ADVERTISEMENT

ಚಿಕ್ಕಬಳ್ಳಾಪುರ: ಸಿಎಎ, ಎನ್‌ಆರ್‌ಸಿ ಕೈಬಿಡುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 11:00 IST
Last Updated 24 ಡಿಸೆಂಬರ್ 2019, 11:00 IST
ಪ್ರತಿಭಟನೆ ವೇಳೆ ಕಂಡು ಬಂದ ಜನಸ್ತೋಮ –ಪ್ರಜಾವಾಣಿ ಚಿತ್ರ
ಪ್ರತಿಭಟನೆ ವೇಳೆ ಕಂಡು ಬಂದ ಜನಸ್ತೋಮ –ಪ್ರಜಾವಾಣಿ ಚಿತ್ರ   

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನ ಎದುರು ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿವಿಧೆಡೆಯಿಂದ ಮೆರವಣಿಗೆ ಬಂದ ಮುಸ್ಲಿಂ ಸಮುದಾಯದವರು ಕಪ್ಪುಪಟ್ಟಿ ಧರಿಸಿ ಸಿಎಎ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ನಗರಸಭಾ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದರು. ಬಹುಜನ ಸಮಾಜ ಪಕ್ಷ, ದಲಿತಪರ, ಸಿಪಿಎಂ, ದಲಿತ ಸಂಘರ್ಷ ಸಮಿತಿ, ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಹೋರಾಟಕ್ಕೆ ಕೈಜೋಡಿಸಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿ ಶಾಸಕ ಕೆಆರ್‌.ರಮೇಶ್ ಕುಮಾರ್, ‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 70 ವರ್ಷಗಳಲ್ಲಿ ಈ ಹಿಂದೆ ಯಾವತ್ತಿಗೂ ಇಂತಹ ಸನ್ನಿವೇಶ ಬಂದಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಿಲುವನ್ನು ತಾಳಿದಾಗ ಏನು ಮಾಡಬೇಕು ಎಂಬುದು ಸಂವಿಧಾನದಲ್ಲಿ ಬರೆದಿಲ್ಲ. ಆದ್ದರಿಂದ ನಾವು ಈ ದಿನ ಬೀದಿಗೆ ಬಂದಿದ್ದೇವೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಜೀವನ ನಡೆಸಬೇಕು ಎಂಬುದು ಸಂವಿಧಾನ ಮೂಲ ಉದ್ದೇಶ. ಬಿ.ಆರ್.ಅಂಬೇಡ್ಕರ್ ಅವರು ಒಂದೇ ದಿನದಲ್ಲಿ ಸಂವಿಧಾನ ರಚಿಸಿಲ್ಲ. ದೇಶದಲ್ಲಿ ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಮುಂದಾಲೋಚನೆ ಇಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಆದರೆ ಇವತ್ತು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರು ದೇಶದಲ್ಲಿ ಹಿಟ್ಲರ್‌ ಆಡಳಿತ ನಡೆಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಕಾಂಗ್ರೆಸ್ ಮುಖಂಡರಾದ ನಂದಿ ಆಂಜನಪ್ಪ, ಕೆ.ಎನ್.ಕೇಶವರೆಡ್ಡಿ, ಜೆಡಿಎಸ್ ಮುಖಂಡ ಎನ್.ರಾಧಾಕೃಷ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.