ADVERTISEMENT

ಸುಧಾಕರ್– ಪ್ರದೀಪ್ ನಡುವೆ ಜಿದ್ದು: ಶಿಷ್ಟಾಚಾರದ ಅಡಕತ್ತರಿಯಲ್ಲಿ ಅಧಿಕಾರಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 3 ಅಕ್ಟೋಬರ್ 2024, 5:37 IST
Last Updated 3 ಅಕ್ಟೋಬರ್ 2024, 5:37 IST
ಪ್ರದೀಪ್ ಈಶ್ವರ್ ಮತ್ತು ಸುಧಾಕರ್
ಪ್ರದೀಪ್ ಈಶ್ವರ್ ಮತ್ತು ಸುಧಾಕರ್    

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಶಿಷ್ಟಾಚಾರ’ದ ವಿಚಾರವು ಅಧಿಕಾರಿಗಳ ವಲಯಕ್ಕೆ ತಲೆನೋವು ತಂದಿದೆ.  ಕಾರ್ಯಕ್ರಮಗಳಲ್ಲಿ ‘ಶಿಷ್ಟಾಚಾರ’ದ ವಿಚಾರ ವಾಗ್ವಾದ ಮತ್ತು ಪ್ರತಿಷ್ಠೆಯಾಗಿ ಪರಿವರ್ತನೆ ಆಗುತ್ತಿದೆ.

ಸಂಸದ ಡಾ.ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಅವರ ಬೆಂಬಲಿಗರ ನಡುವೆ ‘ಶಿಷ್ಟಾಚಾರ’ ಪಾಲನೆ ಮತ್ತು ಉಲ್ಲಂಘನೆಗೆ ಸಂಬಂಧಿಸಿದ ಜಟಾಪಟಿ ಆಗಾಗ್ಗೆ ನಡೆಯುತ್ತಲೇ ಇದೆ. ಈ ಜಟಾಪಟಿಯಲ್ಲಿ ಹೈರಾಣಾಗುತ್ತಿರುವುದು ಅಧಿಕಾರಿ ವಲಯ. 

ಆ.26ರಂದು ನಡೆದ ಕೃಷ್ಣಜನ್ಮಾಷ್ಟಮಿ ಸಮಯದಲ್ಲಿಯೂ ‘ಶಿಷ್ಟಾಚಾರ’ ಪಾಲನೆಯ ವಿಚಾರ ಬೀದಿಗೆ ಬಂದಿತ್ತು. ಡಾ.ಕೆ.ಸುಧಾಕರ್ ಪರವಾಗಿರುವ ನಗರಸಭೆ ಸದಸ್ಯರೊಬ್ಬರನ್ನು ವೇದಿಕೆಯಲ್ಲಿ ಕೂರಿಸಿದ ವಿಚಾರಕ್ಕೆ ಸಿಟ್ಟಿಗೆದಿದ್ದರು. ಆಗ ಶಾಸಕರ ಬೆಂಬಲಿಗರು ಸಹ ವೇದಿಕೆಗೆ ಬಂದರು. ಬೆಂಬಲಿಗರ ಪರವಾಗಿ ಪ್ರದೀಪ್ ಈಶ್ವರ್ ಮಾತನಾಡಿದರು. ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರಿಗೂ ಶಿಷ್ಟಾಚಾರದ ಪಾಠ ಮಾಡಿದರು. 

ADVERTISEMENT

ಇತ್ತೀಚೆಗೆ ತಾಲ್ಲೂಕಿನ ಕುಡುವತಿ ಗ್ರಾಮದಲ್ಲಿ ಶಾಲಾಕೊಠಡಿಗಳನ್ನು ಉದ್ಘಾಟಿಸಲಾಯಿತು. ಡಾ.ಕೆ.ಸುಧಾಕರ್ ಶಾಸಕರಾಗಿದ್ದ ವೇಳೆ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ಮೂರು ಕೊಠಡಿಗಳನ್ನು ನಿರ್ಮಿಸಲು ಮುತುವರ್ಜಿವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸಂಸದರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಸಿಟ್ಟಾದ ಸಂಸದರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು.  

ಸುಧಾಕರ್ ಶಾಸಕರಾಗಿದ್ದ ವೇಳೆ ತಾಲ್ಲೂಕಿನ ಗ್ರಾಮೀಣ ಭಾಗಗಳ ಶಾಲೆಗಳ ಅಭಿವೃದ್ಧಿ ದೊಡ್ಡ ಮಟ್ಟದಲ್ಲಿಯೇ ಸಿಎಸ್‌ಆರ್ ಅನುದಾನವನ್ನು ಬಳಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೊಠಡಿಗಳ ಉದ್ಘಾಟನೆಯ ವಿಚಾರವಾಗಿ ಅಧಿಕಾರಿಗಳಿಗೆ ಶಿಷ್ಟಾಚಾರದ ಸಂಕಟ ಮತ್ತಷ್ಟು ಎದುರಾಗುವ ಸಾಧ್ಯತೆಯೂ ಇದೆ. 

ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವೇಳೆ ಸ್ಥಳೀಯ ಶಾಸಕರು ಅಧ್ಯಕ್ಷತೆವಹಿಸುವರು. ಸಂಸದರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.  ರಾಷ್ಟ್ರೀಯ ಹಬ್ಬಗಳ ಆಚರಣೆ, ಸರ್ಕಾರದಿಂದ ನಡುವೆಯ ದಾರ್ಶನಿಕರ ಜಯಂತಿಗಳು, ಸರ್ಕಾರಿ ದಿನಾಚರಣೆಗಳಲ್ಲಿಯೂ ಈ ಶಿಷ್ಟಾಚಾರ ಪಾಲನೆ ಇರುತ್ತದೆ. 

ಶಾಸಕ, ಸಂಸದರು ಬರಲಿ ಬಿಡಲಿ ‘ಶಿಷ್ಟಾಚಾರ’ದ ಪ್ರಕಾರ ಅವರ ಹೆಸರನ್ನು ಆಹ್ವಾನ ಪತ್ರಿಕೆಗಳಲ್ಲಿ ನಮೂದಿಸಬೇಕು. ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಈ ಎಲ್ಲ ಕಾರಣದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಶಿಷ್ಟಾಚಾರ ಪಾಲನೆ ಅಧಿಕಾರಿ ವಲಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

‘ಶಿಷ್ಟಾಚಾರ’ ಪಾಲನೆಯಲ್ಲಿ ಸ್ವಲ್ಪ ಲೋಪವಾದರೂ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಅಧಿಕಾರಿಗಳ ಮೇಲೆ ಮುಗಿಬೀಳುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಕಾರಣದಿಂದ ಅಧಿಕಾರಿಗಳಿಗೆ ‘ಶಿಷ್ಟಾಚಾರ’ವು ತಲೆನೋವು ತಂದಿದೆ.

ಚಿಕ್ಕಬಳ್ಳಾಪುರ ನಗರಸಭೆ, ಪಿಎಲ್‌ಡಿ ಬ್ಯಾಂಕ್ ಅಧಿಕಾರ ಬಿಜೆಪಿ ಬೆಂಬಲಿತರ ಹಿಡಿತದಲ್ಲಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಸದ ಡಾ.ಕೆ.ಸುಧಾಕರ್ ಭಾವಚಿತ್ರ ಕಡ್ಡಾಯವಾಗಿರುತ್ತದೆ.

ಈ ಹಿಂದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಅಂದಿನ ಸಂಸದ ಬಿ.ಎನ್.ಬಚ್ಚೇಗೌಡ ಅವರ ಭಾವಚಿತ್ರ ಹಾಕಲಾಗುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.