ಚಿಕ್ಕಬಳ್ಳಾಪುರ: ನಗರದಲ್ಲಿರುವ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ವರ್ಷದಿಂದ ವರ್ಷಕ್ಕೆ ರೇಷ್ಮೆಗೂಡಿನ ಆವಕ ಕುಸಿತವಾಗುತ್ತಿರುವ ಪರಿಣಾಮ, ನಗರದ ರೀಲರ್‌ಗಳ ಜೀವನ ಗೂಡಿನ ಒಳಗೆ ಸಿಲುಕಿದ ಹುಳುವಿನಂತಾಗುತ್ತಿದೆ. ಇದರಿಂದಾಗಿ ನೂಲು ಬಿಚ್ಚಾಣಿಕೆದಾರರು ಕಸಬು ತ್ಯಜಿಸಿ ಅನ್ಯ ಕೆಲಸಗಳತ್ತ ಮುಖ ಮಾಡುತ್ತಿದ್ದು, ನಗರದಲ್ಲಿ ರೀಲರ್‌ಗಳ ಪ್ರಮಾಣ ಇಳಿಮುಖವಾಗಿದೆ.
ರೇಷ್ಮೆಗೂಡು ಉತ್ಪಾದನೆಗೆ ಏರಿಕೆಯಾಗುತ್ತಿರುವ ಬಿಸಿಲು ಒಂದೆಡೆ ಬಾಧಿಸುತ್ತಿದ್ದರೆ, ಇನ್ನೊಂದೆಡೆ ಹವಾಮಾನ ವೈಪರಿತ್ಯ, ಅಂರ್ತಜಲ ಕುಸಿತ, ಕಾರ್ಮಿಕರ ಕೊರತೆ, ಬೆಳೆ ಬದಲಾವಣೆ, ತೀವ್ರಗತಿಯಲ್ಲಿ ವ್ಯಾಪಿಸಿಕೊಳ್ಳುತ್ತಿರುವ ನಗರೀಕರಣ ದಿನೇ ದಿನೇ ಕಂಟಕವಾಗುತ್ತಿವೆ ಎನ್ನುತ್ತಾರೆ ರೇಷ್ಮೆ ಕ್ಷೇತ್ರದ ಪರಿಣಿತರು.
ಹಿಪ್ಪುನೆರಳು ಸೊಪ್ಪಿನ ಜಮೀನ ಪಕ್ಕದಲ್ಲಿಯೇ ತಲೆ ಎತ್ತುತ್ತಿರುವ ದ್ರಾಕ್ಷಿಯ ತೋಟಗಳು, ಹೂವು, ತರಕಾರಿ ಬೆಳೆಗಳು ರೇಷ್ಮೆ ಬೆಳೆಗಾರರಿಗೆ ಮಗ್ಗಲು ಮುಳ್ಳಾಗುತ್ತಿವೆ. ಈ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕಗಳು ಗಾಳಿಯಲ್ಲಿ ಸೊಪ್ಪಿಗೆ ತಗುಲಿ ಹುಳುಗಳ ಸಾವಿಗೆ ಕಾರಣವಾಗುತ್ತಿವೆ. ಜತೆಗೆ ರೇಷ್ಮೆ ಬೆಳೆಗಾರರು ಇತರ ಬೆಳೆಗಳತ್ತ ವಾಲುತ್ತಿರುವುದು ಸಹ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಕುಂಠಿತವಾಗಲು ಕಾರಣವಾಗುತ್ತಿದೆ.
ಎರಡು ದಶಕದ ಇತಿಹಾಸ ಹೊಂದಿರುವ ಚಿಕ್ಕಬಳ್ಳಾಪುರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ 2006ರಲ್ಲಿ ವರ್ಷದಲ್ಲಿ 1,310 ಟನ್ ಗೂಡು ಆವಕವಾಗಿತ್ತು. ಕಳೆದ 13 ವರ್ಷಗಳಲ್ಲಿ ಅದರ ಪ್ರಮಾಣ ಇದೀಗ ಬೆರಳೆಣಿಕೆ ಟನ್‌ಗೆ ತಲುಪಿದೆ. ಇದರಿಂದಾಗಿ ಬಿಸಿ ನೀರಿನಲ್ಲಿ ಬೆಂದ ಹುಳದಂತೆ ರೀಲರ್‌ಗಳು ಚಡಪಡಿಸುವಂತಾಗಿದೆ. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಆವಕ ದಿನೇ ದಿನೆ ಕಡಿಮೆಯಾಗುತ್ತಿರುವ ನಡುವೆಯೇ ನಗರದಲ್ಲಿ ಕೆಲ ವರ್ಷಗಳ ಹಿಂದೆ ಇದ್ದ 250 ರೀಲರ್ ಸಂಖ್ಯೆ ಇದೀಗ 35ಕ್ಕೆ ಕುಸಿದಿದೆ.
