ADVERTISEMENT

ಚೇಳೂರು | ಶಿಥಿಲ ಕಟ್ಟಡ, ಜೀವಭಯದಲ್ಲೇ ಪಾಠ!

ಮಕ್ಕಳ ಸೇರ್ಪಡೆ ಕಡಿಮೆ ಕಾರಣಕ್ಕೆ ವರ್ಷ ಕಳೆದಂತೆ ಶಾಲೆ ಮುಚ್ಚುವ ಸಂಖ್ಯೆಯೂ ನಿಂತಿಲ್ಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:05 IST
Last Updated 22 ಜೂನ್ 2024, 7:05 IST
ಪೆದ್ದೂರು ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದು
ಪೆದ್ದೂರು ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದು   

ಚೇಳೂರು: ಶಿಥಿಲಾವಸ್ಥೆಯ ಅನೇಕ ಕಟ್ಟಡಗಳಲ್ಲಿ ಸರ್ಕಾರಿ ಶಾಲಾ ಮಕ್ಕಳು ಪಾಠ ಕೇಳುವ ದಾರಿದ್ರ್ಯ ಸ್ಥಿತಿಗೆ ತಾಲ್ಲೂಕಿನಲ್ಲಿ ಇನ್ನೂ ಮುಕ್ತಿ ಸಿಕ್ಕಿಲ್ಲ. ಮಕ್ಕಳ ಸೇರ್ಪಡೆ ಕಡಿಮೆ ಕಾರಣಕ್ಕೆ ವರ್ಷ ಕಳೆದಂತೆ ಶಾಲೆ ಮುಚ್ಚುವ ಸಂಖ್ಯೆಯೂ ನಿಂತಿಲ್ಲ.

ಅತೀ ತುರ್ತಾಗಿ ಕಟ್ಟಡ ದುರಸ್ತಿ ಕುರಿತು ಶಿಕ್ಷಣ ಇಲಾಖೆಗೆ ಅನೇಕ ಶಾಲೆಗಳ ಮನವಿ ಸಲ್ಲಿಕೆಯೂ ನಡೆದಿದೆ. ಆದರೆ ಸಲ್ಲಿಸಿದ ವರದಿಗೆ ಸರ್ಕಾರ ಅಲ್ಪಮಟ್ಟಿನ ಅನುದಾನ ಬಿಡುಗಡೆಗೊಳಿಸಿದೆ. ಆದರೆ ತಾಲ್ಲೂಕಿನ ಅನೇಕ ಕಟ್ಟಡದ ಗೋಡೆ, ಚಾವಣಿ ಸಂಪೂರ್ಣ ಹಾಳಾಗಿದೆ. ಕೆಲ ಶಾಲೆಯಲ್ಲಿ ವಿದ್ಯುತ್‌ ಸಂಪರ್ಕ ಸರಿ ಇಲ್ಲ. ಸಮಸ್ಯೆಗಳ ಸರಮಾಲೆಯನ್ನು ಅನೇಕ ಸರ್ಕಾರಿ ಶಾಲೆಗಳ ಕಟ್ಟಡ ಹೊದ್ದುಕೊಂಡಿವೆ.

ಅಧಿಕ ಮಳೆ ಕಾರಣ ಪ್ರತಿ ವರ್ಷ ಕಟ್ಟಡಗಳ ನಿರ್ವಹಣೆ ಅನಿವಾರ್ಯತೆ ಹೊಂದಿವೆ. ಅನೇಕ ವರ್ಷ ಕಳೆದಿರುವ ಕಟ್ಟಡಗಳು ನಿರ್ವಹಣೆ ಇಲ್ಲದೆ ಈಗ ಶಿಥಿಲಾವಸ್ಥೆ ತಲುಪಿವೆ. 2003ರಿಂದ ಈ ವರೆಗೆ ತಾಲ್ಲೂಕಿನಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಪ್ರಸಕ್ತ ಸಾಲಿನಲ್ಲಿ ಹಲವು ಶಾಲೆಗಳು ಮುಚ್ಚಿದ್ದು, ಕೆಲವು ಶಾಲೆಗಳಲ್ಲಿ ಇಬ್ಬರು ಮೂವರು ಮಕ್ಕಳು ಇದ್ದು ಅವು ಸಹ ಶೀಘ್ರವೇ ಮುಚ್ಚುವ ಸ್ಥಿತಿಯನ್ನು ತಲುಪಿವೆ.

