ADVERTISEMENT

ಶಿಡ್ಲಘಟ್ಟ: ಅವ್ಯವಸ್ಥೆ ಆಗರ ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣ

ಡಿ.ಜಿ.ಮಲ್ಲಿಕಾರ್ಜುನ
Published 14 ಅಕ್ಟೋಬರ್ 2024, 6:34 IST
Last Updated 14 ಅಕ್ಟೋಬರ್ 2024, 6:34 IST
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಕಳೆಗಿಡ ಮತ್ತು ಹುತ್ತ ಬೆಳೆದಿರುವುದು
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಕಳೆಗಿಡ ಮತ್ತು ಹುತ್ತ ಬೆಳೆದಿರುವುದು   

ಶಿಡ್ಲಘಟ್ಟ: ಸ್ವಚ್ಛತೆ ಮರೀಚಿಕೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯ ತೆರೆಯುವುದಿಲ್ಲ, ಎಲ್ಲೆಡೆ ಹಬ್ಬಿರುವ ಕಳೆಗಿಡಗಳು, ಒಡೆದು ಹೋದ ಡ್ರೈನೇಜ್ ಸ್ಲ್ಯಾಬ್ ಗಳು.. ಪಟ್ಟಿ ಮಾಡುತ್ತಾ ಹೋದರೆ ನೆಹರೂ ಕ್ರೀಡಾಂಗಣ ಈ ಸಮಸ್ಯೆಗಳು ಕ್ರೀಡೆಗಳ ಸಂಖ್ಯೆಗಿಂತ ಹೆಚ್ಚಿವೆ.

ಕ್ರೀಡಾಪಟುಗಳಿಗೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ಮಾತ್ರ ತೆಗೆದು, ನಂತರ ಮುಚ್ಚಿದರೆ ಮತ್ತೆ ಕ್ರೀಡಾಕೂಟ ನಡೆದಾಗ ಮಾತ್ರ ತೆರೆಯುವುದು. ಸ್ವಚ್ಛತೆಯಿಂದ ಮರೀಚಿಕೆಯಾಗಿದೆ ಕ್ರೀಡಾಂಗಣ. ಲಾಂಗ್ ಜಂಪ್ ಅಂಕಣದಲ್ಲಿ ಮರಳು ಇಲ್ಲದೆ, ಕಳೆ ಗಿಡಗಳು ಬೆಳೆದಿವೆ. ವರ್ಷಕ್ಕೆ ಒಮ್ಮೆ ಕ್ರೀಡಾ ಕೂಟದ ಸಮಯದಲ್ಲಿ ಎಂ.ಸ್ಯಾಂಡ್ ಒಂದು ಲೋಡು ಹಾಕಿಸಿ, ಕಾಟಾಚಾರಕ್ಕೆ ಕ್ರೀಡಾಕೂಟ ಮುಗಿಸಿ ಕೈ ತೊಳೆದುಕೊಳ್ಳುವರು.

400 ಮೀಟರ್ ಓಟದ ಟ್ರ್ಯಾಕ್ ಸುತ್ತಲಿನ ಡ್ರೈನೇಜ್ ಸ್ಲಾಬ್‌ಗಳು ಒಡೆದು ಹೋಗಿದ್ದು, ಅನಾಹುತಕ್ಕೆ ಕಾರಣವಾಗಿವೆ. ಕ್ರೀಡಾಂಗಣದ ಬಹಳಷ್ಟು ಕಡೆ ಕಳೆಗಿಡಗಳು ಆವರಿಸಿವೆ.

ADVERTISEMENT

‘ಈ ಎಲ್ಲ ಅವ್ಯವಸ್ಥೆಗಳಿಗೆ ಪ್ರಮುಖ ಕಾರಣ, ಇತ್ತೀಚಿನ ಕೆಲವು ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನಾಗಿ ಕೇವಲ 6 ತಿಂಗಳು 3 ತಿಂಗಳು 1 ವರ್ಷ ಮಾತ್ರ ಇರುವಂತಹ ಅಧಿಕಾರಿಗಳನ್ನು ನೇಮಿಸುತ್ತಿರುವುದಾಗಿದೆ. ಅವರು ಕಡಿಮೆ ಅವಧಿಯಲ್ಲಿ ಇದ್ದು ನಮ್ಮ ಜಿಲ್ಲೆಗೆ ಏನು ಕೆಲಸ ಮಾಡಲು ಸಾಧ್ಯ. ಯಾವ ಯಾವ ತಾಲ್ಲೂಕಿನಲ್ಲಿ ಕ್ರೀಡಾಂಗಣ ಇದೆ ಎಂಬುದನ್ನೂ ಕೂಡ ವೀಕ್ಷಣೆ ಮಾಡುವುದಿಲ್ಲ. ಕಾಟಾಚಾರಕ್ಕೆ ಅವರು ಕೆಲಸ ಜಿಲ್ಲಾ ಕೇಂದ್ರದಲ್ಲಿ ಅವರ ಕೆಲಸ ಮಾಡಿ ಹೋಗುತ್ತಾರೆ’ ಎನ್ನುತ್ತಾರೆ ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಯಂತಿಗ್ರಾಮ ನಾರಾಯಣಸ್ವಾಮಿ.

