಲ್ಲ. ಗಡಿ ಪ್ರದೇಶದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿರುವುದರಿಂದ, ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದಾರೆ. ಸರ್ಕಾರ ಕೂಡಲೇ ಸರ್ಕಾರಿ ಶಾಲೆಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮದ ಹಿರಿಯರಾದ ಚೌಡಪ್ಪ ಒತ್ತಾಯಿಸಿದರು.
‘ನಾನು ಓದಿದ ಸರ್ಕಾರಿ ಶಾಲೆ ಹಳೆಯದಾಗಿದೆ. ಇಂದಿನವರೆಗೂ ಕಟ್ಟಡ ದುರಸ್ತಿಯಾಗಿಲ್ಲ. ಹಳೆ ಕಟ್ಟಡ ತೆರವು ಮಾಡಿಸಿ ನೂತನ ಶಾಲಾ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮದ ಎ.ವೆಂಕಟರೆಡ್ಡಿ ಒತ್ತಾಯಿಸಿದರು.
ಹಂತ ಹಂತವಾಗಿ ಸೌಲಭ್ಯ
‘ತಾಲ್ಲೂಕಿನ ಶಿಥಿಲಗೊಂಡ ಸರ್ಕಾರಿ ಶಾಲೆಗಳ ಪಟ್ಟಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗಮನಕ್ಕೆ ತರಲಾಗಿದೆ. ಕೆಲ ಶಾಲೆಗಳನ್ನು ದುರಸ್ತಿ ಹಾಗೂ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಂತ ಹಂತದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಮಕ್ಕಳ ಹಿತಾದೃಷ್ಠಿಯಿಂದ ಸುರಕ್ಷತೆ ಕ್ರಮಗಳನ್ನು ಪಾಲಿಸಲು ಮುಖ್ಯಶಿಕ್ಷಕ ಶಿಕ್ಷಕಿಯರಿಗೆ ಸೂಚನೆ ನೀಡಲಾಗಿದೆ’ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.