ಗೌರಿಬಿದನೂರು: ದಾವಣಗೆರೆಯಲ್ಲಿ ಆ.3ರಂದು ನಡೆಯಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಬಸ್ ವ್ಯವಸ್ಥೆ ಮಾಡಿದ್ದಾರೆ. ಇದು ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ತೀವ್ರವಾಗಿ ಚರ್ಚೆ ಆಗುತ್ತಿದೆ.
ಪುಟ್ಟಸ್ವಾಮಿ ಗೌಡ ಅವರು ಕಾಂಗ್ರೆಸ್ ಶಾಸಕ ಶಿವಶಂಕರರೆಡ್ಡಿ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಆ ಪಕ್ಷದ ಮುಖಂಡರಲ್ಲದವರು ಬಸ್ ವ್ಯವಸ್ಥೆ ಮಾಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ.ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆ ಸಂದರ್ಭದಲ್ಲಿ ಉಪಸಭಾಧ್ಯಕ್ಷರಾಗಿದ್ದರು.
ಪುಟ್ಟಸ್ವಾಮಿ ಗೌಡರ ಬಣದಲ್ಲಿರುವ ಮುಖಂಡರು ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಪುಟ್ಟಸ್ವಾಮಿ ಗೌಡರು ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇವರೇಕೆ ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್‌ನಲ್ಲಿರುವ ಅತೃಪ್ತ ಮುಖಂಡರು ಪುಟ್ಟಸ್ವಾಮಿಗೌಡರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ‘ನನ್ನ ಭಾವಚಿತ್ರವಿರುವ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಅಳವಡಿಸಬೇಡಿ. ಆದರೆ ಬಸ್ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದಿದ್ದಾರೆ’ ಎಂದು ಅಹಿಂದ ಮುಖಂಡರೊಬ್ಬರು ತಿಳಿಸಿದರು.
ಮತ್ತೊಂದೆಡೆ ಕಾಂಗ್ರೆಸ್‌ನ 3 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.