ADVERTISEMENT

ಗೌರಿಬಿದನೂರು | ಒತ್ತುವರಿ ಕದಂಬಬಾಹು: ರಾಜಕಾಲುವೆ ಸಮಾಧಿ

ಮಳೆಗಾಲದಲ್ಲಿ ಮಾತ್ರ ಅಧಿಕಾರಿಗಳ ಕಾರ್ಯಾಚರಣೆ * ಗಟಾರಗಳಾದ ಕಾಲುವೆಗಳು

ಕೆ.ಎನ್‌.ನರಸಿಂಹಮೂರ್ತಿ
Published 24 ಮೇ 2024, 6:20 IST
Last Updated 24 ಮೇ 2024, 6:20 IST
ಮುನೇಶ್ವರ ಬಡಾವಣೆ (ಅರವಿಂದ ನಗರ )ದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ
ಮುನೇಶ್ವರ ಬಡಾವಣೆ (ಅರವಿಂದ ನಗರ )ದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ   

ಗೌರಿಬಿದನೂರು: ನಗರ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ರಾಜಕಾಲುವೆಗಳಿದ್ದವು. ಆದರೆ ಒತ್ತುವರಿಯ ಕದಂಬಬಾಹುನಿಂದ ರಾಜಕಾಲುವೆಗಳು ಕಣ್ಮರೆಯಾಗಿವೆ.

ಇರುವ ಕೆಲವು ಕಾಲುವೆಗಳು ಗಟಾರಗಳಾದರೆ, ಹಲವು ಕಾಲುವೆಗಳಿಗೆ ಮಣ್ಣು ತುಂಬಿಕೊಂಡಿದೆ. ಕಟ್ಟಡ ತ್ಯಾಜ್ಯವನ್ನು ಕಾಲುವೆಯಲ್ಲಿ ಸುರಿಯಲಾಗಿತ್ತಿದ್ದು, ನಗರದ ಬಹುತೇಕ ರಾಜಕಾಲುವೆಗಳು ಸಮಾಧಿಯಾಗಿವೆ.

ರಾಜಕಾಲುವೆ ಒತ್ತುವರಿ ಆಗುವುದರಿಂದ ಅಪಾಯ ಕಟ್ಟಿಟ್ಟ‌‌ ಬುತ್ತಿ ಎಂದು ತಿಳಿದಿದ್ದರೂ ಅಧಿಕಾರಿಗಳು ಜಾಣ ಮೌನವಹಿಸಿರುತ್ತಾರೆ. ಮಳೆ ಬಂದೂ ಹಾನಿ ಉಂಟು ಮಾಡಿದ ಮೇಲೆ ಎಚ್ಚೆತ್ತು ಕಾಲುವೆ ಸ್ವಚ್ಛತೆ ಮತ್ತು ಒತ್ತುವರಿ ತೆರವುಗೊಳಿಸುತ್ತಾರೆ. ಆದರೆ ಮಳೆ ನಿಲ್ಲುವ ಹೊತ್ತಿಗೆ ಇವರ ಕೆಲಸವೂ ನಿಲ್ಲುತ್ತದೆ.

ADVERTISEMENT

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೋರು ಮಳೆಯಿಂದ ಗಂಗಸಂದ್ರ ಗೊಟಕನಾಪುರ, ಹಿರೇಬಿದನೂರು, ಮೂರುಮನೆಹಳ್ಳಿ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿದ್ದ ಅವಾಂತರದಿಂದ ಜಾಗೃತಗೊಂಡಿದ್ದ ಆಡಳಿತ ವರ್ಗ, ಸಮರೋಪಾದಿಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು. ಆದರೆ ಮಳೆ ನಿಂತ ಕೂಡಲೇ ಅಧಿಕಾರಿಗಳ ಕೆಲಸವು ನಿಂತಿತ್ತು.

