ADVERTISEMENT

ಚಿಂತಾಮಣಿ | 2 ಎಕರೆಯಿಂದ 50 ಎಕರೆಗೆ... ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಎಂ.ರಾಮಕೃಷ್ಣಪ್ಪ
Published 9 ನವೆಂಬರ್ 2024, 6:11 IST
Last Updated 9 ನವೆಂಬರ್ 2024, 6:11 IST
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕೃಷ್ಣ
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕೃಷ್ಣ   

ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕಷ್ಣ ಅವರು ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ.14 ರಿಂದ 17 ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ನಡೆಯಲಿರುವ ಕೃಷಿ ಮೇಳದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕುರಿ ಸಾಕಾಣಿಕೆಯ ಜತೆಗೆ 2 ಎಕರೆಯಿಂದ ಪ್ರಾರಂಭಗೊಂಡ ಕೃಷಿ ಇಂದು 50 ಎಕರೆಯವರೆಗೂ ವಿಸ್ತರಿಸಿದೆ. ಇದು ರಾಧಾಕೃಷ್ಣ ಅವರ ಯಶೋಗಾಥೆ ಮತ್ತು ಸಾಹಸಮಯ ಕೃಷಿ ಬದಕು.

ಕುಟುಂಬದ ಪ್ರತಿಯೊಬ್ಬರು ದುಡಿಮೆಯಲ್ಲಿ ತೊಡಗಿರುವುದೇ ಅವರ ಯಶಸ್ಸಿಗೆ ಸಕಾರಣ. ಒಕ್ಕಲುತನದಲ್ಲಿ ವಿನೂತನ ತಂತ್ರಜ್ಞಾನಗಳನ್ನು ಬಳಸಿ, ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಿ ಆದಾಯ ವೃದ್ಧಿಸಿಕೊಂಡ ರೈತ ಕುಟುಂಬವಾಗಿದೆ.

ADVERTISEMENT

ಬಿಎಸ್ಸಿ ಪದವೀಧರ ರಾಧಾಕೃಷ್ಣ ಕೃಷಿಯಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡರು. ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಜೀವಾಮೃತ ತಯಾರಿಸಿ ಸಾವಯವ ಗೊಬ್ಬರ ತಯಾರಿಸಿದರು. 

ತೆಂಗು, ಗೋಡಂಬಿ, ಸೀಬೆ, ನುಗ್ಗೆ, ಮಾವು, ಹಲಸು, ಜುಂಬುನೇರಳೆ, ಹುಣಸೆ ಬೆಳೆದು ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಕೃಷಿಗೆ ಅಳವಡಿಸಿ ತೋಟದಲ್ಲಿ ಮಿಶ್ರ ಬೆಳೆಯಾಗಿ ಅವರೆ, ಹುರುಳಿ, ಅಲಸಂದೆ, ತೊಗರಿ ಬೆಳೆಯುತ್ತಿದ್ದಾರೆ. ಕುಟುಂಬಕ್ಕೆ ಬೇಕಾದ ತರಕಾರಿಗಳನ್ನು ಬೆಳೆದು ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.  

ಒಬ್ಬ ಸಾಮಾನ್ಯ ಕೃಷಿಕನಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಮತ್ತು ಕುಕ್ಕಟ ಸಾಕಾಣಿಕೆಯನ್ನು ಯಶಸ್ವಿಯಾಗಿ ಶ್ರದ್ಧೆ ಮತ್ತು ಶ್ರಮದಿಂದ ನಿರ್ವಹಿಸುತ್ತಿದ್ದಾರೆ.

ಅವರ ಕೃಷಿ ಭೂಮಿ ಪ್ರಾಯೋಗಿಕ ಕೃಷಿ ವಿಶ್ವವಿದ್ಯಾಲಯವಾಗಿದೆ. ಮೈಸೂರು, ತುಮಕೂರು, ಗದಗ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತ ತಂಡಗಳು ಕೃಷಿ ಅಧ್ಯಯನ ಪ್ರವಾಸದಲ್ಲಿ ರಾಧಾಕೃಷ್ಣ ಅವರ ಕೃಷಿಭೂಮಿಗೆ ಭೇಟಿ ನೀಡುತ್ತಾರೆ.  