ADVERTISEMENT

ಕಟ್ಟಡಗಳ ದುರಸ್ತಿ, ನವೀಕರಣ, ಹೊಸ ಕೊಠಡಿ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಯೋಜನೆ, ಜಿ.ಪಂ, ತಾ.ಪಂ ನ ವಿವಿಧ ಯೋಜನೆಯಡಿ ಅನುದಾನ ಮಂಜೂರಿಗೆ ಅವಕಾಶವಿದೆ. ಆದರೆ, ಇನ್ನೂ ಶಿಥಿಲಾವಸ್ಥೆ ಶಾಲಾ ಕಟ್ಟಡಗಳಿಗೆ ದುರಸ್ತಿ ಭಾಗ್ಯ ದೊರಕಿಲ್ಲ.

ಮಕ್ಕಳು, ಶಿಕ್ಷಕರಿಗೆ ಜೀವ ಭಯ: ತಾಲ್ಲೂಕಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ 1000ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ಶಾಲೆಗಳಲ್ಲಿ ನೂರಾರು ಶಿಕ್ಷಕರಿದ್ದು, ಮಕ್ಕಳು, ಶಿಕ್ಷಕರ ಅನುಪಾತ ಬಹುತೇಕ ಸಮವಾಗಿದೆ. ಆದರೆ, ಶತಮಾನ ಪೂರೈಸಿದ ಅನೇಕ ಶಾಲಾ ಕಟ್ಟಡಗಳಿದ್ದು, ತುರ್ತಾಗಿ ದುರಸ್ತಿ, ನವೀಕರಣಗೊಳ್ಳಬೇಕಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ನೂರಾರು ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ತುರ್ತಾಗಿ ಕೆಲವೊಂದು ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಬೇಕು ಎಂದು ಗುರುತಿಸಲಾಗಿದೆ. ಚೇಳೂರು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಶಾಲೆಗಳ ಕಟ್ಟಡ ತುರ್ತಾಗಿ ದುರಸ್ತಿಗೊಳ್ಳಬೇಕಿದೆ.

ಇನ್ನೂ ಕೆಲವೊಂದು ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕಾಂಪೌಂಡ್‌, ಗ್ರಂಥಾಲಯ, ಕೊಠಡಿ ನಿರ್ಮಾಣಕ್ಕೆ ಕೋರಲಾಗಿದೆ. ಇನ್ನೂ ತಾಲ್ಲೂಕಿನ ಹಲವಾರು ಶಾಲೆಗಳು ಮಳೆಗಾಲದಲ್ಲಿ ಸೋರುವಿಕೆಯ ನಡುವೆ ಗ್ರಾಮ ಪಂಚಾಯಿತಿ ನೆರವಿನಿಂದ ಹಣ ದುರುಪಯೋಗ ಮಾಡಿ ಕಾಮಗಾರಿ ನಡೆಸದೆ ಕೇವಲ ಗುತ್ತಿಗೆದಾರರು ಸರ್ಕಾರ ಖಜಾನೆಗೆ ಧಕ್ಕೆ ತಂದಿದ್ದಾರೆ.

