ಮನೆಯಗೋಡೆಮೇಲೆತೂಗುತ್ತಿದ್ದ ಹಳೆಯ ಕ್ಯಾಲೆಂಡರ್ ಬದಲಾಗಿದೆ. ಅದರ ಸ್ಥಳದಲ್ಲಿ 2021ರ ರಂಗುರಂಗಿನ ಹೊಸ ಕ್ಯಾಲೆಂಡರ್ ಬಂದು ಕೂತಿದೆ. ಬದುಕಿನ ಬಂಡಿ ಎಳೆಯುವ ಅಂಕಿಗಳಮೇಲೆಬಣ್ಣ ಮೆತ್ತಿಕೊಂಡಿದೆ. ಹೊಸ ವರ್ಷದ ಮೊದಲ ದಿನ ಸುಮ್ಮನೆ ಕುಳಿತು ಹಿಂದಿನ ವರ್ಷದತ್ತ ಒಮ್ಮೆ ನೋಟ ಬೀರಿದರೆ ನೆನಪುಗಳ ದೊಡ್ಡ ಸಂತೆಯ ಬಾಗಿಲು ತೆರೆದುಕೊಳ್ಳುತ್ತದೆ. ಆ ಸಂತೆಯಲ್ಲಿ ಹುಡುಕಿದರೆ ನಲಿವಿಗಿಂತ ನೋವಿನ ಮೂಟೆಗಳೇ ಹೆಚ್ಚು ಸಿಗುತ್ತವೆ.
ಎಲ್ಲರೂ ಕೋವಿಡ್ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೇವೆ. ಕೊರೊನಾ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಯ ಹೆಜ್ಜೆಗಳನ್ನು ಇಡುತ್ತಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು ಇದಾಗಿದೆ. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ದೃಢ ಸಂಕಲ್ಪದೊಟ್ಟಿಗೆ ‘ಪ್ರಜಾವಾಣಿ’ ದಿಟ್ಟಹೆಜ್ಜೆ ಇಟ್ಟಿದೆ.
ಈ ಸಂಕಷ್ಟದಲ್ಲಿ ತಮ್ಮ ಅವಿರತ ಶ್ರಮದ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಇದು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ ಹಾಗೂ ಹಂಬಲ.
ಪ್ರಚಾರಕ್ಕೆ ಹಂಬಲಿಸದೆ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಇನ್ನೂ ಅನೇಕರು ನಮ್ಮ ನಡುವೆ ಇದ್ದಾರೆ. ಇಂತಹವರ ಸಂತತಿ ನೂರ್ಮಡಿಯಾಗಲಿ. ಇವರ ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಸದಾಶಯ ನಮ್ಮದು...
ಸಹೋದ್ಯೋಗಿಗಳಿಗೆಹೆಗಲಾದವೈದ್ಯಡಾ.ಎಂ.ಎಚ್.ಮಧುಕುಮಾರ್
ಮಂಗಳೂರು ಮೂಲದ ಡಾ.ಎಂ.ಎಚ್.ಮಧುಕುಮಾರ್ ಅವರು ಎರಡೂವರೆ ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿದ್ದಾರೆ. ಕಳೆದ 9 ತಿಂಗಳಿಂದ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಮಧುಕುಮಾರ್ ಅವರದು ವೃತ್ತಿಗೆ ಅಪಚಾರ ಮಾಡಬಾರದು ಎನ್ನುವ ಸಿದ್ಧಾಂತ.
ಕೋವಿಡ್ ಆಸ್ಪತ್ರೆಯ ಆವರಣದಲ್ಲಿರುವ ವಸತಿ ಗೃಹದಲ್ಲಿ ವಾಸವಾಗಿರುವ ಮಧುಕುಮಾರ್ ಅವರು ಕಳೆದ ಏಳೆಂಟು ತಿಂಗಳಲ್ಲಿ ರಜೆ ಮರೆತು ಸೋಂಕಿತರನ್ನು ಗುಣಪಡಿಸುವ ಕೆಲಸದಲ್ಲಿ ಸಹದ್ಯೋಗಿಗಳಿಗೆ ಹೆಗಲೆಣೆಯಾದವರು. ಕೋವಿಡ್ ಕಾರಣಕ್ಕೆ ಮೂರ್ನಾಲ್ಕು ತಿಂಗಳು ಅಪ್ಪ–ಅಮ್ಮನನ್ನು ನೋಡಲು ಹೋಗದೆ ವೃತ್ತಿ ಬದ್ಧತೆ ಮೆರೆದವರು.