ಸಮಗ್ರ ಕೃಷಿ, ಸಾವಯವ ಕೃಷಿ, ಶೂನ್ಯ ಬಂಡವಾಳದ ಕೃಷಿ, ಪ್ರಕೃತಿಯ ಜತೆ ಹೊಂದಾಣಿಕೆ ಮಾಡಿಕೊಂಡು ಹೇಗೆ ಕೃಷಿಯಿಂದ ಲಾಭ ಪಡೆಯಬಹುದು. ಉಪಕಸುಬುಗಳನ್ನು ಯಾವ ರೀತಿಯಲ್ಲಿ ಕೈಗೊಂಡು, ರೈತ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ರಾಧಾಕೃಷ್ಣ ವಿವರಿಸುತ್ತಾರೆ.

 ಹೂ, ಹಣ್ಣು, ತರಕಾರಿ, ಹಸು, ನಾಯಿ, ಕುರಿ, ಮೇಕೆ, ಕೋಳಿ, ಮೀನು, ಜೇನು,  ಹುಣಸೆ, ಜಂಬುನೇರಳೆ, ಹಲಸು, ಮಾವು, ಹೆಬ್ಬೇವು ಮತ್ತಿತರ ಮರಗಳ ಮೂಲಕ ಅರಣ್ಯವಾಗಿದೆ.  

ಕೋಳಿಫಾರಂ ಚಾವಣಿಯಲ್ಲಿ ಸರ್ಕಾರದ ಸಹಾಯದಿಂದ ಸೋಲಾರ್ ಸಿಸ್ಟಮ್ ಅಳವಡಿಸಿದ್ದಾರೆ. ತೋಟದ ಮನೆಗೆ, ಕೋಳಿಫಾರಂ, ಪಂಪ್ ಸೆಟ್ ಗಳಿಗೆ ವಿದ್ಯುತ್ ದೊರೆಯುತ್ತದೆ. ಉಳಿತಾಯವಾದ ವಿದ್ಯುತ್ ಅನ್ನು ಬೆಸ್ಕಾಂ ಪಡೆದುಕೊಂಡು ನಿಗದಿತ ದರದಂತೆ ಹಣ ಪಾವತಿಸುತ್ತದೆ. ಹೀಗೆ ನಾನಾ ರೀತಿಯ ಹೊಸ ಹೊಸ ಚಿಂತನೆಗಳಿಂದ ಕೃಷಿ ಸಂಶೋಧಕರಾಗಿ ಹೊರಹೊಮ್ಮಿದ್ದಾರೆ.

ರಾಧಾಕೃಷ್ಣ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಮಗ್ರ ಕೃಷಿಯನ್ನು ಗುರುತಿಸಿ ಪ್ರಸಕ್ತ ಸಾಲಿನಲ್ಲಿ ನೀಡುತ್ತಿರುವ ಎಚ್.ಡಿ.ದೇವೇಗೌಡ ಅತ್ಯುತ್ತಮ ರಾಜ್ಯ ಮಟ್ಟದ ಪ್ರಶಸ್ತಿಯಿಂದ ಅವರ ಕೃಷಿ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.

ಉಪಕಸುಬಿನಿಂದ ಲಾಭ

ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಬೇಕು. ತೋಟದಲ್ಲಿ ಹಾಗೂ ವಿವಿಧ ಮರಗಿಡಗಳ ಪರಾಗಸ್ಪರ್ಶಕ್ಕಾಗಿ ಜೇನು ಸಾಕಾಣಿಕೆಯು ಅಗತ್ಯ ಎನ್ನುತ್ತಾರೆ ರಾಧಾಕೃಷ್ಣ. ಸಮಗ್ರ ಕೃಷಿಯ ಮೂಲವಾದ ಕುರಿ ಮೇಕೆ ಸಾಕಾಣಿಕೆ ಹೈನುಗಾರಿಕೆಯ ಉಪ ಕಸುಬುಗಳನ್ನು ಕೈಗೊಂಡರೆ ರೈತರಿಗೆ ನಷ್ಟ ಇರುವುದಿಲ್ಲ. ಯಾವುದೇ ರೀತಿಯ ಬಂಡವಾಳ ಹೂಡಬೇಕಾಗಿಲ್ಲ. ಬಂದಿದ್ದು ಎಲ್ಲ ಲಾಭವೇ. ಅಕಸ್ಮಾತ್ ಒಂದು ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತದೆ. ರೈತರಿಗೆ ನಷ್ಟವೂ ಇಲ್ಲ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.