ಚಿಕ್ಕಬಳ್ಳಾಪುರ: ನೀವು ಕುರಿ, ಮೇಕೆ ಸಾಕಣೆದಾರರೆ? ನಿಮ್ಮ ಕುರಿ, ಮೇಕೆ ಕೊಳ್ಳುವವರು ಅವುಗಳನ್ನು ಕಣ್ಣಲ್ಲೆ ಅಳೆದು ಬೆಲೆ ನಿಗದಿ ಮಾಡಿ, ನಿಮಗೆ ವಂಚಿಸುತ್ತಿದ್ದಾರೆಯೆ? ಹಾಗಿದ್ದರೆ ನೀವು ಒಮ್ಮೆ ತಾಲ್ಲೂಕಿನ ಪೇರೇಸಂದ್ರದಲ್ಲಿ ತಲೆ ಎತ್ತಿರುವ ಕುರಿ ಹಾಗೂ ಮೇಕೆ ಮಾರುಕಟ್ಟೆಗೆ ಭೇಟಿ ನೀಡಿ, ನಿಮ್ಮ ಶ್ರಮಕ್ಕೆ ಖಂಡಿತ ಅಲ್ಲಿ ವೈಜ್ಞಾನಿಕ, ನ್ಯಾಯೋಚಿತ ಬೆಲೆ ದೊರೆಯುತ್ತದೆ.
ಅಚ್ಚರಿಯಾದರೂ ಇದು ನಿಜ. ರಾಜ್ಯ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳ ಮತ್ತು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಸಹಯೋಗದಲ್ಲಿ ಪೇರೇಸಂದ್ರದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ₨40 ಲಕ್ಷ ವೆಚ್ಚದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕುರಿ ಹಾಗೂ ಮೇಕೆಗಳ ಮಾರಾಟದ ಮಾರುಕಟ್ಟೆ ಸ್ಥಾಪಿಸಿದೆ. ಇಲ್ಲಿ ಕುರಿ, ಮೇಕೆಗಳ ಗಾತ್ರದ ಬದಲು ತೂಕಕ್ಕೆ ತಕ್ಕಂತೆ ರೈತರಿಗೆ ಬೆಲೆ ಸಿಗಲಿದೆ.
ಈ ಮಾರುಕಟ್ಟೆಗೆ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಕುರಿ, ಮೇಕೆಗಳಿಗೆ ಅವುಗಳ ತೂಕಕ್ಕೆ ಪೂರಕವಾಗಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ಈ ಮಾರುಕಟ್ಟೆಯಲ್ಲಿ ಜಾರಿಗೆ ತರಲಾಗಿದೆ. ಇದರಿಂದಾಗಿ ರೈತರು ವಂಚನೆಗೆ ಒಳಗಾಗುವುದು ತಪ್ಪಲಿದೆ. ಇಲ್ಲಿ ಮಾರಾಟಗಾರರು ಮತ್ತು ಖರೀದಿದಾರರಿಗೆ ನ್ಯಾಯಯುತ ಸೇವೆ ದೊರೆಯಲಿದೆ. ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಈ ನೂತನ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಪ್ರಾಣಿಗಳನ್ನು ನಿಲ್ಲಿಸಲು, ಕುಡಿಯುವ ನೀರು, ವಾಹನದಿಂದ ಇಳಿಸಲು, ಏರಿಸಲು ರ್‍ಯಾಂಪ್ ವ್ಯವಸ್ಥೆ, ಅತ್ಯಾಧುನಿಕ ತೂಕದ ಯಂತ್ರ ಮಾರುಕಟ್ಟೆಯಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ ರೈತರು ಎಲ್ಲೆಂದರಲ್ಲಿ ಕುರಿ, ಮೇಕೆಗಳನ್ನು ಮಾರಾಟ ಮಾಡಿ ನಷ್ಟ ಅನುಭವಿಸುವ ಬದಲು ಇಲ್ಲಿ ಬಂದು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ಮಾತನಾಡಿ, ‘ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮತ್ತು ಕುರಿ ಸಾಕಾಣಿಕೆದಾರರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ 24 ಜಿಲ್ಲೆಗಳಲ್ಲಿ ಕುರಿ ಮತ್ತು ಮೇಕೆ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ತೂಕ ಆಧಾರಿತವಾಗಿ ಕುರಿ ಮತ್ತು ಮೇಕೆ ಖರೀದಿ ನಡೆಯಲಿದೆ. ಹೀಗಾಗಿ, ಕುರಿ ಮತ್ತು ಮೇಕೆ ಸಾಕಣೆದಾರರು ಈ ಮಾರುಕಟ್ಟೆಯ ಪ್ರಯೋಜನ ಪಡೆಯಬೇಕು’ ಎಂದರು.
ಎಪಿಎಂಸಿ ಸದಸ್ಯ ಗೋವಿಂದಸ್ವಾಮಿ, ನಿರ್ದೇಶಕರಾದ ಕೃಷ್ಣಾರೆಡ್ಡಿ, ಮಿಲ್ಟನ್ ವೆಂಕಟೇಶ್, ಕುರಿ ಮತ್ತು ಮೇಕೆ ಉಣ್ಣೆ ನಿಗಮದ ಉಸ್ತುವಾರಿ ಡಾ.ಜ್ಞಾನೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಕೃಷ್ಣಾರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ರಾಮದಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.