ADVERTISEMENT

ತೋಟಗಾರಿಕೆ ಬೆಳೆಯೊಂದಿಗೆ ಪಶುಸಂಗೋಪಾನೆ: ಆದಾಯ ತಂದ ಕೋಳಿಗಳು

ಡಿ.ಜಿ.ಮಲ್ಲಿಕಾರ್ಜುನ
Published 13 ಅಕ್ಟೋಬರ್ 2024, 5:48 IST
Last Updated 13 ಅಕ್ಟೋಬರ್ 2024, 5:48 IST
ಶಿಡ್ಲಘಟ್ಟ ತಾಲ್ಲೂಕಿನ ತಾದೂರು ಗ್ರಾಮದ ಬಿ.ನರೇಂದ್ರಬಾಬು ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಪರಿಸರ ನಿಯಂತ್ರಿತ ಕೋಳಿ ಸಾಕಾಣಿಕೆ ಶೆಡ್
ಶಿಡ್ಲಘಟ್ಟ ತಾಲ್ಲೂಕಿನ ತಾದೂರು ಗ್ರಾಮದ ಬಿ.ನರೇಂದ್ರಬಾಬು ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಪರಿಸರ ನಿಯಂತ್ರಿತ ಕೋಳಿ ಸಾಕಾಣಿಕೆ ಶೆಡ್   

ಶಿಡ್ಲಘಟ್ಟ: ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾದರಿ ವ್ಯವಸಾಯ ಮತ್ತು ಕೋಳಿ ಸಾಕಾಣಿಕೆ ಮಾಡುತ್ತಿರುವ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತಾದೂರು ಗ್ರಾಮದ ರೈತ ಬಿ.ನರೇಂದ್ರಬಾಬು ಅವರು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಕೃಷಿ ಹೊರತು ಪಡಿಸಿ ಕೋಳಿ ಸಾಕಾಣಿಕೆಯೊಂದರಿಂದಲೇ ಬ್ಯಾಚ್‌ವೊಂದಕ್ಕೆ (35 ದಿನದಿಂದ 40 ದಿನ) ಸುಮಾರು ₹3-₹4 ಲಕ್ಷ ಹಣ ಗಳಿಸುದ್ದಾರೆ.

ಚಿಕ್ಕಂದಿನಿಂದಲೂ ಕೃಷಿ ಮೇಲಿನ ಆಸಕ್ತಿ ಹೊಂದಿದದರು. ಪಿಯುಸಿ ಮುಗಿಸಿದ ಬಳಿಕ ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡಿದ್ದಾರೆ. ಜತೆಗೆ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ.

ADVERTISEMENT

10 ಎಕರೆಯಲ್ಲಿ ದ್ರಾಕ್ಷಿ ಮತ್ತು ಆರು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಜೊತೆಗೆ ಅತ್ಯಾದುನಿಕ ತಂತ್ರಜ್ಞಾನದ ಪರಿಸರ ನಿಯಂತ್ರಿತ (ಎನ್ವಿರಾನ್ಮೆಂಟಲ್ ಕಂಟ್ರೋಲ್) ಶೆಡ್‌  ನಿರ್ಮಿಸಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.

ತಾಲ್ಲೂಕಿಗೆ ಪ್ರಥಮ: 2019ರಲ್ಲಿ ಸುಮಾರು ₹1 ಕೋಟಿಗೂ ಹೆಚ್ಚು ಬಂಡವಾಳ ಹೂಡಿ 32 ಸಾವಿರ ಮರಿ ಸಾಕಲು ಬೇಕಾದ ಅತ್ಯಾದುನಿಕ ತಂತ್ರಜ್ಞಾನದ ಪರಿಸರ ನಿಯಂತ್ರಿತ ಕೋಳಿ ಸಾಕಾಣಿಕೆಯನ್ನು ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಆರಂಭಿಸಿದರು.

ಶೆಡ್ ಒಂದರಲ್ಲಿ ಸುಮಾರು 16 ಸಾವಿರ ಮರಿಗಳಂತೆ ಎರಡು ಶೆಡ್‌ಗಳಿಂದ 32 ಸಾವಿರ ಮರಿಗಳನ್ನು ಒಂದು ಬ್ಯಾಚಿನಲ್ಲಿ ಸಾಕುತ್ತಿದ್ದಾರೆ. ಇದರಿಂದ ಬ್ಯಾಚ್‌ವೊಂದಕ್ಕೆ ₹3–4 ಲಕ್ಷ ಆದಾಯ ಬರುತ್ತಿದೆ.

ಕೋಳಿ ನಿರ್ವಹಣೆಗೆ ಹೆಚ್ಚಿನ ಜನರ ಅಗತ್ಯತೆ ಇಲ್ಲ ಎನ್ನುವ ಅವರು, ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡರೆ ಪ್ರತಿ ತಿಂಗಳು ಹಣ ಗಳಿಸಬಹುದು. ರೈತರು ಬಹುಕಾಲ ಬೆಳೆ ನಂಬಿ ಆದಾಯಕ್ಕಾಗಿ ವರ್ಷ, ಆರು ತಿಂಗಳು ಕಾಯಬಾರದು. ಪ್ರತಿ ತಿಂಗಳು ಆದಾಯ ಬರುವ ಈ ರೀತಿಯ ಕೆಲಸಗಳನ್ನು ಮಾಡಿ ಲಾಭ ಗಳಿಸಿ ಉದ್ಯಮಿಯಾಗಬೇಕು ಎನ್ನುತ್ತಾರೆ.