‘ಕುಟುಂಬದವರು ಆರಂಭದಲ್ಲಿ ಭಯಭೀತರಾಗಿದ್ದರು. ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟೆವು. ಇನ್ನು, ಪತ್ನಿ ಸಹಕಾರವನ್ನು ನಾನು ಸ್ಮರಿಸಲೇ ಬೇಕು. ಮೇಲಾಧಿಕಾರಿಗಳ ಸಹಕಾರ ತುಂಬಾ ಚೆನ್ನಾಗಿದೆ. ಆದ್ದರಿಂದ ಎಲ್ಲ ವೈದ್ಯರೂ ತಂಡವಾಗಿ ಚೆನ್ನಾಗಿ ಕೆಲಸ ಮಾಡಿದೆವು. ಶೇ 99 ರಷ್ಟು ಸೋಂಕಿತರನ್ನು ನಮ್ಮ ಆಸ್ಪತ್ರೆಯಲ್ಲೇ ಗುಣಪಡಿಸಿದ್ದೇವೆ ಎಂಬ ಹೆಮ್ಮೆ ನಮ್ಮದು’ ಎಂದು ತಿಳಿಸಿದರು.
* * *
ಕೋವಿಡ್ ಆಸ್ಪತ್ರೆಯ ಕೆಲಸಕ್ಕೆಂದೇ ಬಂದಸ್ಟಾಫ್ ನರ್ಸ್‌ಗಿರೀಶಾ ಯಾದವ್
ಕಳೆದ ಮೇ ತಿಂಗಳಿಂದ ಚಿಕ್ಕಬಳ್ಳಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ನವದೆಹಲಿ ಮೂಲದ ಗಿರೀಶಾ ಯಾದವ್ ಅವರು ಮದುವೆಯ ಬಳಿಕ ಚಿಕ್ಕಬಳ್ಳಾಪುರದಲ್ಲಿ ನೆಲೆಸಿ ಸ್ಥಳೀಯರಿಗಿಂತಲೂ ಚೆನ್ನಾಗಿ ಕನ್ನಡ ಮಾತನಾಡುವ ಮೂಲಕ ಅನೇಕರ ಅಚ್ಚರಿಗೆ ಕಾರಣವಾಗಿದ್ದಾರೆ.
‘ಮೊದಲು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಆಸ್ಪತ್ರೆಯಲ್ಲಿ ಕೆಲಸದ ಅವಕಾಶವಿದೆ ಎಂಬುದು ತಿಳಿದು ಬಂದಾಗ ಆತಂಕದಿಂದಲೇ ಅರ್ಜಿ ಹಾಕಿದ್ದೆ. ಆರಂಭದಲ್ಲಿ ಭಯದಲ್ಲೇ ಕೆಲಸಕ್ಕೆ ಹೋಗುತ್ತಿದ್ದೆ. ಆದರೆ, ಪತಿಯ ಬೆಂಬಲದಿಂದಾಗಿ ಯಾವುದೇ ಆತಂಕವಿಲ್ಲದೆ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.
‘ಕೋವಿಡ್ ಸಂದರ್ಭ ವೃತ್ತಿ ಬದುಕಿನಲ್ಲಿ ವಿಶಿಷ್ಟ ಅನುಭವ ನೀಡಿದೆ. ಸಾಕಷ್ಟು ಕಲಿಸಿದೆ. ದೊಡ್ಡ ವಿಪತ್ತು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವ ಪಾಠವನ್ನು, ಆತ್ಮವಿಶ್ವಾಸವನ್ನು ಕೋವಿಡ್ ದಕ್ಕಿಸಿ ಕೊಟ್ಟಿದೆ’ ಎಂದು ತಿಳಿಸಿದರು.