‘ಕ್ರೀಡಾಪಟುಗಳ ಹಿತ ದೃಷ್ಟಿಯಿಂದ ಜಿಲ್ಲಾ ಕೇಂದ್ರದ ಕ್ರೀಡಾ ಕಚೇರಿಯಲ್ಲಿ ಕನಿಷ್ಠ ಮೂರು ನಾಲ್ಕು ವರ್ಷಗಳ ಕಾಲ ಒಂದೇ ಕಡೆ ಇದ್ದು ಕೆಲಸ ಮಾಡುವ ಖಾಯಂ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಅವರು ತಿಳಿಸಿದರು.

ನಿರ್ವಹಣೆ ಇಲ್ಲದೆ ಸೊರಗಿದೆ ಕ್ರೀಡಾಂಗಣ:

‘ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು ಆಸಕ್ತಿವಹಿಸಿ ಹನುಮಂತಪುರ ಗೇಟ್ ಬಳಿ ಸುಮಾರು 33 ಗುಂಟೆ ಜಮೀನನ್ನು ಒಳಾಂಗಣ ಕ್ರೀಡಾಂಗಣಕ್ಕಾಗಿ ಖಾತೆ ಕೂಡ ಮಾಡಿಸಿ ಯುವಜನ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ್ದೇವೆ. ಅದರ ಕಾಮಗಾರಿಯನ್ನು ಪ್ರಾರಂಭಿಸದಿರುವುದು ಕ್ರೀಡಾಪಟುಗಳಿಗೆ ಬೇಸರ ತಂದಿದೆ’ ಎಂದು ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ತಿಳಿಸಿದರು.

‘ನೆಹರೂ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳು ಓಡುವ ಟ್ರ್ಯಾಕ್ ಸಮರ್ಪಕವಾಗಿಲ್ಲ. ಕೆಲವೆಡೆ ಹುತ್ತಗಳು ಬೆಳೆದಿವೆ. ಚುನಾವಣೆ ಸಮಯದಲ್ಲಿ ಚುನಾವಣಾ ಅಧಿಕಾರಿಗಳನ್ನು ಕರೆದೊಯ್ಯಲು ಬರುವ ಬಸ್ಸುಗಳ ಓಡಾಟದಿಂದ ಇಲ್ಲಿನ ಸ್ಲ್ಯಾಬ್‌ಗಳು ಒಡೆದುಹೋಗಿವೆ. ಅವನ್ನು ಸರಿಪಡಿಸಿಲ್ಲ. ಭದ್ರವಾದ ಕಾಂಪೌಂಡ್ ಇಲ್ಲ. ಸುತ್ತಮುತ್ತಲಿನ ಮನೆಯವರು ಕಸ ಸುರಿಯುತ್ತಾರೆ. ಕೆಲ ವರ್ಷಗಳ ಹಿಂದೆ ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿ ಸುಮಾರು 140 ಟ್ರ್ಯಾಕ್ಟರ್ ತ್ಯಾಜ್ಯ ಹೊರ ಸಾಗಿಸಿದ್ದೆವು. ಅದನ್ನು ನಿರ್ವಹಣೆ ಮಾಡುತ್ತಿಲ್ಲ’ ಎಂದು ಅವರು ಸಮಸ್ಯೆಗಳನ್ನು ವಿವರಿಸಿದರು.

- ನಗರದ ಕ್ರೀಡಾಂಗಣದಲ್ಲಿ ವಾಯುವಿಹಾರಕ್ಕೆ ಬರುವ ನಾಗರಿಕರಿಗೆ ಕುಡಿಯುವ ನೀರು ಶೌಚಾಲಯ ಸಹಿತ ಕ್ರೀಡಾಂಗಣದ ಸುತ್ತಮುತ್ತ ಕಾಂಪೌಂಡ್ ಹಾಗೂ ಭದ್ರತೆ ಒದಗಿಸಬೇಕು
ನಾಸಿರ್ ಕ್ರೀಡಾಪಟು
ಸೂಕ್ತ ವ್ಯವಸ್ಥೆ ಇಲ್ಲ ನೆಹರು ಕ್ರೀಡಾಂಗಣದಲ್ಲಿ ಉತ್ತಮ ಕ್ರಿಕೆಟ್ ಪಿಚ್ ಇಲ್ಲ ನೆಟ್ ಪ್ರಾಕ್ಟೀಸ್ ಮಾಡಲು ವ್ಯವಸ್ಥೆ ಮಾಡಿಕೊಡುವಂತೆ ಕ್ರೀಡಾ ಇಲಾಖೆಯವರನ್ನು ಕೇಳಿ ಪ್ರಯೋಜನವಿಲ್ಲವಾಯಿತು. ವಾಲಿಬಾಲ್ ಆಡಲು ಸೂಕ್ತ ವ್ಯವಸ್ಥೆ ಇಲ್ಲ. ಈ ಹಿಂದೆ ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್‌ಗಾಗಿ ಕೋರ್ಟ್ ಅವೈಜ್ಞಾನಿಕವಾಗಿ ಮಾಡಿ ಲಕ್ಷಾಂತರ ರೂಪಾಯಿ ಹಾಳು ಮಾಡಿದರು. ಅಲ್ಲಿ ಆಡುವುದಕ್ಕೂ ಆಗದು ಸ್ಥಳವೂ ಪ್ರಯೋಜನಕ್ಕೆ ಬರದಂತಾಯಿತು.
ಟಿ.ಟಿ.ನರಸಿಂಹಪ್ಪ ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.