ಕಟ್ಟಡ ಮರು ದುರಸ್ತಿ ನೆಪದಲ್ಲಿ, ನಿರ್ಮಾಣಕ್ಕೆ ಲಕ್ಷಾಂತರ ರೂಪಾಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಕೆಲವು ತುರ್ತಾಗಿ ಶಾಲಾ ಕಟ್ಟಡ ದುರಸ್ತಿಗೆ ಸಲ್ಲಿಸಲಾದ ವರದಿಯನ್ನು ಸರ್ಕಾರ ಈ ವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಶಿಥಿಲಾವಸ್ಥೆ ಕಟ್ಟಡದಲ್ಲಿ ಜೀವ ಭಯದಲ್ಲಿ ಪಾಠ ಆಲಿಸುವ ಮಕ್ಕಳ ನಡುವೆ ಶಿಕ್ಷಕರು ಕಾರ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಸೋರುವ ಕಟ್ಟಡದಲ್ಲಿ ಪೇಚಾಟ: ಶಾಲಾ ಪ್ರಗತಿ, ನಿರ್ವಹಣೆಗೆ ಗ್ರಾ.ಪಂ ಆಡಳಿತದ ಹೊಂದಾಣಿಕೆಯೊಂದಿಗೆ ಮಕ್ಕಳ ಪೋಷಕರ ಎಸ್‌ಡಿಎಂಸಿ ಸಮಿತಿ ರಚಿಸಿದ್ದರೂ ಶಾಲೆಗಳು ಸಮಸ್ಯೆಯಿಂದ ಬಿಡುಗಡೆಗೊಂಡಿಲ್ಲ. ಅನೇಕ ಶಾಲಾ ಕಟ್ಟಡಗಳು ಸೋರುತ್ತಿವೆ. ಗೋಡೆ ಮೇಲೆ ಮಳೆ ನೀರು ಇಳಿದು ಅಪಾಯದ ಸ್ಥಿತಿ ಇದೆ.

ಕೆಲವೆಡೆ ಕಟ್ಟಡಕ್ಕೆ ಅಳವಡಿಸಲಾದ ವಿದ್ಯುತ್‌ ಸಂಪರ್ಕದಲ್ಲಿ ನ್ಯೂನತೆಗಳಿವೆ. ಅನೇಕ ಶಾಲೆಗಳಲ್ಲಿ ಕುಡಿವ ನೀರು ಕೊರತೆ ಇದ್ದು ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಕೆಲ ಶಾಲೆಗಳಲ್ಲಿ ಸುಣ್ಣ ಬಣ್ಣವೂ ಇಲ್ಲವಾಗಿದೆ. ಎಸ್‌ಡಿಎಂಸಿ, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಸರ್ಕಾರದ ಜತೆ ಗುದ್ದಾಡಿ ಮೂಲ ಸೌಕರ್ಯ ಪಡೆಯುವಂತಾಗಿದೆ. ಮಕ್ಕಳ ಸೇರ್ಪಡೆಗೆ ಆಸಕ್ತಿ ಇದ್ದರೂ ಕೆಲ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲದ ಕಾರಣಕ್ಕೆ ಪೋಷಕರು ಹಿಂಜರಿಯುತ್ತಿದ್ದಾರೆ. ಹಾಳು ಕೊಂಪೆಯಂತಿರುವ ಕೆಲ ಶಾಲಾ ಕಟ್ಟಡದಲ್ಲಿ ಮಕ್ಕಳು ಶೈಕ್ಷಣಿಕ ಭವಿಷ್ಯದ ಕನಸು ಕಾಣುವಂತಾಗಿದೆ.

ಶಾಲೆಗೆ ನೀರಿನ ಸೌಕರ್ಯವನ್ನು ಕಲ್ಪಿಸುವ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಿಲ್ಲ. ಅನೇಕ ಶಾಲೆಗಳ ಶೌಚಾಲಯದಲ್ಲಿ ನೀರಿಲ್ಲದ ಕುರಿತು ಪ್ರೌಢಾವಸ್ಥೆಯ ಹೆಣ್ಣು ಮಕ್ಕಳು ಕಣ್ಣೀರು ಸುರಿಸುವಂತಾಗಿದ್ದು ಸಂಬಂಧಪಟ್ಟವರು ಗಮನಿಸಿಲ್ಲ. ಅಚ್ಚರಿ ಸಂಗತಿ ಎಂದರೆ ಕೆಲ ಶಾಲೆಯಲ್ಲಿ ನೀರಿನ ಸೌಕರ್ಯ ಇದ್ದರೂ ನಲ್ಲಿ ಮಾರ್ಗದಲ್ಲಿ ಪೂರೈಕೆ ಆಗುತ್ತಿಲ್ಲ. ಇಂತಹ ಸಣ್ಣ ಸಮಸ್ಯೆ ಬಗೆಹರಿಸಲಾಗದಷ್ಟು ಬೇಜವಾಬ್ದಾರಿತನ ಶಾಲಾ ಆಡಳಿತದಲ್ಲಿದೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿನಿ.