ಇವರಿಂದ ಪ್ರೇರಣೆಗೊಂಡ ಮೂವರು ರೈತರು ಇದೇ ಮಾದರಿ ಕೋಳಿ ಸಾಕಣಿಕೆ ಮಾಡುತ್ತಿದ್ದಾರೆ.

ದ್ರಾಕ್ಷಿಗೆ ಉತ್ತಮ ಬೆಳೆ: ಕಳೆದ 2011ರಿಂದ ಸತತವಾಗಿ ದ್ರಾಕ್ಷಿ ಬೆಳೆಯಲ್ಲಿ ತೊಡಗಿಸಿಕೊಂಡಿರುವ ಇವರು ಇದೀಗ ಸೀಡ್ ಲೆಸ್ ದಿಲ್‌ಖುಷ್, ಶರತ್ ಕೃಷ್ಣ, ರೆಡ್ ಗ್ಲೋಬ್ ಜಾತಿಯ ದ್ರಾಕ್ಷಿ ಬೆಳೆದಿದ್ದಾರೆ. ತಾವು ಬೆಳೆಯುವ ದ್ರಾಕ್ಷಿ, ದಾಳಿಂಬೆ ಬೆಳೆಗಳನ್ನು ಗುಣಮಟ್ಟದಲ್ಲಿ ಬೆಳೆಯುವುದಲ್ಲದೆ ಅವನ್ನು ಗ್ರೇಡಿಂಗ್ ಮಾಡುವ ಮೂಲಕ ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ.

ದ್ರಾಕ್ಷಿ ತೋಟ

ನೆಲವೇ ಶಾಲೆ; ಭೂಮಿ ತಾಯಿಯೇ ಶಿಕ್ಷಕಿ


ಕೃಷಿಯೆಂದರೆ ಕೇವಲ ಉಳುಮೆ ಬಿತ್ತನೆಯಲ್ಲ. ಕೃಷಿಕ ವಿಜ್ಞಾನಿಯಂತೆ ಚಿಂತಿಸಬೇಕು. ಸೋಲಿನಿಂದ ಪಾಠ ಕಲಿಯುತ್ತಾ ಎಚ್ಚರಿಕೆಯಿಂದ ಪರಿಸರದ ಪ್ರತಿಕೂಲ ಪರಿಣಾಮ ಎದುರಿಸುತ್ತಾ ನಮ್ಮ ಗೆಲುವಿಗೆ ನಾವೇ ದಾರಿ ಹುಡುಕುತ್ತಾ ಸಾಗುವ ಮಣ್ಣಿನ ಪಾಠ ಶಾಲೆಯಿದು. ಇಲ್ಲಿ ಭೂ ತಾಯಿ ಶಿಕ್ಷಕಿ ಎನ್ನುತ್ತಾರೆ ತಾಲ್ಲೂಕಿನ ತಾದೂರು ಗ್ರಾಮದ ರೈತ ಬಿ.ನರೇಂದ್ರಬಾಬು.

ಇತರೆ ರೈತರಿಗೂ ಮಾರ್ಗದರ್ಶನ
ಬೈರೇಗೌಡ –ರಾಧಮ್ಮ ದಂಪತಿ  ಹಿರಿಯ ಪುತ್ರ ಬಿ.ನರೇಂದ್ರಬಾಬು ಕೃಷಿಯನ್ನೇ ಬದುಕನ್ನಾಗಿಸಿಕೊಂಡಿದ್ದು ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಅಪಾರ ಜ್ಞಾನ ಹೊಂದಿರುವ ಇವರು ಇತರೆ ಕೃಷಿಕರಿಗೂ ಮಾದರಿ ಮತ್ತು ಮಾರ್ಗದರ್ಶಕರಾಗಿದ್ದಾರೆ. 44 ವರ್ಷದ ನರೇಂದ್ರಬಾಬು ತಮಗಿರುವ ಜಮೀನಿನಲ್ಲಿ ಮೊದಲು ಟೊಮೆಟೊ ಕೋಸು ಮುಂತಾದ ತರಕಾರಿ ಬೆಳೆ ಬೆಳೆಯುತ್ತಿದ್ದರು. ನಂತರ ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾದರು. ಏಳೆಂಟು ಕೊಳವೆಬಾವಿ ಇರುವುದರಿಂದ ನೀರಿಗೆ ತೊಂದರೆ ಇಲ್ಲ. ಹೀಗಾಗಿ ತೋಟಗಾರಿಕೆ ಬೆಳೆ ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ. ಇವರ ಕೃಷಿಗೆ ತಂದೆ ಹಾಗೂ ಸಹೋದರರು ಸಾಥ್‌ ನೀಡುತ್ತಿದ್ದಾರೆ. ಹೀಗಾಗಿ ನಾಲ್ಕು ಹಸು ಇಪ್ಪತ್ತು ಕುರಿಯನ್ನೂ ಸಾಕಣಿಕೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.