ಶಿಡ್ಲಘಟ್ಟ: ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸತ್ಯಾಗ್ರಹ, ಉಪವಾಸ, ಕಾಲ್ನಡಿಗೆಯ ಕಾರಣದಿಂದ ಬಳಲಿದ್ದ ಮಹಾತ್ಮ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಾಗಿ ಆರೋಗ್ಯ ಕೆಟ್ಟಿತ್ತು. ವೈದ್ಯರ ಸಲಹೆ ಪ್ರಕಾರ ವಿಶ್ರಾಂತಿಗಾಗಿ 1927ರ ಏ.19 ರಂದು ಪ್ರಥಮವಾಗಿ ನಂದಿಬೆಟ್ಟಕ್ಕೆ ಬಂದರು.
ಗಾಂಧೀಜಿ ಅವರು ನಂದಿಬೆಟ್ಟದಲ್ಲಿ 45 ದಿನಗಳ ಕಾಲ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್‌ಹ್ಯಾಂ ನಿರ್ಮಿಸಿದ್ದ ‘ಓಕ್‌ಲ್ಯಾಂಡ್ಸ್’ ಭವನದಲ್ಲಿ 1927ರ ಜೂನ್ 5 ರವರೆಗೆ ತಂಗಿದ್ದರು. ಮತ್ತೊಮ್ಮೆ ನಂದಿಬೆಟ್ಟಕ್ಕೆ 1936, ಮೇ 10ಕ್ಕೆ ಬಂದವರು, 20 ದಿನಗಳ ಕಾಲ ಇದ್ದರು.
ಗಾಂಧೀಜಿ ಅವರು ನಂದಿಗಿರಿಧಾಮದಲ್ಲಿ ಇದ್ದ ಅವಧಿಯಲ್ಲಿ ನಿತ್ಯವೂ ಅವರಿಗೆ ದೇಶ, ವಿದೇಶಗಳಿಂದ ಪತ್ರಗಳು ಬರುತ್ತಿದ್ದವು. ಅವರೂ ಸಹ ದೇಶ, ವಿದೇಶಗಳಿಗೆ ಪತ್ರ ಬರೆಯುತ್ತಿದ್ದರು. ಮಹಾತ್ಮರು ಬರೆದ ಪತ್ರಗಳಲ್ಲಿ ‘ನಂದಿಬೆಟ್ಟ’ ಎನ್ನುವ ಒಕ್ಕಣೆಯೂ ಇದೆ. ಹೀಗೆ ಮಹಾತ್ಮ ಗಾಂಧೀಜಿ ಅವರು ಚಿಕ್ಕಬಳ್ಳಾಪುರದ ನಂದಿಬೆಟ್ಟದಿಂದ ನಡೆದ ಪತ್ರ ವ್ಯವಹಾರಗಳ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿವೆ.
ವಿಳಾಸ ಬರೆಯುವ ಜಾಗದಲ್ಲಿ ಕೆಲವರು ಮಹಾತ್ಮ ಗಾಂಧೀಜಿ ಎಂದಷ್ಟೇ ಬರೆದಿದ್ದಾರೆ. ಇನ್ನು ಕೆಲವರು ವಿಳಾಸ ಬರೆಯುವುದರ ಬದಲು ಮಹಾತ್ಮರ ಚಿತ್ರವನ್ನು ರಚಿಸಿದ್ದಾರೆ. ಗಾಂಧೀಜಿ, ನ್ಯೂ ಡೆಲ್ಲಿ ಎಂದೂ ಕೆಲವರು ಪತ್ರದಲ್ಲಿ ಬರೆದಿದ್ದಾರೆ. ಅಂಚೆ ಇಲಾಖೆಯವರು ಮಾತ್ರ ಗಾಂಧೀಜಿ ದೇಶದ ಯಾವುದೇ ಭಾಗದಲ್ಲಿದ್ದರೂ ಪತ್ತೆ ಹಚ್ಚಿ, ಅವರಿಗೆ ಬಂದಿರುವ ಪತ್ರಗಳನ್ನು ತಲುಪಿಸುತ್ತಿದ್ದರು.
