ADVERTISEMENT

ದಂಪತಿ ಕರಗ ಹೊರುವ ‘ಬಂಡಿದ್ಯಾವರ’

ಒಕ್ಕಲಿಗ, ಹೊಸದ್ಯಾವರ ಒಕ್ಕಲಿಗರಿಂದ ಆಚರಣೆ

ಡಿ.ಜಿ.ಮಲ್ಲಿಕಾರ್ಜುನ
Published 8 ಮೇ 2024, 4:37 IST
Last Updated 8 ಮೇ 2024, 4:37 IST
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ಅವರ ಮನೆಯಲ್ಲಿರುವ ಅಪರೂಪದ 85 ವರ್ಷಗಳ ಹಿಂದಿನ ಬಂಡಿದ್ಯಾವರ ಕಾರ್ಯಕ್ರಮದ ಆಹ್ವಾನ ಪತ್ರಿಕೆ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ಅವರ ಮನೆಯಲ್ಲಿರುವ ಅಪರೂಪದ 85 ವರ್ಷಗಳ ಹಿಂದಿನ ಬಂಡಿದ್ಯಾವರ ಕಾರ್ಯಕ್ರಮದ ಆಹ್ವಾನ ಪತ್ರಿಕೆ   

ಶಿಡ್ಲಘಟ್ಟ: ವೈಶಾಖ ಮಾಸ ಬಂತೆಂದರೆ ಬಂಡಿದ್ಯಾವರ ಎಂಬ ಸಾಂಪ್ರದಾಯಿಕ ಆಚರಣೆ ಸಂಭ್ರಮ ಹಲವೆಡೆ ಕಂಡು ಬರುತ್ತದೆ. ಒಕ್ಕಲಿಗರು, ಅದರಲ್ಲೂ ಹೊಸದ್ಯಾವರ ಒಕ್ಕಲಿಗ ಸಮುದಾಯದ ಆಚರಣೆ ಇದಾಗಿದ್ದು, ದಂಪತಿ ತಮ್ಮ ಮಕ್ಕಳಿಗೆ ಹೂವು ಮುಡಿಸುವುದು ಆಚರಣೆಯ ಒಂದು ಭಾಗವಾಗಿದೆ.

ಇಂತಹ ಸಂವತ್ಸರ, ವೈಶಾಖ ಮಾಸ, ಕೃಷ್ಣ ಪಕ್ಷ ಎಂಬೆಲ್ಲ ವಿಷಯ, ಮಕ್ಕಳ ಹೆಸರನ್ನು, ಆಹ್ವಾನಿಸುವವರ ಹೆಸರನ್ನು ಒಳಗೊಂಡ ಲಗ್ನ ಪತ್ರಿಕೆಯಂತೆಯೇ ಆಹ್ವಾನಕ್ಕಾಗಿ ಮುದ್ರಿಸಿ, ಕರಗ ಮಹೋತ್ಸವಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ಆಶೀರ್ವದಿಸಬೇಕು ಎಂದು ಅದರಲ್ಲಿ ಕೋರಲಾಗುತ್ತದೆ. ಅಂದು ದಂಪತಿಯು ಕರಗವನ್ನು ಹೊತ್ತು ನೆಲದ ಮೇಲೆ ಹಾಸಿದ ಬಟ್ಟೆಯ ಮೇಲೆ ನಡೆದು ಗ್ರಾಮದಾಚೆ ಹೋಗುತ್ತಾರೆ. ಅಲ್ಲಿ ಕರಗಕ್ಕೆ ಪೂಜೆ ನೆರವೇರಿಸುತ್ತಾರೆ.

ಇಂತಹ ಆಚರಣೆಯ ಇತಿಹಾಸ ಸಾರುವ ಆಹ್ವಾನ ಪತ್ರಿಕೆಯನ್ನು ಮೇಲೂರಿನ ವ್ಯಕ್ತಿಯೊಬ್ಬರು 85 ವರ್ಷದಿಂದ ಕಾಪಿಟ್ಟುಕೊಂಡು ಬಂದಿದ್ದಾರೆ.

