ADVERTISEMENT

ಚಿಕ್ಕಬಳ್ಳಾಪುರ: ಬದುಕಿಗೆ ಬಲ ತುಂಬಿದ ರೆಡ್‌ಗ್ಲೋಬ್‌

ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತ ಕೆ.ಆರ್.ರೆಡ್ಡಿ ಅವರ ಕೃಷಿ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 6:18 IST
Last Updated 19 ಜುಲೈ 2024, 6:18 IST
<div class="paragraphs"><p>ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಕೆ.ಆರ್.ರೆಡ್ಡಿ ಅವರ ತೋಟದಲ್ಲಿ ಬೆಳೆದಿರುವ ರೆಡ್‌ಗ್ಲೋಬ್ ದ್ರಾಕ್ಷಿ</p></div>

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಕೆ.ಆರ್.ರೆಡ್ಡಿ ಅವರ ತೋಟದಲ್ಲಿ ಬೆಳೆದಿರುವ ರೆಡ್‌ಗ್ಲೋಬ್ ದ್ರಾಕ್ಷಿ

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕು ದ್ರಾಕ್ಷಿ ಬೆಳೆಗೆ ಪ್ರಸಿದ್ಧಿ. ರಾಜ್ಯದಲ್ಲಿಯೇ ದ್ರಾಕ್ಷಿ ಬೆಳೆಯುವ ಪ್ರಮುಖ ತಾಲ್ಲೂಕುಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ದಿಲ್ ಖುಷ್, ರೆಡ್ ಗ್ಲೋಬ್, ಶರ್ತ್, ಕೃಷ್ಣಾ ಹೀಗೆ ನಾನಾ ತಳಿಯ ದ್ರಾಕ್ಷಿಗಳನ್ನು ರೈತರು ಬೆಳೆಯುವರು. 

ತಾಲ್ಲೂಕಿನ ಅಜ್ಜವಾರ ಗ್ರಾಮದ ಕೆ.ಆರ್.ರೆಡ್ಡಿ ಅವರು ಅಮೆರಿಕನ್ ರೆಡ್‌ಗ್ಲೋಬ್ ದ್ರಾಕ್ಷಿ ಬೆಳೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿಕ್ಕಬಳ್ಳಾಪುರವಷ್ಟೇ ಅಲ್ಲ ಹೊರ ತಾಲ್ಲೂಕು, ಜಿಲ್ಲೆಗಳ ರೈತರು ಸಹ ಇವರು ಬೆಳೆದಿರುವ ರೆಡ್‌ಗ್ಲೋಬ್ ತಳಿಯ ದ್ರಾಕ್ಷಿ ನೋಡಲು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. 

ADVERTISEMENT

ಜಿಲ್ಲೆಯಲ್ಲಿ ರೆಡ್‌ಗ್ಲೋಬ್ ದ್ರಾಕ್ಷಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಪ್ರಮುಖ ರೈತ ಎನಿಸಿದ್ದಾರೆ. ರೆಡ್‌ಗ್ಲೋಬ್ ಅವರ ಆರ್ಥಿಕ ಬದುಕಿಗೂ ಸಮೃದ್ಧವಾಗಿ ರಂಗು ತುಂಬಿದೆ.

1983ರಲ್ಲಿ ಒಂದು ಎಕರೆಯಿಂದ ಕೆ.ಆರ್.ರೆಡ್ಡಿ ಅವರು ದ್ರಾಕ್ಷಿ ಕೃಷಿ ಆರಂಭಿಸಿದರು. ಹಂತ ಹಂತವಾಗಿ ವಿಸ್ತರಣೆಯಾಗಿ ಈಗ 10 ಎಕರೆಯಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ.  ಈಗ ಸುಮಾರು 8 ಎಕರೆಯಲ್ಲಿ ರೆಡ್‌ಗ್ಲೋಬ್ ದ್ರಾಕ್ಷಿ ಇದ್ದರೆ ಎರಡು ಎಕರೆಯಲ್ಲಿ ದಿಲ್‌ಖುಷ್ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಟನ್‌ಗಟ್ಟಲೆ ರೆಡ್‌ಗ್ಲೋಬ್ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. 

ಕೂಡು ಕುಟುಂಬದ ಅವರ ಕೃಷಿ ಚಟುವಟಿಕೆಗೆ ಸಹೋದರರು ಬೆನ್ನೆಲುಬಾಗಿದ್ದಾರೆ. ದ್ರಾಕ್ಷಿ ಅವರ ಕೈ ಹಿಡಿದಂತೆ ಕೃಷಿ ಚಟುವಟಿಕೆಗಳು ಸಹ ವಿಸ್ತಾರವಾದವು. 

ಮೊದಲಿಗೆ ದಿಲ್‌ಖುಷ್ ತಳಿ ದ್ರಾಕ್ಷಿ ಬೆಳೆಯುತ್ತಿದ್ದ ಅವರು 2016ರಿಂದ ರೆಡ್‌ಗ್ಲೋಬ್ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇಲ್ಲಿಂದ ಅವರ ಕೃಷಿ ಮತ್ತು ಆರ್ಥಿಕ ಬದುಕು ಮತ್ತಷ್ಟು ವಿಸ್ತಾರವಾಯಿತು. ರೆಡ್‌ಗ್ಲೋಬ್ ಉತ್ತಮ ಲಾಭ ತಂದುಕೊಡುತ್ತಿದೆ. 

