ಸಾದಲಿ: ಸಾದಲಿಯಿಂದ ದಿಬ್ಬೂರಹಳ್ಳಿ ವರೆಗೂ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಾಮಗಾರಿಯಿಂದ ಇಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಮೇಲೆ ನಿತ್ಯ ದೂಳಿನ ಅಭಿಷೇಕ ಆಗುತ್ತಿದೆ. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತ್ತಾಗಿದೆ.
ನಿತ್ಯ ದೂಳು ತುಂಬಿದ ರಸ್ತೆಯಲ್ಲಿ ಪ್ರಯಾಣ ಮಾಡುವ ಜನತೆ ಧೂಳಿನ ಕಾಟಕ್ಕೆ ಕಂಗೆಟ್ಟು ಹೋಗಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವವರ ಮೈ ಮತ್ತು ಬಟ್ಟೆ ತುಂಬಾ ಧೂಳು ಆವರಿಸಿಕೊಂಡಿರುತ್ತದೆ. ಜತೆಗೆ ಆರೋಗ್ಯಕ್ಕೆ ತೊಂದರೆ ತರುತ್ತಿದೆ. ಅಸ್ತಮಾ ಮತ್ತು ಶ್ವಾಸಕೋಸ ಸಮಸ್ಯೆ ಇರುವವರು ಈ ರಸ್ತೆಯಿಂದ ದೂರು ಉಳಿಯುತ್ತಿದ್ದಾರೆ. ಈ ದೂಳಿನ ಗೋಳಿಗೆ ಮುಕ್ತಿ ಎಂದೋ ಗೊಣಗುತ್ತಾ, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾ ಸಾಗುತ್ತಿದ್ದಾರೆ.
ಸಾದಲಿ ಕ್ರಾಸ್‌ದಿಂದ ಇರಗಪ್ಪನಹಳ್ಳಿ ವರೆಗೂ ದೂಳಿನಲ್ಲಿ ಪ್ರಯಾಣಿಸಬೇಕಾಗಿದೆ. ಬೇಸಿಗೆ ಕಾಲವಾಗಿದ್ದರಿಂದ ವಾಹನಗಳ ಓಡಾಟದ ರಭಸಕ್ಕೆ ವಿಪರೀತ ದೂಳು ಏಳುತ್ತಿದೆ. ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ರಸ್ತೆಯ ಮೇಲೆ ನೀರು ಸಿಂಪರಣೆ ಮಾಡದೇ ಕಾಮಗಾರಿ ನಡೆಸುತ್ತಿರುವುದರಿಂದ ಧೂಳಿನ ಸಮಸ್ಯೆ ಹೆಚ್ಚಾಗಿದೆ.
ಬಸ್ಸಿನಲ್ಲಿ ಬರುವ ಪ್ರಯಾಣಿಕರು ಧೂಳಿನಿಂದ ಬೇಸತ್ತಿದ್ದಾರೆ. ಬಸ್ಸಿನಲ್ಲಿ ಬರುವ ಪ್ರಯಾಣಿಕರು ನಿಲ್ದಾಣದಲ್ಲಿ ಕೆಳಗಿಳಿದು ದೂಳು ಜಾಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ, ಶಿಕ್ಷಕಿಯರು ಧೂಳಿನ ಕಾಟ ತಪ್ಪಿಸಿಕೊಳ್ಳಲು ಮುಖಕ್ಕೆ, ತಲೆಗೆ ಬಟ್ಟೆ ಕಟ್ಟಿಕೊಂಡು ಮುಸುಕುಧಾರಿಯಾಗಿ ಓಡಾಡುತ್ತಿದ್ದಾರೆ.
ಕೆರೆ ನೀರು ಬಳಕೆಗೆ ಸಲಹೆ: ಮೊದಲೇ ಹದಗೆಟ್ಟ ರಸ್ತೆಯಿಂದ ಬೇಸತ್ತು ಹೋಗಿದ್ದ ಜನರು ಈಗ ಧೂಳಿನಿಂದ ಇನ್ನಷ್ಟು ಕಂಗೆಟ್ಟು ಹೋಗಿದ್ದಾರೆ. ಪ್ರತಿದಿನ ಧೂಳಿನಲ್ಲಿ ಪ್ರಯಾಣದಿಂದ ಆರೋಗ್ಯ ಹದಗೆಡುತ್ತಿದೆ. ಕಣ್ಣು ಉರಿ ಬರುತ್ತಿದೆ. ಶ್ವಾಸಕೋಶ ಸಮಸ್ಯೆ ಸಮಸ್ಯೆ ಹೆಚ್ಚಾಗುತ್ತಿದೆ. ಇದೇ ರಸ್ತೆ ಪಕ್ಕದಲ್ಲಿ ನಾಲ್ಕು ಕೆರೆಗಳಿವೆ. ಪ್ರತಿಕೆರೆಯಲ್ಲೂ ನೀರನ್ನು ರಸ್ತೆ ಮೇಲೆ ಸಿಂಪಡಿಸಿದರೆ ಧೂಳು ಕಡಿಮೆ ಆಗುತ್ತದೆ ಎನ್ನುತ್ತಾರೆ ಗೊಲ್ಲಹಳ್ಳಿ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.