ಬ್ರಿಟಿಷ್ ಸೇನಾಧಿಕಾರಿ ಮಗಳು ಮೆಡಲಿನ್ ಸ್ಲೇಡ್, ಗಾಂಧಿ ಅವರ ವ್ಯಕ್ತಿತ್ವಕ್ಕೆ ಮಾರುಹೋದರು. ಅವರ ಆಶ್ರಮ ಸೇರಿ ಮೀರಾಬೆಹೆನ್ ಆದರು. ಆಕೆ ಗಾಂಧೀಜಿ ಅವರ ಮಾನಸಪುತ್ರಿ. ಅವರಿಗೆ ಗಾಂಧೀಜಿ ಅಂಬೋಲಿಯಿಂದ(1927ರ ಏಪ್ರಿಲ್ 18 ) ಬರೆದ ಪತ್ರದಲ್ಲಿ ಮುಂದಿನ ಎರಡು ತಿಂಗಳು ಆರೋಗ್ಯ ಸುಧಾರಣೆಗಾಗಿ ನಂದಿಬೆಟ್ಟದಲ್ಲಿ ತಂಗಲಿದ್ದು, ತಮ್ಮ ವಿಳಾಸ, ‘ನಂದಿ ಬೆಟ್ಟ, ಮೈಸೂರು’ ಎಂದು ಗಾಂಧೀಜಿ ಬರೆದಿದ್ದಾರೆ.
‘ದಿ ಎಸೆನ್ಷಿಯಲ್ ರೈಟಿಂಗ್ಸ್ ಆಫ್ ಮಹಾತ್ಮ ಗಾಂಧಿ’ ಎಂಬ ಗ್ರಂಥ ಸಂಪಾದಿಸಿರುವ ರಾಘವನ್ ಅಯ್ಯರ್ ಅವರ ಪ್ರಕಾರ, ಗಾಂಧೀಜಿ ನಾಲ್ಕು ದಶಕಗಳ ಕಾಲ ದಿನವೊಂದಕ್ಕೆ ಕನಿಷ್ಠ ಪಕ್ಷ ಎಪ್ಪತ್ತು ಪತ್ರಗಳನ್ನಾದರೂ ಬರೆದ್ದಾರೆ.
ಗಾಂಧೀಜಿ ಸತತ ನಾಲ್ಕು ತಾಸು ಪತ್ರ ಬರೆಯುತ್ತಿದ್ದರಂತೆ. ಬರೆದೂ ಬರೆದು ಬಲಗೈ ನೋವಾದರೆ ಎಡಗೈಯಲ್ಲಿ ಬರೆಯುತ್ತಿದ್ದರು. ಹಿಂದಿ, ಇಂಗ್ಲಿಷ್, ಗುಜರಾತಿ – ಮೂರೂ ಭಾಷೆಗಳಲ್ಲಿ ಅವರು ಬರೆಯುತ್ತಿದ್ದರು. ಪತ್ರದಲ್ಲಿ ಅವರು ಬರೆಯದ ವಿಷಯಗಳಿಲ್ಲ. ಸತ್ಯಾಗ್ರಹದ ಮಹತ್ವ, ಖಾದಿಯ ಸಿದ್ದಾಂತ, ರಾಜಕೀಯ ಹೋರಾಟ, ಧರ್ಮ, ಆರೋಗ್ಯ, ನೈರ್ಮಲ್ಯ, ನೈತಿಕತೆ, ಯೋಗ ಹೀಗೆ ಹಲವಾರು ವಿಷಯಗಳ ಬಗ್ಗೆ ಬರೆದಿದ್ದಾರೆ. ಯಾರೇ ಪತ್ರ ಬರೆಯಲಿ, ಅವರಿಗೆಲ್ಲಾ ಉತ್ತರಿಸುತ್ತಿದ್ದುದು ಅವರ ವಿಶೇಷ ಗುಣ.
ನಂದಿ ಬೆಟ್ಟದಲ್ಲಿದ್ದಾಗ ಗಾಂಧೀಜಿ ಬರೆದಿರುವ ಪತ್ರಗಳು 250 ಕ್ಕೂ ಹೆಚ್ಚು. ಅವರು ನಂದಿ ಬೆಟ್ಟದಲ್ಲಿದ್ದಾಗ ಬರೆದಿರುವ ಪತ್ರಗಳು ಹಾಗೂ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳು ಸುಮಾರು 320 ಕ್ಕೂ ಹೆಚ್ಚು ಪುಟಗಳಿವೆ.
