ADVERTISEMENT

ಮಂಚೇನಹಳ್ಳಿ ಮಿನಿವಿಧಾನ ಸೌಧಕ್ಕೆ ₹15 ಕೋಟಿ: ಆರ್.ಅಶೋಕ

ಜರಬಂಡಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:26 IST
Last Updated 27 ನವೆಂಬರ್ 2022, 2:26 IST
ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಭತ್ತ ಕುಟ್ಟಿದರು
ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಭತ್ತ ಕುಟ್ಟಿದರು   

ಮಂಚೇನಹಳ್ಳಿ: ‌‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಬಂದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಗ್ರಾಮಸ್ಥರು ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸಹ ಜೊತೆಯಾದರು.

ನುಲಗುಮ್ಮನಹಳ್ಳಿ ಗ್ರಾಮಕ್ಕೆ ಬಂದ ಸಚಿವತ್ರಯರಿಗೆ 150 ಕೆ.ಜಿಗೂ ಹೆಚ್ಚು ತೂಕದ ಕನಕಾಂಬರದ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು. ತೆರೆದ ವಾಹನದಲ್ಲಿ ಬಂದ ಸಚಿವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.

ನುಲಗುಮ್ಮನಹಳ್ಳಿ ಗ್ರಾಮದಿಂದ ಜರಬಂಡಹಳ್ಳಿಯ ವೇದಿಕೆ ಸ್ಥಳದವರೆಗೆ ಸಚಿವರನ್ನು ಎತ್ತಿನಗಾಡಿ ಮೂಲಕ ಕಲಾ ತಂಡಗಳ ಮೆರವಣಿಗೆ ಮೂಲಕ ಕರೆತರಲಾಯಿತು. ಸಚಿವರು ವಿವಿಧ ಇಲಾಖೆಗಳು ತೆರೆದಿರುವ ಮಳಿಗೆಗಳು, ಶಿಬಿರಗಳು, ನೋಂದಣಿ ಕೇಂದ್ರಗಳು ಮತ್ತು ಕೃಷಿ, ತೋಟಗಾರಿಕೆ, ರೇಷ್ಮೆ ಪಶುಪಾಲನಾ, ನರೇಗಾ ಯೋಜನೆಯ ಸೌಲಭ್ಯಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿ ಅವುಗಳಿಗೆ ಚಾಲನೆ ನೀಡಿದರು.

ADVERTISEMENT

ನಂತರ ಸಿರಿಧಾನ್ಯಗಳ ರಾಶಿ ಪೂಜೆ ಮಾಡಿದರು. ವೇದಿಕೆಗೆ ಬಂದು ಸಂವಿಧಾನ ದಿನದ ಅಂಗವಾಗಿ ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂವಿದಾನದ ಪೀಠಿಕೆಯನ್ನು ಕಂದಾಯ ಸಚಿವರು ನೆರೆದಿದ್ದವರಿಗೆ ಬೋಧಿಸಿದರು.

ಮಿನಿ ವಿಧಾನಸೌಧಕ್ಕೆ ಹಣ:ನೂತನವಾಗಿ ರಚನೆ ಆಗಿರುವ ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ₹ 15 ಕೋಟಿ ಅನುದಾನ ನೀಡಲಾಗುವುದು ಎಂದು ಆರ್.ಅಶೋಕ ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರು ಮತ್ತು ನಿವೇಶನ ರಹಿತರಿಗೆ ನಿವೇಶನ ನೀಡಲು 826 ಎಕರೆ ಜಮೀನನ್ನು ನೀಡಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ 565 ಮತ್ತು ನಗರ ಪ್ರದೇಶದಲ್ಲಿ 191 ಎಕರೆಯನ್ನು ನಿವೇಶನಕ್ಕಾಗಿ ನೀಡಲಾಗುವುದು. ಸಚಿವರ ಸಂಪುಟದಲ್ಲಿ ಈ ಜಮೀನು ಮಂಜೂರಿಗೆ ಅನುಮೋದನೆ ಪಡೆಯುತ್ತೇವೆ. ಇದರಿಂದ 22 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ಹೇಳಿದರು.

ಜರಬಂಡಹಳ್ಳಿ ಗ್ರಾಮದ ಅಭಿವೃದ್ಧಿಗೆ ₹ 1 ಕೋಟಿ ಅನುದಾನವನವನ್ನು ಬಿಡುಗಡೆಗೊಳಿಸಲಾಗಿದೆ. ಈ ಹಣದಲ್ಲಿ ಯಾವ ಕಾಮಗಾರಿಗಳು ನಡೆಯಬೇಕು ಎನ್ನುವ ಬಗ್ಗೆ ಗ್ರಾಮಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸುವ ಸಲುವಾಗಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದರು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕಂದಾಯ ಇಲಾಖೆ ಮಾತೃ ಇಲಾಖೆ.‌ ಅಂದರೆ ಮಾತೃ ಹೃದಯಬೇಕು. ಆ ಹೃದಯವನ್ನು ಅಶೋಕ ಅವರು ಇಟ್ಟುಕೊಂಡಿದ್ದಾರೆ
ಎಂದರು.

ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಮ್ಮ ತಾಯಿ ಅವರ ಹೆಸರಿನಲ್ಲಿ ಉಚಿತ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ಪ್ರತಿ ಹೋಬಳಿಯಲ್ಲಿ ಶಾಂತಾ ಮೊಬೈಲ್ ಕ್ಲಿನಿಕ್ ಆರಂಭಿಸಲಾಗುವುದು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದಿದ್ದರೆ ನಿಮಗೆ ನೀವೇ ಅನ್ಯಾಯ ಮಾಡಿಕೊಳ್ಳುತ್ತೀರಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್, ಚಿಕ್ಕಬಳ್ಳಾಪುರ ನಗಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷಶ್ರೀನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.