ADVERTISEMENT

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಮುಂದುವರಿದ ಪ್ರದೀಪ್ ಈಶ್ವರ್ ಗೈರು!

ಒಂದೂ ಪ್ರತಿಭಟನೆಯಲ್ಲಿ ಭಾಗಿಯಾಗದ ಶಾಸಕ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಆಗಸ್ಟ್ 2024, 5:19 IST
Last Updated 20 ಆಗಸ್ಟ್ 2024, 5:19 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಯಾವುದೇ ಪ್ರತಿಭಟನೆಗಳಲ್ಲಿಯೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿಲ್ಲ. ಇದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ಚರ್ಚೆಗಳಿಗೂ ಕಾರಣವಾಗಿದೆ.

ಶಾಸಕರ ಹಾಜರಿಗಿಂತ ಗೈರಿನ ವಿಚಾರವೇ ಆಗಾಗ್ಗೆ ಸದ್ದು ಮಾಡುತ್ತಿದೆ. ಇದು ಕ್ಷೇತ್ರದ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಬೇಸರ, ಅಸಮಾಧಾನ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ. ಈ ಮುಖಂಡರು ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಪ್ರತಿಭಟನೆಯ ನೇತೃತ್ವಗಳಿಗೆ ಆಶ್ರಯಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಈ ಮುಖಂಡರು ಸಚಿವರಿಗೆ ಮಾಹಿತಿದಾರರಾಗಿದ್ದಾರೆ.

ಕಾಂಗ್ರೆಸ್ ಪಕ್ಷವು ಹಮ್ಮಿಕೊಳ್ಳುವ ಪ್ರತಿಭಟನೆಗಳಲ್ಲಿ ಶಾಸಕರು ಏಕೆ ಪಾಲ್ಗೊಳ್ಳುತ್ತಿಲ್ಲ ಎಂದು ಮುಖಂಡರನ್ನು ಪ್ರಶ್ನಿಸಿದರೆ, ಅವರಿಗೂ ಸ್ಪಷ್ಟ ಉತ್ತರವೂ ಗೊತ್ತಿಲ್ಲ.  ಮುಖಂಡರು ಸಹ ಬೇಸರ ಹೊರಹಾಕುವರು. ಕೆಲವು ಕಾರ್ಯಕ್ರಮಗಳಿಗೆ ಶಾಸಕರ ಗೈರು ಹಾಜರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ‘ಸಿದ್ಧ ಉತ್ತರ’ಗಳನ್ನು ನೀಡುವರು. 

ADVERTISEMENT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿರುದ್ಧ ಮತ್ತು ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಹಿಂದ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ಎರಡೂ ಪ್ರತಿಭಟನೆಗಳಲ್ಲಿ ಶಾಸಕರು ಭಾಗಿಯಾಗಿಲ್ಲ.

ಈ ಎರಡು ಪ್ರತಿಭಟನೆಗಳು ಇತ್ತೀಚೆಗೆ ನಡೆದವು. ಇದಕ್ಕಿಂತಲೂ ಪೂರ್ವದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಒಂದೇ ಒಂದು ಪ್ರತಿಭಟನೆಯಲ್ಲಿಯೂ ಶಾಸಕರು ಭಾಗಿಯಾಗಿಲ್ಲ!

ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಕೇಂದ್ರದಲ್ಲಿ ಕರೆ ನೀಡಿದ್ದ ಪ್ರತಿಭಟನೆಗಳಲ್ಲಿ ಚಿಂತಾಮಣಿ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಭಾಗಿಯಾಗುತ್ತಾರೆ. ಆದರೆ ಚಿಕ್ಕಬಳ್ಳಾಪುರ ಶಾಸಕರದ್ದು ಮಾತ್ರ ಗೈರಿನ ಪರ್ವ.

2024ರ ಆ.19; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆ.18ರಂದು ಪ್ರತಿಭಟಿಸಿದರು. 

2024 ಆ.5; ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ನಡೆಸಿವೆ. ಮುಡಾ ನಿವೇಶನ ಹಂಚಿಕೆ ಪ್ರಕರಣದ ನೆಪದಲ್ಲಿ ತೇಜೋವಧೆಗೆ ಯತ್ನಿಸುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಆ.5ರಂದು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟಿಸಿದರು. 

2024 ಜು.27; ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ರಾಜ್ಯಕ್ಕೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಅನುದಾನ ನೀಡಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಜು.27ರಂದು ಬಿಬಿ ರಸ್ತೆಯಲ್ಲಿ ರ‍್ಯಾಲಿ ನಡೆಸಿ ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ನಡೆಸಿದರು. ಕೇಂದ್ರ ಸರ್ಕಾರವು ರಾಜ್ಯಕ್ಕೆ ಚೊಂಬು ನೀಡಿದೆ ಎಂದು ಚೊಂಬುಗಳನ್ನು ಪ್ರದರ್ಶಿಸಿದರು.

2024ರ ಜ.23; ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿದ್ದ ಭಾರತ್‌ ಜೋಡೊ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ರಾಹುಲ್‌ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಜಿಲ್ಲಾ ಸಮಿತಿ ಚಿಕ್ಕಬಳ್ಳಾಪುರದಲ್ಲಿ ಜು.23ರಂದು ಪ್ರತಿಭಟಿಸಿತ್ತು.  

2023 ಡಿ.22; ಸಂಸತ್ ಅಧಿವೇಶನದ ವೇಳೆ 142 ಸಂಸತ್ ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು.

ಈ ಎಲ್ಲ ಪ್ರತಿಭಟನೆಗಳಿಂದಲೂ ಶಾಸಕರು ದೂರವೇ ಇದ್ದಾರೆ. ಹೀಗೆ ತಮ್ಮ ಪಕ್ಷದ ಅಗ್ರನಾಯಕರಾದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಪ್ರತಿಭಟನೆಗಳಿಂದಲೂ ಶಾಸಕರು ದೂರ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.