ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸಪುರ(ಸಾಕೋಳ್ಳಪಲ್ಲಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದರೆ ನೀರು ಸೋರುತ್ತದೆ. ಇದರ ನಡುವೆಯೇ ಮಕ್ಕಳು ಜೀವ ಭಯದಲ್ಲೇ ಪಾಠ ಕೇಳಬೇಕಾದ ದುಸ್ಥಿತಿ.
ಸಾಕೋಳ್ಳಪಲ್ಲಿಯಲ್ಲಿ 120ಕ್ಕೂ ಹೆಚ್ಚು ಕುಟುಂಬಗಳಿದ್ದು, ಪರಿಶಿಷ್ಟ ಕುಟುಂಬಗಳು ಅಧಿಕವಾಗಿ ವಾಸ ಮಾಡುತ್ತಿವೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರಿಗೂ 18 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಎರಡು ಕಟ್ಟಡಗಳು ಶಿಥಿಲಾವಸ್ಥೆ ತಲುಪಿ ಆರು ವರ್ಷ ಕಳೆದಿದೆ. ಮಳೆ ಬಂದರೆ ಮೇಲ್ಚಾವಣಿ ಸೋರುತ್ತದೆ. ಕಟ್ಟಡ ಯಾವಾಗ ಕುಸಿಯುತ್ತದೆ ಎಂಬ ಬೀತಿಯಲ್ಲಿ ಮಕ್ಕಳು ಪಾಠ ಕೇಳಬೇಕಿದೆ. ಶಿಕ್ಷಕರು ಬೋಧಿಸಬೇಕಿದೆ. ಮಳೆ ಜಾಸ್ತಿಯಾದರೆ ದೇವಾಲಯದ ಆವರಣದಲ್ಲಿ ಪಾಠ ಕೇಳುವಂತೆ ಆಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆ ಕಟ್ಟಡ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಲಾ ಮುಖ್ಯ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ಅನೇಕ ಭಾರಿ ಪತ್ರ ಬರೆದಿದ್ದಾರೆ. ಯಾವುದೇ ಪ್ರಯೋಜನ ಆಗಿಲ್ಲ.
ಮಳೆ ಬೀಳುವ ಸಮಯದಲ್ಲಿ ಕಟ್ಟಡದ ಮೇಲೆ ನೀರು ಸಂಗ್ರಹ ಆಗುವುದರಿಂದ ಸಿಮೆಂಟ್ ಪದರ ಉದುರುತ್ತಿವೆ. ಮೇಲ್ಛಾವಣಿಯು, ಗೋಡೆ ಕುಸಿಯುವ ಹಂತದಲ್ಲಿ ಇದೆ. ಮಳೆಗಾಲ ಆರಂಭವಾದರೂ ಶಾಲಾ ಕಟ್ಟಡ ನವೀಕರಣ ಮಾಡಿಲ್ಲ. ಮೇಲ್ಛಾವಣೆ ಸಮಪರ್ಕವಾಗಿ ಸಿದ್ಧಪಡಿಸಿಲ್ಲ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಾಗೂ ಕಳಿಸಲು ಭಯ ಪಡುತ್ತಿದ್ದಾರೆ.
ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿ ಆರು ವರ್ಷ ಕಳೆದಿದೆ. ಇದರಿಂದ ಶಾಲಾ ಮಕ್ಕಳಿಗೆ ಪಾಠ ಕೇಳಲು ತೊಂದರೆ ಆಗಿದೆ.ಕೂಡಲೇ ಶಾಲಾ ಕಟ್ಟಡವನ್ನು ನವೀಕರಣ ಮಾಡಬೇಕುಗೋಪಾಲಕೃಷ್ಣ, ಸ್ಥಳೀಯ
ಮಳೆಗಾಲದೊಂದಿಗೆ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಸರ್ಕಾರ ಕೂಡಲೇ ನೂತನ ಕಟ್ಟಡ ನಿರ್ಮಿಸಬೇಕುಶ್ರೀನಿವಾಸ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.