ಈಗ ಮತ್ತೆ ಮಳೆಗಾಲ ಆರಂಭವಾಗುತ್ತಿದೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಭೀತಿಯಲ್ಲಿ ನಗರದ ಸಾರ್ವಜನಿಕರು.

ರಾಜಕಾಲವೆ ಸಂಬಂಧ ಕೈಗೊಳ್ಳುವ ಯಾವುದೇ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಒತ್ತುದಾರಿದಾರರ ಪ್ರಭಾವ ಹಾಗೂ ಸ್ಥಳೀಯ ಮುಖಂಡರ ಪ್ರಭಾವದಿಂದ ಕಾಮಗಾರಿ ಆರಂಭದಲ್ಲೇ, ಇಲ್ಲವೇ ಅರ್ಧಕ್ಕೆ ನಿಲ್ಲುತ್ತದೆ.

ನಗರದ ಮಾನಸ ವೃತ್ತದಿಂದ ಉತ್ತರ ಪಿನಾಕಿನಿ ನದಿಗೆ ಸಾಗುವ ರಾಜ ಕಾಲುವೆ ಎಲ್ಲಿದೆ ಎಂಬುದೇ ಯಾರಿಗೂ ಗೊತ್ತಿಲ್ಲ. ಅಧಿಕಾರಿಗಳು ಮೈ ಮರೆತರೆ ರಾಜಕಾಲುವೆ ಕಣ್ಮರೆಯಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು.

ಕೆಇಬಿ ಹಿಂಭಾಗ ಕರೇಕಲ್ಲಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ಎಷ್ಟೋ ರಾಜಕಾಲುವೆಗಳು ಕೆಲವರ ಸ್ವಾರ್ಥಕ್ಕೆ ಸಮಾಧಿಯಾಗಿವೆ. ಇನ್ನೂ ಕೆಲವೆಡೆ ಇರುವ ಸಣ್ಣ ಪುಟ್ಟ ರಾಜಕಾಲುವೆಗಳು ಚರಂಡಿಗಳಂತಾಗಿವೆ. ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಜಾಣ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಅಸಮಾಧಾನ.

ಜ್ಯೋತಿ ನಗರದಿಂದ ಕರೇಕಲ್ಲಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ದುಸ್ಥಿತಿ

ಮಳೆಗಾಲದ ಅವಾಂತರ: ಮನೆಗಳಿಗೆ ನುಗ್ಗುವ ನೀರು

ನಗರದ ಕೆಲವು ಕಡೆ ಮಳೆ ನೀರು ಹರಿಯುವ ಕಾಲುವೆಗಳು ಮಣ್ಣಿನಿಂದ ತುಂಬಿಕೊಂಡಿದೆ. ಮಳೆ ಬಂದರೆ ಮಳೆ ನೀರು ಹರಿಯಲು ಕಾಲವೆ ಹುಡುಕಬೇಕಿದೆ. ಹಲವೆಡೆ ಕಟ್ಟಡದ ತ್ಯಾಜ್ಯವನ್ನು ತಂದು ಕಾಲುವೆಗಳಲ್ಲಿ ವಿಲೇವಾರಿ ಮಾಡುವುದರಿಂದ ರಾಜಕಾಲುವೆ ಮುಚ್ಚಿ ಹೋಗಿವೆ.  ಮಳೆ ನೀರು ಸರಾಗವಾಗಿ ಹರಿಯಬೇಕಿದ್ದ ಕಾಲುವೆಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿವೆ. ಇವೆಲ್ಲವು ಕಂಡರೂ ಕಾಣದಂತೆ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣರಾಗಿದ್ದಾರೆ. ಉತ್ತರ ಪಿನಾಕಿನಿಗೆ ಸಂಪರ್ಕ ಕಲ್ಪಿಸುವ ನಗರ ವ್ಯಾಪ್ತಿಯ ಬಹುತೇಕ ಕಾಲುವೆ ಒತ್ತುವರಿಯಾಗಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನೀರು ನುಗ್ಗುವುದು ಮಳೆಗಾಲದಲ್ಲಿ ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಅಳಲು ಹೇಳತೀರದಂತಿದೆ.

