ADVERTISEMENT

ಅವೈಜ್ಞಾನಿಕ ರಸ್ತೆ ನಿರ್ಮಾಣ: ಕಲುಷಿತ ನೀರು ರಸ್ತೆಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:56 IST
Last Updated 19 ಆಗಸ್ಟ್ 2024, 13:56 IST
ಬಾಗೇಪಲ್ಲಿ ಕೊತ್ತಪಲ್ಲಿ ರಸ್ತೆಯ ಮದೀನಾ ಮಸೀದಿ ಮುಂದೆ ಕೆಸರಿನಿಂದ ಕೂಡಿದ ರಸ್ತೆ
ಬಾಗೇಪಲ್ಲಿ ಕೊತ್ತಪಲ್ಲಿ ರಸ್ತೆಯ ಮದೀನಾ ಮಸೀದಿ ಮುಂದೆ ಕೆಸರಿನಿಂದ ಕೂಡಿದ ರಸ್ತೆ   

ಬಾಗೇಪಲ್ಲಿ: ಪಟ್ಟಣದ ವಿವಿಧ ಬೀದಿಗಳಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯದ ಕಾರಣ ನೀರು ರಸ್ತೆಗೆ ನುಗ್ಗಿ ಜನರ ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ.

ಪಟ್ಟಣದ ಪುರಸಭಾ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಸಿಮೆಂಟ್ ರಸ್ತೆಗಳನ್ನು ಎಸ್‍ಟಿಪಿ, ಎಸ್‍ಎಸ್‍ಪಿ ಯೋಜನೆ ಅನುದಾನದಲ್ಲಿ ಮಾಡಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ಮಾಡಬೇಕು. ಎತ್ತರ ಪ್ರದೇಶದಿಂದ ಇಳಿಜಾರಿನ ಕಡೆಯಲ್ಲಿ ಚರಂಡಿ ಮಾಡಿ, ಕಲುಷಿತ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.  ಆದರೆ ವಿವಿಧ ಯೋಜನೆಗಳನ್ನು ನಿರ್ಮಿಸಿದ ರಸ್ತೆಗಳು ಅವೈಜ್ಞಾನಿಕವಾಗಿವೆ.

ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ಮದೀನಾ ಮಸೀದಿ ಮುಂದೆ ಚರಂಡಿಯ ಕಲುಷಿತ ನೀರು ಸಂಗ್ರಹವಾಗಿ, ರಸ್ತೆ ಕೆಸರುಗದ್ದೆಯಂತೆ ಆಗಿದೆ. ನ್ಯಾಷನಲ್ ಕಾಲೇಜಿನ 5ನೇ ವಾರ್ಡ್‍ನ ಬಹುತೇಕ ರಸ್ತೆಗಳು ಗುಂಡಿಮಯ ಆಗಿದೆ. ವಾಲ್ಮೀಕಿ ನಗರದ 1 ನೇ, 2, 3, 4, 5ನೇ ವಾರ್ಡ್‍ಗಳಲ್ಲಿ ಬಹುತೇಕ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆಗಳಲ್ಲಿ ಚರಂಡಿ ಹಾಗೂ ಮಳೆಯ ನೀರು ಸಂಗ್ರಹ ಆಗಿದೆ.

ADVERTISEMENT

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ವಾರ್ಡ್‍ಗಳಲ್ಲಿ ಸಿಮೆಂಟ್ ರಸ್ತೆಗಳಲ್ಲಿ ಗುಂಡಿಬಿದ್ದಿದೆ. ಪೊಲೀಸ್ ಹಾಗೂ ಆರೋಗ್ಯ ವಸತಿ ಗೃಹಗಳ ಹಿಂದೆ, ಶಿಕ್ಷಕರ ಬಡಾವಣೆ, ಕೊತ್ತಪಲ್ಲಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾಡಿರುವ ರಸ್ತೆಗಳಲ್ಲಿ ನೀರು ಸಂಗ್ರಹ ಆಗಿದೆ.

ಬಾಲಕಿಯರ ಶಾಲೆ ಹಿಂಭಾಗ ಮನೆ ಮುಂದೆ ಇತ್ತೀಚೆಗೆ ಪುರಸಭೆಯವರು ರಸ್ತೆ ಮಾಡಿದ್ದಾರೆ. ಚರಂಡಿ ಮಾಡಿಲ್ಲ. ಇದೀಗ ನೀರು ಸಂಗ್ರಹ ಆಗಿದೆ. ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ ಎಂದು ವಕೀಲ ಎ.ಜಿ.ಸುಧಾಕರ್ ತಿಳಿಸಿದರು.

ಪ್ರಭಾರಿ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಒಳಚರಂಡಿ ಕಾಮಗಾರಿ ಬಳಕೆಗೆ ಬರಲಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಬಾಲಕಿಯರ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಪುರಸಭೆ ನಿರ್ಮಿಸಿರುವ ರಸ್ತೆಯಲ್ಲಿ ನೀರು ಸಂಗ್ರಹವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.