ADVERTISEMENT

ಶಿಡ್ಲಘಟ್ಟ |ಸಂಭ್ರಮದ ಈದ್‌ ಮುಬಾರಕ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2023, 14:50 IST
Last Updated 22 ಏಪ್ರಿಲ್ 2023, 14:50 IST
ಶಿಡ್ಲಘಟ್ಟದಲ್ಲಿದ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಶಿಡ್ಲಘಟ್ಟದಲ್ಲಿದ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಶಿಡ್ಲಘಟ್ಟ: ಶಾಂತಿ ಸೌಹಾರ್ದತೆ ಮತ್ತು ಭಾತೃತ್ವವದ ಸಂದೇಶವನ್ನು ಸಾರುವ ಈದ್ ಉಲ್ ಫಿತ್ರ್‌ (ರಂಜಾನ್) ಹಬ್ಬವನ್ನು ಸಹಸ್ರಾರು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಶನಿವಾರ ಆಚರಿಸಿದರು.

ಕಳೆದ ಒಂದು ತಿಂಗಳಿಂದ ಉಪವಾಸ ವ್ರತವನ್ನು ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾದ ಮುಸ್ಲಿಮರು ಶನಿವಾರ ನಗರದ ಜಾಮಿಯಾ ಮಸೀದಿಯಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊರವಲಯದ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಬಡವರಿಗೆ ದಾನ: ಹಬ್ಬಕ್ಕೂ ಒಂದು ತಿಂಗಳು ಮುನ್ನ ಅವರು ಕೈಗೊಳ್ಳುವ ರೋಜಾ ಆಚರಣೆಯಲ್ಲಿ ಹಿರಿಯರು ಮತ್ತು ಕಿರಿಯರು ಬೇಧವಿಲ್ಲದೆ ಪಾಲ್ಗೊಂಡಿದ್ದರು. ಪವಿತ್ರ ರಂಜಾನ್ ಮಾಸವನ್ನು ಧಾರ್ಮಿಕ ತಿಂಗಳು. ಉಪವಾಸದ ತಿಂಗಳೆಂದೇ ಕರೆಯುತ್ತಾರೆ. ತಿಂಗಳು ಪೂರ್ತಿ ಕುರಾನ್ ಪಠಿಸುತ್ತಾರೆ. ಎಲ್ಲರ ಸುಖ-ಸಂತೋಷ- ನೆಮ್ಮದಿಗಾಗಿ ಅಲ್ಲಾಹುವಿನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾರೆ. ದಾನ ಮಾಡುತ್ತಾರೆ. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತಿ ಬೇಧವಿಲ್ಲದೆ ಬಡವರಿಗೆ ದಾನ ನೀಡಿದರು.

ಜಮಾ ಮಸೀದಿಯ ಧರ್ಮಗುರುಗಳು ರಂಜಾನ್ ಹಬ್ಬದ ಮಹತ್ವದ ಕುರಿತು ಉಪದೇಶ ನೀಡಿ, ‘ಇಸ್ಲಾಂ ಧರ್ಮವು ಶಾಂತಿ ಸಂದೇಶವನ್ನು ಸಾರುತ್ತದೆ. ಮುಸ್ಲಿಮರು ಸಹ ಜಾತಿ ಧರ್ಮ ಮರೆತು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಆದರ್ಶಗಳನ್ನು ಜೀವನದಲ್ಲಿ ನಡೆಸಿಕೊಂಡು ಕಷ್ಟ ಸುಖಗಳಲ್ಲಿ ಸ್ಪಂದಿಸಿ ಕಾರ್ಯನಿರ್ವಹಿಸುವ ಮೂಲಕ ಸೌಹಾರ್ದತೆಯ ವಾತಾವರಣವನ್ನು ಮುಂದುವರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.