ADVERTISEMENT

ವಕ್ಫ್ ಬೋರ್ಡ್: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 15:30 IST
Last Updated 8 ನವೆಂಬರ್ 2024, 15:30 IST
ಗೌರಿಬಿದನೂರು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು
ಗೌರಿಬಿದನೂರು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು   

ಗೌರಿಬಿದನೂರು: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ಬರುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ‘ದೇಶಕ್ಕೆ ಅನ್ನವನ್ನು ನೀಡುವ ರೈತರನ್ನು ಸರ್ಕಾರಗಳು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ಹಗಲು ರಾತ್ರಿಯೆನ್ನದೆ ವ್ಯವಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಹಲವಾರು ರೈತರ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರನ್ನು ನಮೂದಿಸಿ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದರು.

‘ರೈತರು ಉನ್ನತಿಯಾದರೆ ಮಾತ್ರ ದೇಶದ ಉನ್ನತಿಯಾಗುವುದು. ಹಲವು ತೊಂದರೆಗಳ ನಡುವೆ ವ್ಯವಸಾಯ ಮಾಡಿಕೊಂಡು ದೇಶಕ್ಕೆ ಬೆನ್ನೆಲುಬಾಗಿ ರೈತರು ನಿಂತಿದ್ದಾರೆ. ಆದರೆ ಸರ್ಕಾರ ರಾಜಕೀಯ ಪ್ರೇರಿತವಾಗಿ ರೈತರ ಧೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ. ಕೂಡಲೇ ಸರ್ಕಾರ ಇದನ್ನು ಹಿಂಪಡೆಯಬೇಕು’ ಎಂದರು.

ADVERTISEMENT

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ‘ತಾಲ್ಲೂಕಿನಲ್ಲೂ ಹಲವು ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಬಂದಿದ್ದು, ಬಹಳ ಅತಂಕಕಾರಿಯಾಗಿದೆ. ಈ ತಪ್ಪುಗಳನ್ನು ಅಧಿಕಾರಿಗಳು ತಕ್ಷಣವೇ ಸರಿಪಡಿಸಿ, ಪಹಣಿಗಳಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಬೇಕು’ ಎಂದರು.

ತಹಶೀಲ್ದಾರ್ ಮಹೇಶ್ ಪತ್ರಿ ಮನವಿ ಸ್ವೀಕರಿಸಿ ಮಾತನಾಡಿ, ‘ತಾಲ್ಲೂಕಿನ ಕೆಲವು ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಬಂದಿರುವುದು ಗಮನಕ್ಕೆ ಬಂದಿದೆ. ಇದರ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ರಾಜಣ್ಣ, ಸನತ್ ಕುಮಾರ್, ಮುದ್ದು ರಂಗಪ್ಪ, ಬಾಬು, ಗೋಪಿನಾಥ್, ವೆಂಕಟೇಶ್, ಮುನಿವೆಂಕಟಪ್ಪ, ಲಿಂಗಪ್ಪ, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.