ಪ್ರತಿದಿನವೂ ಭಾರತೀಯರು ಸೇರಿದಂತೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಇತರೆಡೆಗಳಿಂದ ಬರುತ್ತಿದ್ದ ಪತ್ರಗಳಿಗೆ ತಪ್ಪದೆ ಉತ್ತರಿಸುತ್ತಿದ್ದರು. ‘ದ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ’ ಎಂಬ ನೂರು ಪುಸ್ತಕಗಳ ಗ್ರಂಥ ಸಂಪುಟಗಳಲ್ಲಿ ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಬರೆದಿರುವ 31,000 ಕ್ಕೂ ಹೆಚ್ಚು ಪತ್ರಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ಪದಗಳಿವೆ. ಈ ಪುಸ್ತಕಗಳಲ್ಲಿ ನಂದಿಬೆಟ್ಟದಿಂದ ಗಾಂಧೀಜಿ ಅವರು ಬರೆದ ಪತ್ರಗಳು ಅಡಕವಾಗಿವೆ.
ಗಾಂಧೀಜಿಯ ಬರವಣಿಗೆ:
ಏಪ್ರಿಲ್ 19, 1927 ರಂದು ಕುವಲಯಾನಂದ್ ಅವರಿಗೆ ಬರೆದ ಪತ್ರದಲ್ಲಿ ಗಾಂಧೀಜಿ, ನಂದಿಬೆಟ್ಟಕ್ಕೆ ವೈದ್ಯರ ಸಲಹೆಯಂತೆ ಆರೋಗ್ಯ ಸುಧಾರಣೆ ಬಂದಿದ್ದು, ತಾವು ಪ್ರತಿ ದಿನ ಶೀರ್ಷಾಸನ ಮತ್ತು ಮೂಗಿನ ಹೊಳ್ಳೆಗಳನ್ನು ಶುದ್ಧೀಕರಿಸುವ ನೇತಿಯನ್ನು ಅಭ್ಯಾಸ ಮಾಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಗಾಂಧೀಜಿಯ ಬರವಣಿಗೆಯ ಗ್ರಂಥಸರಣಿಯನ್ನು ಸಂಪಾದಿಸಿರುವ ಕೃಷ್ಣಸ್ವಾಮಿ ಸ್ವಾಮಿನಾಥನ್ ಹೇಳುವಂತೆ, ‘ಗಾಂಧೀಜಿಯ ಉಡುಪಿನಂತೆ ಅವರ ಬರಹ ಕೂಡ ಸರಳ ಮತ್ತು ನಿರಾಡಂಬರ. ಅವರು ವಿಶೇಷಣಗಳನ್ನು ಬಳಸುತ್ತಿರಲಿಲ್ಲ. ವಿಷಯದಿಂದಲೇ ಗಮನ ಸೆಳೆಯಬೇಕೇ ಹೊರತು ಭಾಷೆಯ ಆಡಂಬರದಿಂದಲ್ಲ ಎಂಬುದು ಗಾಂಧೀಜಿ ಲೇಖನ, ಸಂಪಾದಕೀಯಗಳನ್ನು ಓದಿದರೆ ತಿಳಿಯುತ್ತದೆ’.
ಮಿತವ್ಯಯ ಎಂಬುದು ಅವರ ಬರವಣಿಗೆ ಮತ್ತು ಪದ ಜೋಡಣೆಗಳಲ್ಲೂ ಕಾಣಬಹುದಾಗಿತ್ತು. ಅವರು ಕಡಿಮೆ ಪದಗಳಲ್ಲಿ ಹೆಚ್ಚು ವಿಷಯವನ್ನು ಸರಳವಾಗಿ ಬರೆಯುತ್ತಿದ್ದರು.