ADVERTISEMENT

ಈಗ್ಗೆ ಸುಮಾರು 85 ವರ್ಷಗಳ ಹಿಂದೆ ಅಂದರೆ 7 ಮೇ, 1939ರಲ್ಲಿ ಮೇಲೂರಿನ ಮಕ್ಕರಪ್ಪ, ಮಾಳಿಗೆ ಚಿಕ್ಕಬೈರಪ್ಪ, ಬಚ್ಚಪ್ಪ ಅವರ ವೆಂಕಟರಾಯಪ್ಪ ಮತ್ತು ಬಟ್ರೇನಹಳ್ಳಿ ವೆಂಕಟರಾಯಪ್ಪ ಅವರು ಬಂಡಿದ್ಯಾವರ ಆಚರಣೆಯ ಆಹ್ವಾನ ಪತ್ರಿಕೆ ಮುದ್ರಿಸಿದ್ದರು. ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ಅವರು ತಮ್ಮ ತಾತ ಮಾಳಿಗೆ ಚಿಕ್ಕಬೈರಪ್ಪ ಅವರು ಮುದ್ರಿಸಿದ್ದ ಈ ಆಹ್ವಾನಪತ್ರಿಕೆಯೆಂಬ ಇತಿಹಾಸದ ತುಣುಕನ್ನು ಜತನದಿಂದ ಇಟ್ಟುಕೊಂಡಿದ್ದಾರೆ.

‘ಕುಟುಂಬದವರೆಲ್ಲ ಒಂದೆಡೆ ಸೇರಿ ಆಚರಿಸುವ ಈ ಬಂಡಿ ದ್ಯಾವರಕ್ಕೆ ಸಾಕಷ್ಟು ವೆಚ್ಚ ಮಾಡಲಾಗುತ್ತದೆ. ಇದೊಂದು ವಿಶಿಷ್ಟ ಆಚರಣೆಯಾಗಿದೆ. ಕುಟುಂಬದವರು, ಸ್ನೇಹಿತರು, ಬಂಧು ಬಳಗವನ್ನು ಆಹ್ವಾನಿಸಲೆಂದು ಆಹ್ವಾನ ಪತ್ರಿಕೆಯನ್ನು ವ್ಯವಸ್ಥೆ ಮಾಡಲಾಗುತ್ತಿತ್ತು ಎಂಬುದಕ್ಕೆ ನಮ್ಮ ಮನೆಯಲ್ಲಿರುವ 85 ವರ್ಷಕ್ಕೂ ಹಿಂದಿನ ಆಹ್ವಾನ ಪತ್ರಿಕೆ ಸಾಕ್ಷಿ’ ಎನ್ನುತ್ತಾರೆ ರವಿಪ್ರಸಾದ್‌.

‘ನಮ್ಮ ತಂದೆ, ಬಿ.ಎಂ.ಕೃಷ್ಣಮೂರ್ತಿ ಆಗ ನಾಲ್ಕು ವರ್ಷದ ಮಗು. ಆಗ ಸುಮಾರು ಒಂದು ತಿಂಗಳ ಕಾಲ ಈ ಆಚರಣೆಯ ಸಿದ್ಧತೆ ನಡೆಯುತ್ತಿತ್ತು’ ಎನ್ನುತ್ತಾರೆ ಅವರು.

‘ಬಂಡಿಯ ಜತೆ ದಂಪತಿ ಕರಗ ಹೊತ್ತು ಸಾಗುವುದು. ಮಕ್ಕಳಿಗೆ ಕಿವಿ ಚುಚ್ಚುವುದು, ಹೂವು ಮುಡಿಸುವುದು ಮತ್ತಿತರ ವಿಶಿಷ್ಟ ಆಚರಣೆ ಬಂಡಿದ್ಯಾವರ ಉತ್ಸವದಲ್ಲಿ ಕಂಡುಬರುತ್ತದೆ. ಕುಟುಂಬದಲ್ಲಿ ಯಾವುದೇ ವ್ಯಕ್ತಿ ನಿಧನ ಹೊಂದಿದರೆ, ಆ ವರ್ಷದಲ್ಲಿ ಆಚರಣೆ ಮಾಡುವಂತಿಲ್ಲ ಎಂಬ ನಿಯಮವೂ ಇದೆ’ ಎಂದು ತಿಳಿಸಿದರು.

ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಬಂಡಿದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಈ ಅಪರೂಪದ ಆಹ್ವಾನ ಪತ್ರಿಕೆಯನ್ನು ಕಂಡಾಗ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರುತ್ತದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.