ಚಿಕ್ಕಬಳ್ಳಾಪುರ: ಒಂದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ 900 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಸರಿಯಾಗಿ ಬಿತ್ತನೆ ಬೀಜ ಸಹ ದೊರೆಯುತ್ತಿಲ್ಲ. ಖಜಾನೆ ಖಾಲಿ ಖಾಲಿ. ಮುಂದಿನ ಎರಡು ತಿಂಗಳಲ್ಲಿ ಶಿಕ್ಷಕರ ವೇತನಕ್ಕೆ ಹಣವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು
ಪಾಪರ್ ಸರ್ಕಾರ ಇದು. ಲೋಕಸಭಾ ಚುನಾವಣೆಯ ನಂತರ ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರ ಸಹ ನಿಲ್ಲಿಸುವರು. ಅಕ್ಕಿ ಹಣ ನೀಡಿಲ್ಲ. ಹಾಲಿನ ಪ್ರೋತ್ಸಾಹ ಧನವಿಲ್ಲ. ವಿದ್ಯಾರ್ಥಿ ವೇತನವನ್ನು ಮುಚ್ಚಿಟ್ಟಿದ್ದಾರೆ ಎಂದರು.
ರಸ್ತೆ, ಶಾಲೆಗೆ ಅನುದಾನ ತಂದಿದ್ದಾರಾ ಎಂದು ಇಲ್ಲಿನ ಕಾಂಗ್ರೆಸ್ ಶಾಸಕರನ್ನು ಕೇಳಿ. ಕ್ಷೇತ್ರದ ಅಭಿವೃದ್ಧಿಗೆ ಹಣ ತರುವ ಶಕ್ತಿ ಯಾವ ಶಾಸಕರಿಗೂ ಇಲ್ಲ. ಒಬ್ಬ ಶಾಸಕ ಸಹ ಸಿ.ಎಂ, ಡಿಸಿಎಂ ಮನೆಗೆ ಹೋಗಲ್ಲ ಎಂದರು.
ಕಾಂಗ್ರೆಸ್ ಬಂದರೆ ಅಭಿವೃದ್ಧಿ ಇಲ್ಲ. ಬ್ರಾಂಡ್ ಬೆಂಗಳೂರು ಅಂದರು ಆದರೆ ಒಂದು ರೂಪಾಯಿ ಸಹ ಬೆಂಗಳೂರಿಗೆ ಅನುದಾನ ನೀಡಿಲ್ಲ. ಕರ್ನಾಟಕದ ತೆರಿಗೆ ನಮಗೆ ಕೊಡಿ ಎಂದು ಕಾಂಗ್ರೆಸ್ ನವರು ನವದೆಹಲಿಯಲ್ಲಿ ಪ್ರತಿಭಟನೆ ಮಾಡಿದರು. ಆದರೆ ಈಗ ನಮ್ಮ ತೆರಿಗೆ ನಮಗೆ ಕೊಡಿ ಎಂದು ಬೆಂಗಳೂರಿನ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಹಣ ಬಿಡುಗಡೆ ಮಾಡದ ಕಾರಣ ಯಾವ ಗುತ್ತಿಗೆದಾರರು ಕೆಲಸ ಮಾಡಲು ಬರುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ ಜೆಡಿಎಸ್ ಒಗ್ಗೂಡಿದರೆ ನಾವು ಗೆಲ್ಲಲ್ಲ ಎನ್ನುವುದು ಕಾಂಗ್ರೆಸ್ ನವರಿಗೆ ಗೊತ್ತು. ಆ ಕಾರಣ ಕುತಂತ್ರ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಯಾರ ಯಾರ ಹಣೆಬರಹ ಏನು ಆಗಲಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ನಮ್ಮ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ಗಟ್ಟಿಯಾಗಿರುತ್ತದೆಯೇ?:
ಮೋದಿ ಪ್ರಧಾನಿ ಮತ್ತೊಮ್ಮೆ ಪ್ರಧಾನಿ ಆದರೆ ಈ ಸರ್ಕಾರ ಗಟ್ಟಿ ಆಗಿರುತ್ತದೆಯಾ ನೋಡಿಕೊಳ್ಳಿ ಎಂದು ಆರ್.ಅಶೋಕ ತಿಳಿಸಿದರು.
ಕಾಂಗ್ರೆಸ್ ಶಾಸಕರೇ ಈ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.