ADVERTISEMENT

ಚಿಕ್ಕಬಳ್ಳಾಪುರ | 9 ತಾಣಗಳಿಗೆ ರಕ್ಷಿತ ಸ್ಮಾರಕದ ಪ್ರಸ್ತಾವ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಹೆಜ್ಜೆ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಜುಲೈ 2024, 6:59 IST
Last Updated 18 ಜುಲೈ 2024, 6:59 IST
ಮಂಚನಬಲೆ ಗ್ರಾಮದ ರುದ್ರ ದೇವಸ್ಥಾನ ಬಳಿಯ ಐತಿಹಾಸಿಕ ಕಲ್ಯಾಣಿ (ಸಂಗ್ರಹ ಚಿತ್ರ)
ಮಂಚನಬಲೆ ಗ್ರಾಮದ ರುದ್ರ ದೇವಸ್ಥಾನ ಬಳಿಯ ಐತಿಹಾಸಿಕ ಕಲ್ಯಾಣಿ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಪ್ರವಾಸೋದ್ಯಮದ ಅಭಿವೃದ್ಧಿಯ ವಿಚಾರದಲ್ಲಿ ದೊಡ್ಡ ಮುನ್ನಡೆ ಸಾಧಿಸುವುದು ಸ್ಪಷ್ಟವಾಗಿವೆ. ನಂದಿಗಿರಿಧಾಮ, ಈಶ ಯೋಗ ಕೇಂದ್ರವು ಪ್ರಧಾನವಾಗಿ ಜನರನ್ನು ಸೆಳೆಯುತ್ತಿವೆ. 

ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ವಿಚಾರವಾಗಿ ಮತ್ತೊಂದು ಹೆಜ್ಜೆ ಎನ್ನುವಂತೆ ಜಿಲ್ಲೆಯ 9 ತಾಣಗಳನ್ನು ‘ರಕ್ಷಿತ ಸ್ಮಾರಕ’ ಎಂದು ಘೋಷಿಸಲು ಪ್ರಸ್ತಾವಗಳು ಪುರಾತತ್ವ ಇಲಾಖೆಯ ಮುಂದಿವೆ. 

ಐತಿಹಾಸಿಕ ತಾಣಗಳು, ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯು ರಾಜ್ಯದಾದ್ಯಂತ ಸ್ಮಾರಕಗಳನ್ನು ಗುರುತಿಸಿ ಅವಗಳನ್ನು ರಕ್ಷಿತ ಸ್ಮಾರಕಗಳು ಎಂದು ಘೋಷಿಸುತ್ತಿವೆ. ಹೀಗೆ ರಕ್ಷಿತ ಸ್ಮಾರಕಗಳು ಎನ್ನುವ ಮುದ್ರೆ ಬಿದ್ದರೆ ಆ ಸುತ್ತ ಯಾವುದೇ ಚಟುವಟಿಕೆಗಳ ಮೇಲೆ ನಿಗಾ ಇರುತ್ತದೆ. ಆ ಸ್ಮಾರಕಗಳಿಗೆ ಧಕ್ಕೆ ಆಗದಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಪ್ರವಾಸಿಗರನ್ನು ಸಹ ಸೆಳೆಯಲು ಯೋಜನೆಗಳನ್ನು ರೂಪಿಸಲಾಗುತ್ತದೆ. 

ADVERTISEMENT

ರಕ್ಷಿತ ಸ್ಮಾರಕಗಳು ಎಂದು ಘೋಷಿಸಲು ರಾಜ್ಯದಲ್ಲಿ ಒಟ್ಟು 200 ಪ್ರಸ್ತಾವಗಳು ಪುರಾತತ್ವ ಇಲಾಖೆಯ ಎದುರು ಇದೆ. ಜಿಲ್ಲಾಧಿಕಾರಿ ಕಚೇರಿಯ ಮೂಲಕ ಈ ಪ್ರಸ್ತಾವಗಳನ್ನು ಪುರಾತತ್ವ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. 

ಈ ಪ್ರಕಾರ ಜಿಲ್ಲೆಯ 9 ತಾಣಗಳನ್ನು ರಕ್ಷಿತ ಸ್ಮಾರಕಗಳು ಎಂದು ಘೋಷಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

ನಂದಿಬೆಟ್ಟದ ನಂದಿಕೋಟೆ, ಮಂಚನಬಲೆ ಗ್ರಾಮದ ಕಲ್ಯಾಣಿ, ಮನ್ನಾರಪುರದ ವೀರಗಲ್ಲು, ಕರಿಗಾನಪಾಳ್ಯದ ವೀರಗಲ್ಲು, ನಂದಿಯ ಭೋಗ ನಂದೀಶ್ವರ ದೇವಾಲಯ, ಹನುಮಂತಪುರದ ವೆಂಕಟರಮಣ ದೇವಾಲಯ, ದೊಡ್ಡಪೈಲಗುರ್ಕಿ ಮತ್ತು ಚಿಕ್ಕಪೈಲಗುರ್ಕಿ ವೀರಗಲ್ಲು, ಚಿಕ್ಕಕಾಡಿಗಾನಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಈ ಪಟ್ಟಿಯಲ್ಲಿ ಇವೆ. 