ದೇವೇಗೌಡರು, ಕುಮಾರಸ್ವಾಮಿ, ಚಿಕ್ಕಬಳ್ಳಾಪುರಕ್ಕೆ ಬಂದ ಐಎಎಸ್‌, ಐಪಿಎಸ್ ಅಧಿಕಾರಿಗಳು ಹೀಗೆ ಬಹಳಷ್ಟು ಮಂದಿ ಕೆ.ಆರ್.ರೆಡ್ಡಿ ಅವರ ಜಮೀನಿನಲ್ಲಿ ಬೆಳೆದಿರುವ ರೆಡ್‌ಗ್ಲೋಬ್ ದ್ರಾಕ್ಷಿ ಸವಿದಿದ್ದಾರೆ. ಮಾರಾಟದ ಜೊತೆಗೆ ಪ್ರತಿ ವರ್ಷವೂ ತಮ್ಮ ಜಮೀನಿನಲ್ಲಿ ಬೆಳೆಯುವ ದ್ರಾಕ್ಷಿಯನ್ನು ಸ್ನೇಹಿತರು, ರಾಜಕೀಯ ನಾಯಕರು, ಕೃಷಿ ಸಾಧಕರು, ಕೃಷಿ ವಿಜ್ಞಾನಿಗಳಿಗೂ ತಲುಪಿಸುತ್ತಿದ್ದಾರೆ ಕೆ.ಆರ್.ರೆಡ್ಡಿ.

 ಗ್ರೀನ್‌ಹೌಸ್ ಮಾಡಬೇಕು ಎಂದು ಹೊರಟೆವು. ಆದರೆ ಗ್ರೀನ್‌ಹೌಸ್‌ನಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಕೆಲಸ ಮಾಡಲು ಕಾರ್ಮಿಕರು ದೊರೆಯುವುದಿಲ್ಲ ಎಂದು ನನ್ನ ಸಹೋದರ ಹೇಳಿದ. ಆಗ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಪ್ರಕಾಶ್ ಅವರ ಸಲಹೆಯ ಪ್ರಕಾರ ರೆಡ್‌ಗ್ಲೋಬ್ ದ್ರಾಕ್ಷಿಯನ್ನು ಬೆಳೆಯಲು ಆರಂಭಿಸಿದೆವು ಎಂದು ಕೆ.ಆರ್.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಾ.ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ನಾನು ರೆಡ್‌ಗ್ಲೋಬ್ ತಳಿ ಬೆಳೆಯಲು ಆರಂಭಿಸಿದೆ. ನಮ್ಮ ಆರ್ಥಿಕ ಬದುಕನ್ನು ಸಹ ಈ ದ್ರಾಕ್ಷಿ ಅತ್ಯುತ್ತಮಗೊಳಿಸಿತು. ಶ್ರದ್ಧೆಯಿಂದ ಕೃಷಿ ಕೆಲಸ ಮಾಡಿದರೆ ನಷ್ಟವಿಲ್ಲ ಎಂದು ತಮ್ಮ ಅನುಭವದ ಮಾತು ಹೇಳುವರು.

ಜಿಲ್ಲೆ, ಹೊರ ಜಿಲ್ಲೆಗಳ ರೈತರು ರೆಡ್‌ಗ್ಲೋಬ್ ದ್ರಾಕ್ಷಿ ನೋಡಲು ಬರುತ್ತಾರೆ. ನಮಗೆ ಈ ದ್ರಾಕ್ಷಿ ಬೆಳೆ ಆದಾಯವನ್ನಷ್ಟೇ ತಂದುಕೊಟ್ಟಿಲ್ಲ ಜನರ ಜೊತೆ ಬಾಂಧವ್ಯವನ್ನೂ ವೃದ್ಧಿಗೊಳಿಸುತ್ತಿದೆ ಎಂದು ಹೇಳಿದರು.

ಶೀತಲಿಕರಣ ಘಟಕ ಅಗತ್ಯ

ನಮ್ಮ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿದ್ದಾರೆ. ಆದ್ದರಿಂದ ದ್ರಾಕ್ಷಿ ಬೆಳೆಯನ್ನು ಕಾಪಾಡಿಕೊಳ್ಳಲು ರೈತರಿಗೆ ಶೀತಲಿಕರಣ ಘಟಕಗಳು ಅಗತ್ಯ. ಸರ್ಕಾರ ಈ ದಿಕ್ಕಿನಲ್ಲಿ ಕ್ರಮವಹಿಸಬೇಕು ಎಂದು ಕೆ.ಆರ್.ರೆಡ್ಡಿ ತಿಳಿಸಿದರು.  ಮಹಾರಾಷ್ಟ್ರದಲ್ಲಿ ರೈತರು ತಮ್ಮ ಹೊಲಗಳ ಬಳಿಯೇ ಶೀತಲಿಕರಣ ಘಟಕಗಳನ್ನು ಹೊಂದಿರುತ್ತಾರೆ. ಅಲ್ಲಿನ ದ್ರಾಕ್ಷಿ ಬೆಳೆಗಾರರು ಶೀತಲಿಕರಣ ಘಟಕಕ್ಕೆ ಶೇ 90ರಷ್ಟು ಸಹಾಯಧನ ನೀಡುತ್ತದೆ. ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೂ ಶೀತಲಿಕರಣ ಘಟಕಕ್ಕೆ ಸರ್ಕಾರ ಸಹಾಯಧನ ನೀಡಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.