ನಗರದ ರೇಷ್ಮೆ ಮಾರುಕಟ್ಟೆಗೆ ಸದ್ಯ ದಿನಕ್ಕೆ 15 ರಿಂದ 20 ಲಾಟು ಗೂಡು ಬರುತ್ತಿದೆ. ಬಹುತೇಕ ರೀಲರ್‌ಗಳಲ್ಲಿ ಅದು ಕೆಲವೇ ಮಂದಿಗೆ ಸಿಗುತ್ತಿದೆ. ಉಳಿದವರು ರಾಮನಗರ, ತುಮಕೂರು, ಶಿಡ್ಲಘಟ್ಟ, ಬೆಂಗಳೂರು ಗ್ರಾಮಾಂತರ ಭಾಗದ ವಿಜಯಪುರಕ್ಕೆ ಸೇರಿದಂತೆ ಅನೇಕ ಕಡೆಗಳಿಗೆ ಗೂಡು ಖರೀದಿಸಲು ಅಲೆದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ಬೇರೆಡೆ ಸ್ಥಳೀಯ ರೀಲರ್‌ಗಳು ಹೊರಗಿನವರಿಗೆ ಗೂಡು ಕೊಡುವುದಕ್ಕೆ ವಿರೋಧಿಸುತ್ತಿದ್ದು, ಜತೆಗೆ ಗೂಡು ಸಾಗಾಣಿಕೆ ಖರ್ಚು ರೀಲರ್‌ಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಚಳಿಗಾಲದಂತೂ ರೇಷ್ಮೆ ಹುಳುಗಳಿಗೆ ಸುಣ್ಣ ಕಟ್ಟು ರೋಗ ಕಾಡುವ ಪರಿಣಾಮ ಗೂಡಿನ ಆವಕ ಗಣನೀಯವಾಗಿ ಕುಸಿತವಾಗುತ್ತದೆ. ಇದರಿಂದಾಗಿ ನೂಲು ಬಿಚ್ಚಾಣಿಕೆದಾರರು, ಅವರನ್ನೇ ನಂಬಿ ಬದುಕುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ.
‘ನಗರದ ಮಾರುಕಟ್ಟೆಯಲ್ಲಿ ಗೂಡು ಕೊಳ್ಳಲು ನಾಮುಂದು, ತಾಮುಂದು ಎಂದು ಪೈಪೋಟಿ ನಡೆಯುತ್ತದೆ. ಇದರಿಂದ ಬೆಲೆ ಕೂಡ ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಗೂಡು ಸಿಗುತ್ತಿಲ್ಲ. ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ಇದೀಗ ಅವರಿಗೆ ಕೆಲಸ ಇಲ್ಲದಂತಾಗಿದೆ. ಒಂದೊಮ್ಮೆ ಗೂಡಿನ ಕೊರತೆಯಿಂದ ಘಟಕ ಬಂದ್ ಆದರೆ ಅವರಿಗೂ ಕಷ್ಟ’ ಎನ್ನುತ್ತಾರೆ ರೀಲರ್ ಶ್ರೀನಿವಾಸ್.
‘ಸುಮಾರು 40 ವರ್ಷಗಳಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ರೈತರು ಗೂಡು ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ ಅಷ್ಟೇ ಕಷ್ಟ ನಾವು ಅನುಭವಿಸುತ್ತಿದ್ದೇವೆ. ದಿನಕ್ಕೆ ರೇಷ್ಮೆ ನೂಲು ಬಿಚ್ಚಲು ಒಬ್ಬರಿಗೆ ₹ 400 ಸಂಬಳ ಕೊಡುತ್ತಿದ್ದೇನೆ. ಇನ್ನು ಗೂಡು ಖರೀದಿ ಮಾಡಲು ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಗೂಡು ಖರೀದಿಸಬೇಕಾಗಿದೆ’ ಎಂದು ಕೌಸರ್ ನಗರದ ನಿವಾಸಿ ಎಸ್.ಚಾಂದ್ ಪಾಷಾ ಹೇಳಿದರು.
‘ನಗರದ ಮಾರುಕಟ್ಟೆಯಲ್ಲಿ ಗೂಡಿನ ಅಭಾವ ಇದ್ದಾಗ ಸ್ಥಳೀಯ ವಿಜಯಪುರ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ರೇಷ್ಮೆ ನೂಲು ಬಿಚ್ಚುವ ಕೆಲಸ ಮಾಡಿಸುತ್ತಿದ್ದೇನೆ. ಅಲ್ಲಿಯೂ ಗೂಡು ಸಿಗದಿದ್ದರೆ ಮಕ್ಕಳಿಗೆ ಹಾಕಿ ಕೊಟ್ಟಿರುವ ಸ್ಟೀಲ್ ಅಂಗಡಿಯ ವ್ಯಾಪಾರ ನೋಡಿಕೊಳ್ಳುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.