ನಂದಿಬೆಟ್ಟ ಮತ್ತು ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯವನ್ನು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ನಂದಿಗಿರಿಧಾಮದಲ್ಲಿನ ನಂದಿಕೋಟೆಯು ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಇಲ್ಲ. ಅಲ್ಲದೆ ಭೋಗ ನಂದೀಶ್ವರ ದೇವಾಲಯ ಸಂಕೀರ್ಣ ಮಾತ್ರ ರಕ್ಷಿತ ಸ್ಮಾರಕವಾಗಿದೆ. ಈಗ ಆ ಸಂಕೀರ್ಣದ ಸುತ್ತಲಿನ ತಾಣಗಳನ್ನೂ ರಕ್ಷಿತ ಸ್ಮಾರಕವಾಗಿಸಲು ಹೆಜ್ಜೆ ಇಡಲಾಗಿದೆ. 

ಮಂಚನಬಲೆಯ ಕಲ್ಯಾಣಿಯು ಐತಿಹಾಸಿಕವಾದುದು. ಈ ಹಿಂದೆ ಕಲ್ಯಾಣಿ ಸುತ್ತ ಗಿಡಗಳು ಬೆಳೆದಿದ್ದವು. ಆದರೆ ನಂತರದ ದಿನಗಳಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಈ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು. ಶಾಸನ ತಜ್ಞರು, ಇತಿಹಾಸಜ್ಞರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೀರಗಲ್ಲುಗಳ ರಕ್ಷಣೆಗೆ ಮೊದಲಿನಿಂದಲೂ ಆಗ್ರಹಿಸುತ್ತಿದ್ದಾರೆ. ಈಗ ಮನ್ನಾರಪುರ, ದೊಡ್ಡಪೈಲಗುರ್ಕಿ ಮತ್ತು ಚಿಕ್ಕಪೈಲಗುರ್ಕಿ ಗ್ರಾಮದ ವೀರಗಲ್ಲುಗಳನ್ನು ಸಹ ರಕ್ಷಿತ ಸ್ಮಾರಕವಾಗಿ ಘೋಷಿಸುವ ಬಗ್ಗೆ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ.

ನೆರೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐದು ಸ್ಮಾರಕಗಳು ಸಹ ಈ ಪಟ್ಟಿಯಲ್ಲಿ ಇವೆ. ಪುರಾತತ್ವ ಇಲಾಖೆಯು ಹೀಗೆ ರಕ್ಷಿತ ಸ್ಮಾರಕಗಳು ಎಂದು ಗುರುತಿಸಿದರೆ ಅವುಗಳ ಅಧ್ಯಯನವೂ ನಡೆಯುತ್ತದೆ. 

ಹೊರ ಜಿಲ್ಲೆಯ ಪ್ರವಾಸಿಗರನ್ನು ಸಹ ಆಕರ್ಷಿಸಲು ಸಾಧ್ಯವಾಗುತ್ತದೆ. ಇತಿಹಾಸ ಸಂಶೋಧಕರು ಈ ಬಗ್ಗೆ ಕುತೂಹಲಿಗಳಾಗಿ ಈ ಸ್ಮಾಕರಗಳ ಬಗ್ಗೆ ಮತ್ತಷ್ಟು ಅಧ್ಯಯನದಲ್ಲಿ ತೊಡಗುವರು.

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯ ಬಗ್ಗೆ ನೂತನ ಪ್ರವಾಸೋದ್ಯಮ ನೀತಿಯಲ್ಲಿಯೂ ಪ್ರಸ್ತಾವಗಳಿಗೆ ಎನ್ನಲಾಗುತ್ತಿದೆ. ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಚಿಕ್ಕಬಳ್ಳಾಪುರವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿದೆ. 

ರಕ್ಷಿತ ಸ್ಮಾರಕಗಳು ಜಿಲ್ಲೆಗೆ ಮತ್ತಷ್ಟು ಪ್ರವಾಸಿಗರನ್ನು ಕರೆತರುವ ದೃಷ್ಟಿಯಿಂದ ಮಹತ್ವದ್ದಾಗಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಪ್ರವಾಸೋದ್ಯಮದ ಆಶಾದಾಯಕ ಬೆಳವಣಿಗೆ
ಪ್ತಿ ಸರ್ಕಾರಗಳು ಸಹ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ವಿಶೇಷವಾಗಿ ನಂದಿಗಿರಿಧಾಮವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಯೋಜನೆಗಳು ರೂಪಿತವಾಗುತ್ತಿದೆ. ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಸಮೀಪವಿರುವ ಕಾರಣ ಭವಿಷ್ಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರವಾಸೋದ್ಯಮವು ಆಶಾದಾಯಕವಾಗಿ ಬೆಳೆಯುವ ಲಕ್ಷಣಗಳು ದಟ್ಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.