ಪೆದ್ದೂರು ಶಾಲೆಯ ಗೋಡೆ ಬಿರುಕು ಬಿಟ್ಟಿರುವುದು
ಪೆದ್ದೂರು ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದು.
ಚೇಳೂರಿನ ಸರ್ಕಾರಿ ಶಾಲೆ ಶಿಥಿಲಾವ್ಯಸ್ಥೆಯಲ್ಲಿ ಇದೆ
ಚೇಳೂರಿನ ಸರ್ಕಾರಿ ಶಾಲೆ ಶಿಥಿಲಾವ್ಯಸ್ಥೆಯಲ್ಲಿ ಇರುವುದು

ಕೊಠಡಿಗಳ ಕೊರತೆ ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾದ ಶಾಲಾ ಕಾಲೇಜು ಪ್ರೌಢಶಾಲೆಗಳ ಕಟ್ಟಡದ ಸ್ಥಿತಿ ಭಿನ್ನವಾಗಿಲ್ಲ. ಅನೇಕ ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದ್ದು ವಿನ್ಯಾಸ ದೋಷ ಸಮಸ್ಯೆ ಹೆಚ್ಚಿಸಿದೆ. ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳ ಕೊರತೆ ಎದ್ದು ಕಾಣುತ್ತಿವೆ. ಗುತ್ತಿಗೆದಾರರ ನಿರ್ಲಕ್ಷ್ಯ ಕೆಲವೆಡೆ ಅನೇಕ ಶಾಲೆಗಳು ಗುತ್ತಿಗೆದಾರರು ಗುತ್ತಿಗೆ ತೆಗೆದು ಕೊಂಡ ನಂತರ ಉತ್ತಮ ಗುಣಮಟ್ಟದ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಇದರ ಜತೆಗೆ ಅನೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ಕಲಿಕೆಗೆ ಯೋಗ್ಯವಾಗಿಲ್ಲ. ಸರ್ಕಾರ ಕಟ್ಟಡಗಳ ದುರಸ್ತಿ ನವೀಕರಣಕ್ಕೆ ವಿಶೇಷ ಅನುದಾನ ಮಂಜೂರು ಮಾಡುತ್ತಿಲ್ಲ. ಸರ್ಕಾರಿ ಶಾಲೆಗಳ ಪ್ರಗತಿಗೆ ಸರ್ಕಾರ ಅಗತ್ಯವಾಗಿ ಹೆಚ್ಚಿನ ಒತ್ತು ನೀಡಬೇಕಿದೆ. ಮಹೇಶ್ ಶೆಟ್ಟಿ ಪುಲ್ಲಗಲ್ಲು ಶೌಚಾಲಯಕ್ಕೆ ಪರಿತಪಿಸುವಂತಾಗಿದೆ ತಾಲ್ಲೂಕಿನ ಚಾಕವೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವವನ್ನು ಕಂಡಿದೆ. ಆದರೆ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದಾಖಲೆಯನ್ನು ಪಡೆದ ಶಾಲೆಯ ಹೆಗ್ಗಳಿಕೆ ಪಾತ್ರವಾಗಿದೆ. ಈ ಶಾಲೆಯಲ್ಲಿ ಸುಮಾರು ವರ್ಷಗಳಿಂದ ಶೌಚಾಲಯ ಮತ್ತು ಕಾಂಪೌಂಡ್ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ಹೆಣ್ಣುಮಕ್ಕಳು ಶೌಚಾಲಯಕ್ಕೆ ಪರಿತಪಿಸುವಂತಾಗಿದೆ. ಇರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮುಂದಾಗಬೇಕಾಗಿದೆ. ಎನ್ .ಅಮರನಾಥ್ ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾಕವೇಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.