ADVERTISEMENT

ಸಾದಲಿ: ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ

ಸಾದಲಿ ಮುಖ್ಯರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 6:58 IST
Last Updated 21 ನವೆಂಬರ್ 2024, 6:58 IST
ಸಾದಲಿ ಮುಖ್ಯ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಹೋಗಲು ಸಾಧ್ಯವಾಗದೆ ಸಂಚಾರ ದಟ್ಟಣೆ ಉಂಟಾಗಿರುವುದು 
ಸಾದಲಿ ಮುಖ್ಯ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಹೋಗಲು ಸಾಧ್ಯವಾಗದೆ ಸಂಚಾರ ದಟ್ಟಣೆ ಉಂಟಾಗಿರುವುದು    

ಸಾದಲಿ: ತಾಲ್ಲೂಕಿನ ಸಾದಲಿ ಮುಖ್ಯ ರಸ್ತೆ ವಿಸ್ತರಣೆಗಾಗಿ ಮೂರು ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಇದಕ್ಕಾಗಿ ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿದ್ದ ಮನೆಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸಿ, ಆ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಆದರೆ, ಇದುವರೆಗೂ ರಸ್ತೆ ಅಗಲೀಕರಣ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ ಎಂದು ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ರಸ್ತೆಯಲ್ಲಿ ನಿತ್ಯ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ರಸ್ತೆಯ ಎರಡೂ ಬದಿಯಲ್ಲಿ ಮಾರ್ಕಿಂಗ್ ಮಾಡಿ ಅಂಗಡಿಗಳು ಮತ್ತು ಮನೆಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಮುಖ್ಯಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಪ್ರಕಾರ ಆಸ್ತಿ ಮಾಲೀಕರು ಸ್ವತಃ ಅಂಗಡಿ, ಮನೆಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಬೆಂಬಲ ನೀಡಿದ್ದರು. ಆದರೆ, ಈವರೆಗೂ ರಸ್ತೆ ಅಭಿವೃದ್ಧಿಯೂ ಆಗಿಲ್ಲ. ಜೊತೆಗೆ ತಮ್ಮ ಮನೆ–ಮಠವು ನೆಲಸಮವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜೊತೆಗೆ ಈ ಹಿಂದೆ ಇದ್ದ ಅಂಗಡಿಗಳನ್ನು ತೆರವು ಮಾಡಿರುವ ತಾವು ಹೇಗೆ ಜೀವನ ನಡೆಸಬೇಕು ಎಂದು ಅಧಿಕಾರಿಗಳನ್ನು ಉದ್ದೇಶಿಸಿ ಜನರು ಪ್ರಶ್ನಿಸುತ್ತಿದ್ದಾರೆ. 

ADVERTISEMENT

ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ಮತ್ತು ಮನೆಗಳನ್ನು ತೆರವುಗೊಳಿಸಿದ್ದರಿಂದ ತೆರೆದ ಚರಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಈ ಮಾರ್ಗದಲ್ಲಿ ಆಸ್ಪತ್ರೆ, ಬ್ಯಾಂಕ್, ಹೋಟೆಲ್‌, ಕೃಷಿ ಪರಿಕರ ಮಾರಾಟ ಅಂಗಡಿಗಳು ಇರುವ ಕಾರಣ ಪಾರ್ಕಿಂಗ್ ಸಮಸ್ಯೆ ಉಲ್ಬಣಿಸಿದೆ. ರಸ್ತೆಯ ಅಂದ ಹದಗೆಟ್ಟಿದ್ದು ಉದ್ದೇಶಿತ ಕಾರ್ಯ ಮೂಲೆಗುಂಪಾಗಿದೆ. ಪ್ರತಿನಿತ್ಯ ಚರಂಡಿ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಇದರಿಂದ ರಸ್ತೆ ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದರು. 

ಅಂಗಡಿ ಮನೆಗಳನ್ನು ತೆರವುಗೊಳಿಸಿ ಮೂರು ತಿಂಗಳಾದರೂ ರಸ್ತೆ ವಿಸ್ತರಣೆಯಾಗಿಲ್ಲ. ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿ ಇತ್ತ ಗಮನಹರಿಸಿ ಕಿರಿಕಿರಿ ತಪ್ಪಿಸಬೇಕು
–ಶ್ರೀನಿವಾಸ್, ಸಾದಲಿ ನಿವಾಸಿ

ಚರಂಡಿ ನೀರು ರಸ್ತೆಗೆ

ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಮೂರು ತಿಂಗಳ ಹಿಂದೆ ರಸ್ತೆ ಬದಿಯಲ್ಲಿರುವ ಎಲ್ಲ ಅಂಗಡಿ ಮತ್ತು ಮನೆಗಳು ಹಾಗೂ ಚರಂಡಿಗಳನ್ನು ಕೆಡವಿ ಹಾಕಲಾಗಿದೆ. ಇದರಿಂದ ಚರಂಡಿ ನೀರು ರಸ್ತೆಗೆ ಹರಿದು ದುರ್ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿ ಕಾಯಿಲೆಗಳು ವ್ಯಾಪಿಸುವ ಭೀತಿ ಎದುರಾಗಿದೆ.  ರಸ್ತೆ ವಿಸ್ತರಣೆಗಾಗಿ ಸರಿಯಾಗಿ ಅಳತೆಯಾಗಿಲ್ಲ. ರಸ್ತೆ ಎಡಬದಿ ಮತ್ತು ಬಲಬದಿ 43 ಅಡಿ ತೆಗೆಯಬೇಕಿದ್ದ ಅಧಿಕಾರಿಗಳು ಕೇವಲ 20ಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಹಾಗೂ ಜನಸಂಖ್ಯೆ ಹೆಚ್ಚಾದರೆ ಮತ್ತೆ ಇಂಥದ್ದೇ ಸಮಸ್ಯೆ ಎದುರಾಗಲಿದೆ.  ನರಸಿಂಹಮೂರ್ತಿ ಸಾದಲಿ ಅಭಿವೃದ್ಧಿ ಸಮಿತಿ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.