ಅಪಾಯ ಕಟ್ಟಿಟ್ಟ ಬುತ್ತಿ ನಗರದ ಯುಜಿಡಿ ಸಂಪರ್ಕ ವ್ಯವಸ್ಥೆ ಸರಿಯಿಲ್ಲದೆ. ಚರಂಡಿಗಳನ್ನು‌ ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದರಿಂದ ರಾಜಕಾಲುವೆಗಳು ಗಟಾರಗಳಾಗಿವೆ. ಈ ಕೊಳಚೆ ನೀರು  ಕರೇಕಲ್ಲಹಳ್ಳಿ ಮತ್ತು ಉತ್ತರ ಪಿನಾಕಿನಿ ನದಿ ಸೇರಿ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಈ ತೆರೆದ ರಾಜಕಾಲುವೆಗಳಿಗೆ ರಕ್ಷಣಾ ಗೋಡೆ ಇಲ್ಲದೆ ವೃದ್ಧರು ಮಕ್ಕಳು ಓಡಾಡುವುದು ಕಷ್ಟವಾಗಿದೆ. ಆಯತಪ್ಪಿ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳು.

ರಾಜಕಾಲುವೆ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ನನ್ನ ಅಧಿಕಾರ ಮುಗಿದ ನಂತರ ಅಧಿಕಾರಿಗಳು ರಾಜಕಾಲುವೆ ಬಗ್ಗೆ ಗಮನಹರಿಸುತ್ತಿಲ್ಲ. ಶೀಘ್ರವೇ ಮಳೆಗಾಲ ಆರಂಭವಾಗಲಿದೆ. ರಾಜಕಾಲುವೆ ತೆರವುಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು.
-ಬಿ.ಜಿ.ವೇಣುಗೋಪಾಲ ರೆಡ್ಡಿ, ಮಾಜಿ ಅಧ್ಯಕ್ಷ ಯೋಜನಾ ಪ್ರಾಧಿಕಾರ ನಗರಸಭೆ
ಕಳೆದ ವರ್ಷ ಬಿದ್ದ ಮಳೆಗೆ ಮನೆಯೊಳಗೆ 2 ಅಡಿಗಳಷ್ಟು ನೀರು ನಿಂತಿತ್ತು. ಆಗ ಅಧಿಕಾರಿಗಳು ರಾಜಕಾಲುವೆ ತೆರವು ಗೊಳಿಸುವ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಈಗ ಮಳೆಗಾಲ ಪ್ರಾರಂಭವಾಗಿದೆ. ಕಾಲುವೆ ಪಕ್ಕದ ಮನೆಯವರಿಗೆಲ್ಲ ಆತಂಕ ಶುರುವಾಗಿದೆ. ಜಯರಾಮಯ್ಯ ನಿವೃತ್ತ ಪ್ರಾಂಶುಪಾಲ ಅರವಿಂದ ನಗರ ಕಚೇರಿ ಮುಂದೆ ಕೆಸರು ಸುರಿಯುತ್ತೇವೆ ಕಳೆದ ಮಳೆಗಾಲದಲ್ಲಿ ಚರಂಡಿ ನೀರು ಮನೆಯೊಳಗೇ ನುಗ್ಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಾರಿ ಮನೆಗೆ ಕೆಸರು ನೀರು ಬಂದರೆ ಇಲ್ಲಿನ ನಿವಾಸಿಗಳೆಲ್ಲ ಸೇರಿ ಅಧಿಕಾರಿಗಳ ಕಚೇರಿಯ ಮುಂದೆ ಸುರಿಯುತ್ತೇವೆ.
-ಅಶ್ವತಪ್ಪ, ನಿವೃತ್ತ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.