ಚಿಂತಾಮಣಿ: ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರೊಬ್ಬರು ಜಮೀನಿಗಾಗಿ 20 ವರ್ಷದಿಂದ ಅಲೆಯುತ್ತಿದ್ದರೂ ಸರ್ಕಾರ ಈವರೆಗೂ ಭೂಮಿ ಮಂಜೂರು ಮಾಡಿಲ್ಲ.
ಚಿಂತಾಮಣಿ ತಾಲ್ಲೂಕಿನ ರಾಯಪ್ಪಲ್ಲಿ ಗ್ರಾಮದ ಶಿವಾನಂದರೆಡ್ಡಿ ಅವರು ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ರಕ್ಷಣಾ ಸಚಿವರಿಗೂ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ.
1987ರಲ್ಲಿ ಸೈನ್ಯ ಸೇರಿದ್ದ ಶಿವಾನಂದ ಅವರಿಗೆ 1999ರ ಕಾರ್ಗಿಲ್ ಯುದ್ಧದಲ್ಲಿ ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಕಾಲು ಮುರಿದಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರನ್ನು ಸ್ವಗ್ರಾಮಕ್ಕೆ ಕಳಿಸಿ, ಜಮೀನು ಮಂಜೂರು ಮಾಡುವಂತೆ ಅಂದಿನ ಕರ್ನಲ್ ಎಂ.ಬಿ. ರಾಣಾ ಸರ್ಕಾರಕ್ಕೆ ಶಿಫಾರಸು ಪತ್ರ ಬರೆದಿದ್ದರು. 2001ರಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿ 2ವರ್ಷ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
‘ನಿವೃತ್ತ ಸೈನಿಕರಿಗೆ ನ್ಯಾಯಬದ್ಧವಾಗಿ ದೊರೆಯುವ ಭೂಮಿಗಾಗಿ 20 ವರ್ಷದಿಂದ ಸರ್ಕಾರಿ ಕಚೇರಿ, ವಿಧಾನಸೌಧ ಅಲೆದಾಡಿ ಚಪ್ಪಲಿ ಸವೆದಿವೆಯೇ ಹೊರತು ಭೂಮಿ ಮಾತ್ರ ಮಂಜೂರಾಗಿಲ್ಲ’ ಎನ್ನುತ್ತಾರೆ ಶಿವಾನಂದ.
‘ನಿವೃತ್ತಿಯಾಗಿ ಬಂದಬಳಿಕ ಚಿಂತಾಮಣಿ ತಾಲ್ಲೂಕಿನಲ್ಲಿ ಭೂಮಿ ಇಲ್ಲ. ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯ ಸರ್ವೆ ನಂ. 17 ರಲ್ಲಿ ಜಮೀನಿದೆ ಎಂದು ಅರ್ಜಿಯನ್ನು ಶ್ರೀನಿವಾಸಪುರ ತಾಲ್ಲೂಕಿಗೆ ವರ್ಗಾಯಿಸಲಾಗಿತ್ತು. ಅಲ್ಲಿಯೂ ಜಮೀನು ಸಿಗಲಿಲ್ಲ.ಸ್ವಗ್ರಾಮದ ಸಮೀಪದ ಉಲ್ಲಪ್ಪನಹಳ್ಳಿಯ ಸರ್ವೆ ಸಂಖ್ಯೆ 81ರಲ್ಲಿ ಅನೇಕ ನಿವೃತ್ತ ಯೋಧರಿಗೆ ಜಮೀನು ಮಂಜೂರು ಮಾಡಲಾಗಿದೆ. ಈ ಬಗ್ಗೆ ಅಂದಿನ ತಹಶೀಲ್ದಾರ್‌ರನ್ನು ಪ್ರಶ್ನಿಸಿದೆ. ಭೂಮಿ ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ, ಭೂಮಿ ಮಂಜೂರು ಮಾಡಲಿಲ್ಲ‘ ಎಂದರು.
‘ಕಾಲ್ನಡಿಗೆ ಜಾಥಾ ತಡೆದರು’
‘ಕಳೆದ ವರ್ಷ ಮತ್ತು ಈ ಮಾರ್ಚ್‌ನಲ್ಲಿ ನ್ಯಾಯ ಕೋರಿ ಮುಖ್ಯಮಂತ್ರಿ ಗೃಹ ಕಚೇರಿಗೆ ಕಾಲ್ನಡಿಗೆ ಜಾಥಾ ಹೊರಟಿದ್ದೆ. ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಜಾಥಾ ವಾಪಸ್ ತೆಗೆದುಕೊಳ್ಳಿ. ಒಂದು ವಾರದಲ್ಲಿ ಜಮೀನು ಮಂಜೂರು ಮಾಡುತ್ತೇವೆ ಎಂದು ಮನವೊಲಿಸಿದ್ದರು. ಅದು ಭರವಸೆಯಾಗಿಯೇ ಉಳಿಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.