ಮೀರಾ ಬೆಹೆನ್‌ಗೆ ಹೆಚ್ಚು; ಯಾರ‍್ಯಾರಿಗೆ ಪತ್ರ
ಗಾಂಧೀಜಿ ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದರೂ ಪತ್ರಗಳನ್ನು ಬರೆಯುತ್ತಿದ್ದರು. ತಮ್ಮ ಮಾನಸ ಪುತ್ರಿ ಮೀರಾಬೆಹೆನ್ ಗೆ 30ಕ್ಕೂ ಹೆಚ್ಚು ಪತ್ರಗಳನ್ನು ಗಾಂಧೀಜಿ ಬರೆದಿದ್ದಾರೆ. ಜಯಪ್ರಕಾಶ್ ನಾರಾಯಣ್ ಪತ್ನಿ ಪ್ರಭಾವತಿ ಸತೀಶ್ ಚಂದ್ರ ದಾಸ್ ಗುಪ್ತ ತಮ್ಮ ಸೋದರ ಅಳಿಯ ನಾರಾನ್ ದಾಸ್ ಗಾಂಧಿ ಸಬರಮತಿ ಆಶ್ರಮದ ಮಹಿಳೆಯರಿಗೆ ಇಂಡಿಯನ್ ಒಪಿನಿಯನ್ ಪತ್ರಿಕೆ (ಗುಜರಾತಿ) ಸಂಪಾದಕ ಛಾಗನ್ ಲಾಲ್ ಗಾಂಧಿ ಚರಕವನ್ನು ವಿನ್ಯಾಸಗೊಳಿಸಿದ ಗಾಂಧೀಜಿ ಅಳಿಯ ಮಗನ್ ಲಾಲ್ ಗಾಂಧಿ ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಅಮೆರಿಕನ್ ತತ್ವಜ್ಞಾನಿ ಆರ್.ಬಿ.ಗ್ರೆಗ್ ಶಂಕರನ್ ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿಯವರ ಸಹಚರರಾಗಿದ್ದ ಲಿಥುವೇನಿಯ ಮೂಲದ ಹರ್ಮನ್ ಕಾಲೆನ್ ಬಾಕ್ ಗುಲ್ಜಾರಿಲಾಲ್ ನಂದ ವಲ್ಲಭಭಾಯಿ ಪಟೇಲ್ ಮಗಳು ಮಣಿಬೆನ್ ತಮ್ಮ ಮೂರನೇ ಮಗ ರಾಮ್ ದಾಸ್ ನನ್ನು ಮದುವೆ ಆಗಲಿರುವ ನಿರ್ಮಲ ಲಾಲ ಲಜಪತ್ ರಾಯ್ ಪ್ರಭುದಾಸ್ ಗಾಂಧಿ ಮಹಿಳಾ ಕಾರ್ಮಿಕ ಚಳವಳಿ ಪ್ರಾರಂಭಿಸಿದ ಅನಸೂಯಾ ಬೆನ್ ಸಾರಾಬಾಯ್ ಎರಡನೇ ಮಗ ಮಣಿಲಾಲ್ ಮತ್ತು ಸುಶೀಲಾ ಗಾಂಧಿ ಜವಾಹರಲಾಲ್ ನೆಹರು ಅವರಿಗೆ ನಂದಿಬೆಟ್ಟದಿಂದ ಪತ್ರ ಬರೆದಿದ್ದಾರೆ. ವಿಯೆಟ್ನಾಂ ದೇಶದ ಸೈಗಾನ್ ನಲ್ಲಿ ಎಕ್ಸ್ ಟ್ರೀಮ್ ಏಸೀ ಎಂಬ ಫ್ರೆಂಚ್ ವಾರಪತ್ರಿಕೆಯ ಸಂಪಾದಕ ಜಾರ್ಜಸ್ ಮಿಗ್ನಾನ್ ಗೆ ಫ್ರೆಂಚ್ ಭಾಷೆಯಲ್ಲಿನ ತಮ್ಮ ಆತ್ಮಕಥೆಯನ್ನು ಧಾರವಾಹಿಯಾಗಿ ಪ್ರಕಟಿಸಲು ಅನುಮತಿ ನೀಡಿರುವ ಪತ್ರ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಂಗ್ ಇಂಡಿಯಾ ನವಜೀವನ್ (ಗುಜರಾತಿ) ಹರಿಜನ್ ಮುಂತಾದ ಪತ್ರಿಕೆಗಳಿಗೂ 35 ಕ್ಕೂ ಹೆಚ್ಚು ಲೇಖನಗಳನ್ನು ನಂದಿಬೆಟ್ಟದಲ್ಲಿದ್ದಾಗಲೇ ಬರೆದಿದ್ದಾರೆ. ಸರ್.ಸಿ.ವಿ.ರಾಮನ್ ಅವರೊಂದಿಗೆ ನಡೆಸಿರುವ ಸಂದರ್ಶನವೂ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.