* * *
ಆಸ್ಪತ್ರೆಗೆ ಸೋಂಕಿತರನ್ನು ಕರೆತರವು ಕಾಯಕ ಮಾಡಿದಆಂಬುಲೆನ್ಸ್ ಚಾಲಕ ಎಂ.ನಾರಾಯಣಪ್ಪ
ಕೋಲಾರ ಮೂಲದವರಾದ ಎಂ.ನಾರಾಯಣಪ್ಪ ಆರೋಗ್ಯ ಇಲಾಖೆಯಲ್ಲಿ ಕಳೆದ 19 ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿರುವ ಇವರು ಕೋವಿಡ್ ಆರಂಭದ ದಿನಗಳಿಂದ ಈವರೆಗೆ ಸೋಂಕಿತರನ್ನು ಆಸ್ಪತ್ರೆಗೆ ಕರೆತರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
‘ನಮ್ಮ ಕುಟುಂಬ ಕೋವಿಡ್ ಆಸ್ಪತ್ರೆಯ ಆವರಣದಲ್ಲಿರುವ ವಸತಿ ಗೃಹದಲ್ಲಿದೆ. ಕೋವಿಡ್ ವಾರ್ಡ್‌ಗೂ ನಮ್ಮ ಮನೆಗೂ ಬರೀ 15 ಅಡಿ ಅಂತರವಿದೆ. ಕೋವಿಡ್ ಆರಂಭದಲ್ಲಂತೂ ಮೊಮ್ಮಗಳ ಕಾರಣಕ್ಕಾಗಿ ಒಂದೂವರೆ ತಿಂಗಳು ನನಗೆ ಮನೆಗೆ ಬರಲು ಕುಟುಂಬದವರು ಬಿಟ್ಟಿರಲಿಲ್ಲ’ ಎಂದು ಆತಂಕದ ದಿನಗಳನ್ನು ಮೆಲುಕು ಹಾಕಿದರು ನಾರಾಯಣಪ್ಪ.
‘ನಾನು ಡಯಾಬಿಟಿಕ್ ಪೆಶೆಂಟ್. ಹೀಗಾಗಿ ಆರಂಭದಲ್ಲಿ ಭಯವಿತ್ತು. ಕಳೆದ ಕೆಲ ತಿಂಗಳ ಅನುಭವ ಧೈರ್ಯ ತಂದಿದೆ. ಹೀಗಾಗಿ ಯಾವ ಆತಂಕವೂ ಇಲ್ಲದೆ ಸೋಂಕಿತರನ್ನು ಆಸ್ಪತ್ರೆಗೆ ಕರೆ ತರುವ ಕೆಲಸವನ್ನು ಮುಂದುವರಿಸಿರುವೆ’ ಎಂದರು.
* * *
ವೈರಾಣು ನಾಶಕ ಸಿಂಪಡಣೆ ನಿಪುಣ ಅಜಿತ್
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಳೆದ ಮೂರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅಜಿತ್, ಕೋವಿಡ್ ಪೀಡಿತರ ಮನೆಗಳನ್ನು ಸೀಲ್‌ಡೌನ್ ಮಾಡುವುದು, ಸೋಂಕಿತರ ಮನೆ, ವಾರ್ಡ್‌ಗಳಲ್ಲಿ ವೈರಾಣು ನಾಶಕ ದ್ರಾವಣ ಸಿಂಪಡಿಸುವ ಕೆಲಸದಲ್ಲಿ ನಿಷ್ಣಾತರಾಗಿದ್ದಾರೆ.
‘ಕೋವಿಡ್ ಪೀಡಿತರ ಮನೆ ಬಳಿ ಜನರು ಸುಳಿಯಲು ಅಂಜುತ್ತಿದ್ದ ಸಮಯದಲ್ಲಿ ಸಹ ನಾನು ಸಾಕಷ್ಟು ಸೋಂಕಿತರ ಮನೆಗಳಿಗೆ ತೆರಳಿ ಸ್ಯಾನಿಟೈಸ್ ಕೆಲಸ ಮಾಡಿರುವೆ. ಅದಕ್ಕಾಗಿ ಒಂದೂವರೆ ತಿಂಗಳು ಮನೆಯತ್ತ ಸುಳಿದಿರಲಿಲ್ಲ. ನಮ್ಮ ನೆರೆಮನೆಯ ಜನರು ಸಹ ಒಂದು ತಿಂಗಳು ನಮ್ಮ ಮನೆಗೆ ಬಂದಿರಲಿಲ್ಲ’ ಎನ್ನುತ್ತಾರೆ ಅಜಿತ್.
‘ರಾಜ್ಯದಲ್ಲಿ ಕೋವಿಡ್ ಉಲ್ಭಣಿಸಿದ ಸಂದರ್ಭದಲ್ಲಂತೂ ದಿನದ 24 ಗಂಟೆಗಳ ಕಾಲ ಸ್ಯಾನಿಟೈಸ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಅಧಿಕಾರಿಗಳ ಪ್ರೋತ್ಸಾಹದಿಂದಾಗಿ ಈವರೆಗೆ ಲೆಕ್ಕವಿಲ್ಲದಷ್ಟು ಸೋಂಕಿತರ ಮನೆಗೆ ಹೋಗಿ ಶುಚಿಗೊಳಿಸುವ ಕೆಲಸ ಮಾಡಿರುವೆ. ಅದರಿಂದ ನನಗೆ ಸಾರ್ಥಕತೆ ದೊರೆತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.