ADVERTISEMENT

ಚಿಂತಾಮಣಿಯಲ್ಲಿ ಶ್ರದ್ಧಾ ಭಕ್ತಿಯ ರಂಜಾನ್ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2023, 14:21 IST
Last Updated 22 ಏಪ್ರಿಲ್ 2023, 14:21 IST
ಚಿಂತಾಮಣಿಯಲ್ಲಿ ಶನಿವಾರ ಈದು ಉಲ್ ಫಿತ್ರ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ತೆರಳುತ್ತಿರುವ ಮೆರವಣಿಗೆ
ಚಿಂತಾಮಣಿಯಲ್ಲಿ ಶನಿವಾರ ಈದು ಉಲ್ ಫಿತ್ರ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ತೆರಳುತ್ತಿರುವ ಮೆರವಣಿಗೆ   

ಚಿಂತಾಮಣಿ: ಇಲ್ಲಿನ ನಗರ ಹಾಗೂ ತಾಲ್ಲೂಕಿನಾದ್ಯಂತ ಮುಸ್ಲಿಮರು ಶನಿವಾರದಂದು ಈದು ಉಲ್ ಫಿತ್ರ್‌ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕಳೆದ 30 ದಿನಗಳಿಂದ ನಡೆಸುತ್ತಿದ್ದ ಉಪವಾಸವನ್ನು ಕೊನೆಗೊಳಿಸಿದರು.

ಬೆಳಿಗ್ಗೆ 9.30ಕ್ಕೆ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡರು. ಅಲ್ಲಿಂದ ಮೆರವಣಿಗೆ ಮೂಲಕ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಬಾಗೇಪಲ್ಲಿ ರಸ್ತೆಯ ಈದ್ಗಾ ಮೈದಾನದಲ್ಲಿ ಹಾಗೂ ಕೋಲಾರ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ (ಪ್ರಾರ್ಥನೆ) ಸಲ್ಲಿಸಿದರು.

ಬಡವರು, ಶ್ರೀಮಂತರು ಎನ್ನದೆ ಪ್ರತಿಯೊಬ್ಬರೂ ಹೊಸ ಹೊಸ ಉಡುಗೆಗಳನ್ನು ತೊಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಹಜರತ್ ಮೌಲಾನಾ ಮಹ್ಮದ್ ರಫೀಕ್ ರಜಾ ಉಪನ್ಯಾಸ ನೀಡಿ ಈದ್ ಸಂದೇಶ ಮತ್ತು ಪ್ರವಚನ ನೀಡಿದರು. ‘ಇಸ್ಲಾಂನಲ್ಲಿ ಅಶಾಂತಿ, ಹಿಂಸೆಗೆ ಜಾಗವಿಲ್ಲ. ಸಮಾಜದ ಪ್ರತಿಯೊಂದು ಧರ್ಮದ ಜನರು ಸಹೋದರರಂತೆ ಬಾಳಬೇಕು’ ಎಂದರು.

ADVERTISEMENT

‘ರಂಜಾನ್ ಹಬ್ಬವು ಕುಟುಂಬ, ಸಮಾಜ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯ-ಮನುಷ್ಯರ ನಡುವಣ ಸಂಬಂಧ ವೃದ್ಧಿಗೆ ಪ್ರೇರಣೆ ನೀಡಲಿ, ಹಳಸಿದ ಸಂಬಂಧಗಳು ಮರು ಜೋಡಣೆಯಾಗಲಿ. ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಎಂಬುದು ಕುರಾನ್ ಸಂದೇಶವಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ವಿಶ್ವವನ್ನು ಗೆದ್ದಿರುವ ಪ್ರವಾದಿ ಬೋಧನೆ ಎಲ್ಲರಿಗೂ ಮಾರ್ಗದರ್ಶಿಯಾಗಲಿ’ ಎಂದರು.

‘ರಂಜಾನ್ ಶಾಂತಿ, ಸಹೋದರತೆ, ಏಕತೆ, ಪರಸ್ಪರ ಸಹಕಾರ ಹಾಗೂ ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೌಲ್ಯಾಧಾರಿತ ಸಂದೇಶ ಸಾರುವ ಹಬ್ಬವಾಗಿದೆ. ಇದನ್ನು ಪ್ರತಿಯೊಬ್ಬರು ಅರಿತುಕೊಂಡು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈದು ಉಲ್ ಫಿತ್ರ್‌ ಹಬ್ಬದಂದು ಇಸ್ಲಾಮ್ ಜಾರಿಗೊಳಿಸಿದ ‘ಫಿತ್ರ ಝಕಾತ್’ ನಿರ್ಭಂಧ ದಾನವು, ಬಡವರು ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡಬೇಕು ಎಂಬ ಸದುದ್ದೇಶದಿಂದ ಕೂಡಿದೆ. ಹಬ್ಬವನ್ನು ಆಚರಿಸಲು ಆರ್ಥಿಕ ಸಾಮರ್ಥ್ಯವಿಲ್ಲದವರು, ಅನಾಥರು, ಅಂಗವಿಕಲರು, ವಿಧವೆಯರು, ಬಡತನ ರೇಖೆಯ ಕೆಳಗಿರುವ ನಿಕಟ ಸಂಬಂಧಿಗಳಿಗೂ ದಾನವನ್ನು ನೀಡಬಹುದು’ ಎಂದು ಹೇಳಿದರು.

ಸೇರಿದ್ದ ಸಾವಿರಾರು ಮಂದಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳಿಂದ ಹಿರಿಯರವರೆಗೂ ಭಾಗವಹಿಸಿದ್ದರು. ಶುಭಾಶಯಗಳ ವಿನಿಮಯದ ನಂತರ ಮನೆಗಳಿಗೆ ತೆರಳಿ ವಿವಿಧ ಬಗೆಯ ಆಹಾರಗಳನ್ನು ಸವಿದರು. ಸ್ನೇಹಿತರು ಸಂಬಂಧಿಕರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

ಈದ್ಗಾ ಮೈದಾನದಲ್ಲಿ ಜಾಮಿಯಾ ಮಸೀದಿ ರಂಜಾನ್ ನಿರ್ವಹಣಾ ಸಮಿತಿಯು ಸಾಮೂಹಿಕ ನಮಾಜ್‌ಗೆ ವ್ಯವಸ್ಥೆ ಮಾಡಿತ್ತು. ವಿವಿಧೆಡೆ ಮುಸ್ಲಿಮರು ಸಿಹಿ ಹಂಚಿ ಸಂಭ್ರಮಿಸಿದರು. ರಂಜಾನ್ ನಿರ್ವಹಣಾ ಸಮಿತಿಯ ಸದಸ್ಯರು, ಮಾಜಿ ಸದಸ್ಯರು ಹಾಗೂ ಮುಖಂಡರು ಸೇರಿದಂತೆ ಎಲ್ಲ ಮುಸ್ಲಿಮರು ಭಾಗವಹಿಸಿದ್ದರು.

ತಾಲ್ಲೂಕಿನ ಚಿನ್ನಸಂದ್ರ, ಕೈವಾರ, ಮುರುಗಮಲ್ಲ, ಕಾಚಹಳ್ಳಿ, ಸಿದ್ದಿಮಠ, ಬುರುಡಗುಂಟೆ, ಉಪ್ಪರಪೇಟೆ ಮತ್ತಿತರ ಕಡೆಗಳಲ್ಲೂ ನೂರಾರು ಜನ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಈದು ಉಲ್ ಫಿತ್ರ್‌ ಆಚರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.